ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿ ಮೈಸೂರಿನ ವಿದ್ಯಾವರ್ಧಕ ಕಾಲೇಜು ಆಫ್ ಇಂಜಿನಿಯರಿಂಗ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಗ್ರಾ.ಪಂ.ಸದಸ್ಯ ಜಿ.ಮಹದೇವ್ ಉದ್ಘಾಟಿಸಿದರು. ಡಾ.ಬಾಬು ರಾಜೇಂದ್ರ ಪ್ರಸಾದ್, ಪ್ರಭಾಕರ್, ಜಿ.ವಿ.ಸೌಮ್ಯ, ಡಾ.ಕಿರಣ್‌ಕುಮಾರ್ ಇತರರಿದ್ದಾರೆ.
ಹುಣಸೂರು:ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದ ಕೊಡುಗೆ ನೀಡುವ ಮನೋಗುಣ ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕ ಡಾ.ಬಾಬು ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಸೇವೆ ಎನ್ನುವುದು ಕೇವಲ ಹವ್ಯಾಸವಾಗಬಾರದು. ಪ್ರಚಾರಕ್ಕೂ ಇರಬಾರದು. ಸೇವೆ ನಮ್ಮ ವೃತ್ತಿಪರತೆಯನ್ನು ತೋರಬೇಕು. ಈ ದೇಶದ ಪ್ರಜೆಯಾಗಿ ದೇಶಕ್ಕಾಗಿ ದುಡಿಯುವ ಮನಸು ಹೊಂದಿರಬೇಕು. ಪರಿಸರ ಕಾಳಜಿ, ಕಾನೂನು ಪಾಲನೆ ಅನುಸರಿಸಿಬೇಕು, ತನ್ನ ಜತೆಗೆ ತಮ್ಮ ಸುತ್ತಮುತ್ತಲಿನವರಿಗೂ ಇವುಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಿದಲ್ಲಿ ದೇಶಸೇವೆಯ ಸಾರ್ಥಕತೆ ಸಿಗುತ್ತದೆ ಎಂದರು.
ಗ್ರಾ.ಪಂ.ಅಧ್ಯಕ್ಷ ಜಿ.ಮಹದೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದಿನ ಜೊತೆಗೆ ಶಿಸ್ತು ಮತ್ತು ಸಂಯಮವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ನೀವು ಕೂಡ ಜೀವನದಲ್ಲಿ ನಿರಂತರವಾಗಿ ಸೇವೆಯನ್ನು ಸಮಾಜಕ್ಕೆ ಮತ್ತು ದೇಶಕ್ಕೆ ಸಲ್ಲಿಸಿರಿ ಎಂದು ಸಲಹೆ ನೀಡಿದರು.
ಶಿಬಿರಾಧಿಕಾರಿ ಆರ್.ಕಾರ್ತಿಕ್ ಮಾತನಾಡಿ, ವಿದ್ಯಾರ್ಥಿಗಳು ಎನ್ ಎಸ್ ಎಸ್ ಬರಿ ಸ್ವಚ್ಚತಾ ಶಿಬಿರ ಎಂದು ತಿಳಿದುಕೊಳ್ಳದೆ ತಮ್ಮ ಬದುಕಿನ ಅಮೂಲ್ಯ ದಾರಿಯ ಅರಿವೆಂದು ತಿಳಿಯಿರಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಪ್ರಭಾಕರ್, ಪ್ರಾಂಶುಪಾಲ ಡಾ.ಬಿ ಸದಾಶಿವೇಗೌಡ, ಪ್ರಾಧ್ಯಾಪಕರುಗಳಾದ ಡಾ.ಕಿರಣ್ ಕುಮಾರ್, ಸೌಮ್ಯ.ಜಿ.ವಿ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.