ಕೆಎಸ್ಒಯುದಲ್ಲಿ ಭ್ರಷ್ಟಾಚಾರ: ತನಿಖೆಗೆ ಆದೇಶ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯವಾಣಿ ಫಲಶ್ರುತಿ
  • ನಿವೃತ್ತ ನ್ಯಾ.ಬಿ.ಎ.ಪಾಟೀಲ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ನಿಯೋಜನೆ
  • ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ
  • ಒಂದು ತಿಂಗಳೊಗೆ ವರದಿ ಸಲ್ಲಿಕೆಗೆ ಸೂಚನೆ
  • ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎನ್.ಆರ್.ನಿರಂಜನ ನೇತೃತ್ವದ ವಿಚಾರಣಾ ಸಮಿತಿಯ ವರದಿಯ ಶಿಫಾರಸಿನ ಆಧಾರದ ಮೇಲೆ ಈ ಕ್ರಮ
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರನ್ನು ತನಿಖಾ ಸಮಿತಿಗೆ ನೇಮಿಸಲಾಗಿದ್ದು, ಒಂದು ತಿಂಗಳೊಗೆ ವರದಿ ಸಲ್ಲಿಕೆ ಮಾಡುವಂತೆ ಆದೇಶದಲ್ಲಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸೂಚಿಸಿದ್ದಾರೆ. ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎನ್.ಆರ್.ನಿರಂಜನ ನೇತೃತ್ವದ ವಿಚಾರಣಾ ಸಮಿತಿಯ ವರದಿಯ ಶಿಫಾರಸಿನ ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಏನಾಗಿತ್ತು?: 

ಮಂಜೂರಾದ ಖಾಲಿ ಹುದ್ದೆಗಳಿಗಿಂತ ಅಧಿಕವಾಗಿ ತುಂಬಲಾಗಿರುವ ಹೆಚ್ಚುವರಿ ತಾತ್ಕಾಲಿಕ ಸಿಬ್ಬಂದಿಯನ್ನು ತೆಗೆದುಹಾಕಬೇಕು. 
ಜತೆಗೆ, ಕಠಿಣ ಆರ್ಥಿಕ ಶಿಸ್ತನ್ನು ಜಾರಿಗೊಳಿಸುವ ಮೂಲಕ ವಿವಿ ಆವರ್ತಕ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಜತೆಗೆ, ಮುಕ್ತ ವಿವಿಯ ವೇತನಾನುದಾನ ಕೋರಿಕೆ ನಿರಾಕರಿಸಲಾಗಿದೆ ಎಂಬ ವಿಷಯವನ್ನೂ ತಿಳಿಸಲಾಗಿತ್ತು.
 ಆದಾಗ್ಯೂ ನಿರಂತರವಾಗಿರುವ ನಿಯಮಬಾಹಿರ ಅರೆಕಾಲಿಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಕ್ರಮವನ್ನು ಖಂಡಿಸಿ ಕರಾಮುವಿಯ ಕಾಯಂ ಸಿಬ್ಬಂದಿ ನಿಕಟಪೂರ್ವ ಕುಲಸಚಿವ ಡಾ.ಕೆ.ಬಿ.ಪ್ರವೀಣ ಅವರ ಕೊಠಡಿ ಬಾಗಿಲಿಗೆ ನೋಟಿನ ಹಾರ ಹಾಕಿ ಪ್ರತಿಭಟನೆ ನಡೆಸಿದ್ದರು.
ಇದು ವಿಧಾನಮಂಡಲದ ಅಧಿವೇಶನದಲ್ಲೂ ಸದ್ದು ಮಾಡಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣನೆ ಮಾಡಿದ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2025ರ ಮಾರ್ಚ್ 21ರಂದು ವಿಶ್ರಾಂತ ಕುಲಪತಿ ಪ್ರೊ.ಎನ್.ಆರ್.ನಿರಂಜನ ಅವರನ್ನು ತನಿಖೆಗೆ ನಿಯೋಜಿಸಿತ್ತು. 
ಅವರು ಕರಾಮುವಿಗೆ ಭೇಟಿ ನೀಡಿ ವಿವಿಧ ಕಡತ ಅವಲೋಕಿಸಿ ಮಾಹಿತಿ ಕಲೆ ಹಾಕಿದ್ದರು. ಜತೆಗೆ, ಸಂಬಂಧಿಸಿದ ಅಧಿಕಾರಿಗಳು, ನೌಕರರೊಂದಿಗೆ ಸಮಾಲೋಚಿಸಿದ್ದರು. ಇದನ್ನು ಆಧರಿಸಿ ವರದಿಯನ್ನು ತಯಾರಿಸಿ ಪೂರಕ ದಾಖಲೆಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರು. ಈ ವರದಿ ಅನುಸಾರ ತನಿಖೆ ನಡೆಸಲು ರಾಜ್ಯ ಸರ್ಕಾರವು ರಾಜ್ಯಪಾಲರನ್ನು ಕೋರಿತ್ತು. 
ಇದಕ್ಕೆ ಅನುಮತಿ ನೀಡಿರುವ ರಾಜ್ಯಪಾಲರು, ಸತ್ಯ ಶೋಧನಾ ಸಮಿತಿ ನಿಯೋಜನೆ ಮಾಡಿದ್ದು, ಕೇಳಿಬಂದಿರುವ ಆರೋಪಗಳು, ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಇದು ತನಿಖೆ ಮಾಡಬೇಕು ಎಂದು ತಿಳಿಸಿದ್ದಾರೆ. ಈಗಾಗಲೇ ಈ ವರದಿ ಆಧರಿಸಿ ಆಡಳಿತಾತ್ಮಕ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್ ವರ್ಗಾವಣೆ ಮಾಡಲಾಗಿದೆ.

ಯಾವುದರ ಕುರಿತು ತನಿಖೆ?

  • *ಮಂಜೂರಾದ ಹುದ್ದೆಗಳಿಗಿಂತ ತಾತ್ಕಾಲಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮತ್ತು ಪದನಾಮಗಳ ಬದಲಾವಣೆ. 
  • ಅನಗತ್ಯವಾಗಿ ಪ್ರಾದೇಶಿಕ ಕೇಂದ್ರ ತೆರೆದಿರುವುದು, ಅವುಗಳಿಗೆ ತಾತ್ಕಾಲಿಕ ನಿರ್ದೇಶಕರ ನೇಮಕಾತಿ 
  • ರಾಜ್ಯ ಸರ್ಕಾರ ಮತ್ತು ಕರಾಮುವಿ ವ್ಯವಸ್ಥಾಪನಾ ಮಂಡಳಿಯ ಅನುಮೋದನೆ ಇಲ್ಲದೆ ಹುದ್ದೆಗಳು ಸೃಷ್ಟಿ 
  • ಖಾಸಗಿ ಅಧ್ಯಯನ ಕೇಂದ್ರ ತೆರೆಯಲು ಅನುಮೋದನೆ ಕೊಟ್ಟಿರುವುದು 
  • ದೆಹಲಿಯ ವರ್ಚುವಲ್ ಎಜುಕೇಷನ್ ಟ್ರಸ್ಟ್‌ಗೆ 1.71 ಕೋಟಿ ರೂ. ನೀಡಿರುವ ಠೇವಣಿ

ವರ್ಷಕ್ಕೆ 79 ಕೋಟಿ ರೂ.ನಷ್ಟ

ನಿರಂಜನ್ ಅವರ ವರದಿಯಲ್ಲಿ ಅನೇಕ ಆರೋಪಗಳ ಕುರಿತು ಉಲ್ಲೇಖಿಸಲಾಗಿದೆ. ಅದರಲ್ಲಿ ಬೇಕಾಬಿಟ್ಟಿಯಾಗಿ ತಾತ್ಕಾಲಿಕ ಸಿಬ್ಬಂದಿ ನೇಮಕಾತಿ, ಭ್ರಷ್ಟಾಚಾರವೇ ಮುಖ್ಯ ವಿಷಯ. ಮಂಜೂರಾಗಿರುವ 709 ಹುದ್ದೆಗಳ ಪೈಕಿ 342 ಹುದ್ದೆಗಳು ಭರ್ತಿಯಾಗಿವೆ. 
367 ಹುದ್ದೆಗಳು ಖಾಲಿ ಇವೆ. ಇಷ್ಟೇ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವ ಬದಲು 1379 ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. 1012 ಸಿಬ್ಬಂದಿ ಅನಗತ್ಯವಾಗಿದ್ದಾರೆ. ವರ್ಷಕ್ಕೆ ಈ ಎಲ್ಲ ಸಿಬ್ಬಂದಿಗೆ ವೇತನಕ್ಕಾಗಿ 69.83 ಕೋಟಿ ರೂ. ಮತ್ತು ಪಿಂಚಣಿಗಾಗಿ 9.16 ಕೋಟಿ ರೂ. ಸೇರಿದಂತೆ 79 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಅನವಶ್ಯಕವಾಗಿ 36 ಪ್ರಾದೇಶಿಕ ಕೇಂದ್ರ ಸ್ಥಾಪನೆ 

ಮಂಜೂರಾಗಿರುವ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕ ಹುದ್ದೆಗಳಿರುವುದು 10 ಮಾತ್ರ. ಆದರೆ, ಅನವಶ್ಯಕವಾಗಿ 36 ಪ್ರಾದೇಶಿಕ ಕೇಂದ್ರ ಸ್ಥಾಪಿಸಿದ್ದು, 41 ಪ್ರಾದೇಶಿಕ ನಿರ್ದೇಶಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಾದೇಶಿಕ ನಿರ್ದೇಶಕರ ನೇಮಕಾತಿ ನ್ಯಾ.ಭಕ್ತವತ್ಸಲ ವರದಿಯಲ್ಲಿ ಉಲ್ಲೇಖವಾಗಿದ್ದು, ನಗರದ ಲೋಕಾಯುಕ್ತ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದೆ. ನಷ್ಟ ವಸೂಲಾತಿಗೆ ತಪ್ಪಿತಸ್ಥರ ವಿರುದ್ಧ ಇಲಾಖಾ ವಿಚಾರಣೆ ಮಾಡಲಾಗಿದೆ. 

ವಿಜಯವಾಣಿಯಲ್ಲಿ ವರದಿ ಪ್ರಕಟ

‘ವಿಜಯವಾಣಿ’ಯಲ್ಲಿ 2025ರ ಜನವರಿ 2ರಂದು ‘ಮುಕ್ತ ವಿವಿಯಲ್ಲಿ ಅರೆಕಾಲಿಕ ಸಿಬ್ಬಂದಿಯದ್ದೇ ಕಾರುಬಾರು’ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದರ ಫಲವಾಗಿ ಡಾ.ಎನ್.ಆರ್.ನಿರಂಜನ ನೇತೃತ್ವದ ವಿಚಾರಣಾ ಸಮಿತಿ ನೇಮಿಸಲಾಗಿತ್ತು. ಸಮಿತಿಯ ಶಿಫಾರಸಿನ ಕುರಿತು ಅದೇ ವರ್ಷ ಜೂನ್ 14ರಂದು ‘ಮುಕ್ತ ವಿವಿಯಲ್ಲಿ ಬೇಕಾಬಿಟ್ಟಿ ನೇಮಕಾತಿ: ನ್ಯಾಯಾಂಗ ತನಿಖೆ’ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net