ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸೊಪ್ಪು ಮೇಳ’ದಲ್ಲಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಶ್ರೀವತ್ಸ ಗೋವಿಂದರಾಜು, ಜಿ.ಎಲ್.ಮುರಳೀಧರ ಗುಂಗುರುಮಳೆ, ಶ್ರೀವತ್ಸ ಇನ್ನಿತರರಿದ್ದರು
ಮೈಸೂರು: ಮಕ್ಕಳಿಗೆ ದೇಸಿಯ ಸೊಪ್ಪು ತಳಿಗಳ ಅರಿವು ಮೂಡಿಸಬೇಕು. ದೇಸಿ ಪರಂಪರೆಗಳ ಪರಿಚಯ ಮಾಡಿಕೊಡಬೇಕು ಎಂದು ಬೆಂಗಳೂರಿನ ಚಿಗುರು ಇಕೋ ಸ್ಪೇಸ್‌ನ ಶ್ರೀವತ್ಸ ಗೋವಿಂದರಾಜು ಹೇಳಿದರು.
ಸಹಜ ಸಮೃದ್ಧ ಸಂಸ್ಥೆ, ಯುಸಿಂಗ್ ಡೈವರ್ಸಿಟಿ, ಹುಲಿಕಾಡು ರೈತ ಉತ್ಪಾದಕರ ಕಂಪನಿ ಹಾಗೂ ಐಸಿಎಆರ್‌ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡುದಿನ ಆಯೋಜಿಸಿದ್ದ ‘ಸೊಪ್ಪು ಮೇಳ’ದಲ್ಲಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ನಾವು ಗಡಿಗಳನ್ನು ನಿರ್ಮಿಸಿ ಮಕ್ಕಳನ್ನು ಕಟ್ಟಿಹಾಕುತ್ತಿದ್ದೇವೆ. ಅವರ ಸೃಜನಶೀಲತೆಗೆ ಮುಕ್ತ ಅವಕಾಶವನ್ನು ನೀಡಬೇಕಿದೆ. ಕೃಷಿ ತಳಿಗಳು ಮತ್ತು ಸೊಪ್ಪುಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದಿರುವ ಮಕ್ಕಳಿಗೆ, ತಮ್ಮ ಕಾಲಡಿಯಲ್ಲಿ ಕಳೆದ ಹೋಗುತ್ತಿರುವ ಸೊಪ್ಪುಗಳ ಅರಿವೇ ಇಲ್ಲ. ಶಾಲೆಯ ಪಠ್ಯ ಪುಸ್ತಕಗಳಲ್ಲೂ ಸ್ಥಳೀಯ ಜೀವ ವೈವಿಧ್ಯದ ಕುರಿತು ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಸೊಪ್ಪು ಮೇಳದ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 21 ವಿದ್ಯಾರ್ಥಿಗಳು ಭಾಗವಹಿಸಿ, ತಾವು ಕಂಡ ಸೊಪ್ಪಿನ ಲೋಕವನ್ನು ಬಣ್ಣಗಳ ಮೂಲಕ ಸುಂದರವಾಗಿ ಅನಾವರಣಗೊಳಿಸಿದರು. ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರದ ಜಿ.ಎಲ್.ಮುರಳೀಧರ ಗುಂಗುರುಮಳೆ ಹಾಗೂ ಸಹಜ ಕೃಷಿಕ ಶ್ರೀವತ್ಸ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಕಿರಿಯರ ವಿಭಾಗದಲ್ಲಿ ಎಸ್.ದೃಶ್ಯ (ಪ್ರಥಮ), ಎಲ್.ವರ್ಣಿಕಾ(ದ್ವಿತೀಯ) ಮತ್ತು ಎಂ.ಪಿ.ರಿತವ್(ತೃತೀಯ) ಬಹುಮಾನ ಪಡೆದರು. ಹಿರಿಯರ ವಿಭಾಗದಲ್ಲಿ ಎಲ್.ಭವಿತಾ(ಪ್ರಥಮ), ಗೋಕುಲ್ ಆರ್ಯನ್ (ದ್ವಿತೀಯ), ಆರ್.ಕುಶಾಲ್ (ತೃತೀಯ) ಸ್ಥಾನ ಗಳಿಸಿದರು.
ಎರಡು ದಿನಗಳ ಕಾಲ ನಡೆದ ಈ ಮೇಳದಲ್ಲಿ 200ಕ್ಕೂ ಹೆಚ್ಚು ಬಗೆಯ ಅಪರೂಪದ ಸೊಪ್ಪುಗಳನ್ನು ಪ್ರದರ್ಶಿಸಲಾಯಿತು. ಎಚ್.ಡಿ.ಕೋಟೆ, ಕನಕಪುರ, ನಾಗರಹೊಳೆ, ಕುಂದಗೋಳ ಹಾಗೂ ಕೇರಳದ ವಯನಾಡಿನ ಕೃಷಿಕ ಗುಂಪುಗಳು ವಿವಿಧ ರೀತಿಯ ಔಷಧೀಯ ಹಾಗೂ ಕಾಡು ಸೊಪ್ಪುಗಳನ್ನು ತಂದಿದ್ದರು.
ಭಾನುವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ರೈತರು ತಂದಿದ್ದ ತರಹೇವಾರಿ ಸೊಪ್ಪುಗಳು ಖಾಲಿಯಾದವು.
ಸೀಗೆ ಸೊಪ್ಪಿಗೆ ವಿಶೇಷ ಬೇಡಿಕೆ ಇದ್ದದ್ದು ಕಂಡುಬಂತು. ’ನಮ್ಮ ಊರಿನ ಬೇಲಿಯಲ್ಲಿ ತಾನಾಗೇ ಬೆಳೆಯುವ ಸೀಗೆಸೊಪ್ಪು ಇಲ್ಲಿ ಕಂತೆಗೆ ನೂರು ರೂಪಾಯಿಗೆ ಮಾರಾಟವಾಯಿತು. ಮುಂದಿನ ವರ್ಷ ಹೆಚ್ಚು ಸೊಪ್ಪುಗಳ ಜತೆಗೆ ಮೇಳಕ್ಕೆ ಬರುತ್ತೇವೆ ಎಂದು ಕುಂದಗೋಳದ ರೈತ ಮಹಿಳೆ ನೀಲಮ್ಮಾ ಖುಷಿಯಿಂದ ಹೇಳಿದರು.
ಹುಲಿಕಾಡು ರೈತ ಕಂಪನಿಯವರ ಸಹಕಾರದಿಂದ ನಮ್ಮ ಊರಿನ ಹೊಲಗದ್ದೆಗಳಿಂದ ಎರಡು ಮೂಟೆ ಬೆರಕೆ ಸೊಪ್ಪು ಸಂಗ್ರಹಿಸಿ ತಂದಿದ್ದೆ. ಎಲ್ಲ ಖಾಲಿಯಾಯಿತು ಎಂದು ಎಚ್.ಡಿ.ಕೋಟೆ ತಾಲೂಕಿನ ನೂರಲಕುಪ್ಪೆ ಗ್ರಾಮದ ನಾಗಮ್ಮಾ ತಿಳಿಸಿದರು
ಅಜ್ಜಿಯ ಮಡಿಲು, ಸೊಪ್ಪಿನ ಕಡಲು ಖ್ಯಾತಿಯ ಮುರುಳೀಧರ ಗುಂಗುರಮಳೆ ವಿವಿಧ ಬಗೆಯ ಸೊಪ್ಪುಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.