ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ನಿಗಮ ಕಚೇರಿಯಲ್ಲಿ ಶನಿವಾರ ಎಂ.ಎಸ್.ಅರ್ಚನಾ ಧ್ವಜಾರೋಹಣ ನೆರವೇರಿಸಿದರು. ಎಲ್.ಲೋಕೇಶ್, ಶರಣಮ್ಮ ಎಸ್.ಜಂಗಿನ, ಜಿ.ರೇಣುಕಾ, ಲಿಂಗರಾಜಮ್ಮ, ಡಾ.ಬಿ.ಆರ್.ರೂಪಾ ಇದ್ದರು.
ಸಿಬ್ಬಂದಿಗೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್.ಅರ್ಚನಾ ಸಲಹೆ
ಗ್ರಾಹಕರಿಗೆ ನಿರಂತರ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಕಾರ್ಯನಿರ್ವಹಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್.ಅರ್ಚನಾ ಸಲಹೆ ನೀಡಿದರು.
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ನಿಗಮ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರೃಕ್ಕಾಗಿ ಜೀವ ಹಾಗೂ ಜೀವನವನ್ನೇ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅವರು ಕಂಡ ಬಲಿಷ್ಠ ಹಾಗೂ ಸದೃಢ ಭಾರತದ ಕನಸನ್ನು ನನಸಾಗಿಸುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ ಎಂದರು.
ದೇಶದ ಆರ್ಥಿಕ ಅಭಿವೃದ್ಧಿ, ಕೈಗಾರಿಕೆ, ಕೃಷಿ ಹಾಗೂ ಜನಜೀವನದಲ್ಲಿ ವಿದ್ಯುತ್ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆರ್ಥಿಕ ಪ್ರಗತಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ನಿರಂತರ ವಿದ್ಯುತ್ ಪೂರೈಕೆ ಅಗತ್ಯ. ಹೀಗಾಗಿ ಸೆಸ್ಕ್ ಸಿಬ್ಬಂದಿ ನಿಷ್ಠೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸಂಸ್ಥೆಯ ಹಾಗೂ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಅಲ್ಲದೆ ಅನುಕಂಪದ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಮೃತರ ಕುಟುಂಬಕ್ಕೆ 1.06 ಕೋಟಿ ರೂ.ವಿಮೆ ಪರಿಹಾರ:
ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಲೈನ್‌ಮನ್ ಮಂಜುನಾಥ್ ಹಾಗೂ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಿರಿಯ ಇಂಜಿನಿಯರ್ ಕಿರಣ್ ಕುಮಾರ್ ಅವರ ಕುಟುಂಬಗಳಿಗೆ ತಲಾ 1.06 ಕೋಟಿ ರೂ.ವಿಮೆ ಪರಿಹಾರದ ಚೆಕ್ ವಿತರಿಸಲಾಯಿತು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್.ಲೋಕೇಶ್, ಮುಖ್ಯ ಪ್ರಧಾನ ವ್ಯವಸ್ಥಾಪಕಿ ಶರಣಮ್ಮ ಎಸ್. ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕಿ ಡಾ.ಬಿ.ಆರ್.ರೂಪಾ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.