ಮೈಸೂರು: ಪ್ರವಾಸೋದ್ಯಮ ಇಲಾಖೆ ಪಾರಂಪರಿಕ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಕೈಗೊಂಡಿದ್ದ ಟಾಂಗಾ ನಿಲ್ದಾಣದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಲ್ಲಿ ಟಾಂಗಾ ಪರಂಪರೆ ಉತ್ತೇಜಿಸುವ ನಿಟ್ಟಿನಲ್ಲಿ ಅರಮನೆ ಮುಂಭಾಗದ ಚಾಮರಾಜ ವೃತ್ತದ ಸಮೀಪ ಪುರಭವನದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಪಾದಚಾರಿ ಮಾರ್ಗ ರಾಜಪಥದಲ್ಲಿ ಟಾಂಗಾ ನಿಲ್ದಾಣ, ಟಿಕೆಟ್ ಕೌಂಟರ್ ನಿರ್ಮಿಸಲಾಗುತ್ತಿತ್ತು. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
18 ಕೋಟಿ ರೂ. ವೆಚ್ಚದಲ್ಲಿ ಟಾಂಗಾ ಪಾರಂಪರಿಕತೆ ಸಂರಕ್ಷಿಸಿ, ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದ್ದು, ವಿವಿಧೆಡೆ ಇರುವ ಟಾಂಗಾ ನಿಲ್ದಾಣಗಳನ್ನು ನವೀಕರಣ, ಪ್ರಮುಖ ಪ್ರವಾಸಿ ತಾಣಗಳಲ್ಲಿ ಟಾಂಗಾ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಅಂತೆಯೇ, ಅರಮನೆ ಮುಂಭಾಗದ ಚಾಮರಾಜ ವೃತ್ತದ ಬಳಿ ಪುರಭವನದ ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಾಜಪಥದ ಪಾದಚಾರಿ ಮಾರ್ಗದಲ್ಲಿ ಟಾಂಗಾ ನಿಲ್ದಾಣ ನಿರ್ಮಿಸಲು ಹೋಗಿ ಅವಾಂತರ ಮಾಡಲಾಗಿದೆ.
ಎರಡೂ ಕಡೆಯಿಂದ ಹೆಚ್ಚಾಗಿ ಜನ ಓಡಾಡುವ ಸ್ಥಳದಲ್ಲೇ ಟಾಂಗಾ ನಿಲ್ದಾಣ ನಿರ್ಮಿಸಲು ಮುಂದಾಗಿದ್ದು, ಎರಡೂ ಬದಿಯಲ್ಲೂ ಪಾದಚಾರಿ ಮಾರ್ಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಜನರು, ವಾಹನ ಸಂಚಾರದ ನಡುವೆ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಚಾಮರಾಜ ವೃತ್ತ, ಪುರಭವನದ ಆವರಣ, ಆಶೋಕರಸ್ತೆ ಜಂಕ್ಷನ್‌ನಲ್ಲಿ ಅಪಾರ ಸಂಖ್ಯೆಯ ಜನರು ಸೇರುತ್ತಾರೆ. ಟಾಂಗಾ ನಿಲ್ದಾಣ ನಿರ್ಮಾಣದಿಂದ ಜಂಬೂಸವಾರಿ ವೀಕ್ಷಣೆಗೆಂದು ಬರುವ ಅಪಾರ ಸಂಖ್ಯೆ ಜನರಿಗೂ ತೊಂದರೆಯಾಗಲಿದೆ. ಈ ಕಾಮಗಾರಿಗೆ ವಿರೋಧ ವ್ಯಕ್ತವಾಗಿದೆ.
‘ಅರಮನೆ ಬಳಿ ನಿರ್ಮಿಸಿರುವ ಟಾಂಗಾ ಟಿಕೆಟ್ ಕೌಂಟರ್ ಫ್ಲೈವುಡ್‌ನಿಂದ ಮಾಡಲಾಗುತ್ತದೆ. ಕೆಳಗೆ ಬೇಸ್‌ಮೆಂಟ್ ಅಷ್ಟೇ ಸಿಮೆಂಟ್‌ನಿಂದ ನಿರ್ಮಿಸಲಾಗುತ್ತಿದೆ. ಆಕ್ಷೇಪ ವ್ಯಕ್ತವಾದ ನಿಟ್ಟಿನಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ ತಿಳಿಸಿದ್ದಾರೆ.