ಜೀವವೈವಿಧ್ಯದ ತಾಣ ಕೆರೆಗಳ ಸಂರಕ್ಷಣೆ ಜನರ ಹೊಣೆ

ಮೈಸೂರು ಸಾಹಿತ್ಯ ಸಂಭ್ರಮ’ ಸಮಾರಂಭದಲ್ಲಿ ‘ಮೈಸೂರಿನ ಪರಿಸರ, ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ’ ಗೋಷ್ಠಿ
ಮೈಸೂರು ಸಾಹಿತ್ಯ ಸಂಭ್ರಮ’ ಸಮಾರಂಭದಲ್ಲಿ ‘ಮೈಸೂರಿನ ಪರಿಸರ, ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ’ ಗೋಷ್ಠಿ
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಪರಿಸರವಾದಿಗಳ ಪ್ರತಿಪಾದನೆ
  • ಉಸಿರುಗಟ್ಟಿಸಿ ಅಳಿವಿನಂಚಿನತ್ತ ತಳ್ಳದಿರಿ
ಮೈಸೂರು: ಜೀವವೈವಿಧ್ಯತೆಯ ತಾಣವಾಗಿರುವ ಕೆರೆಗಳು ಮೈಸೂರಿನ ಶ್ವಾಸಕೋಶ. ಅವುಗಳನ್ನು ಉಸಿರುಗಟ್ಟಿಸಿ ಅಳಿವಿನಂಚಿನತ್ತ ತಳ್ಳಲಾಗುತ್ತಿದ್ದು, ಇವುಗಳ ಸಂರಕ್ಷಣೆಗೆ ಕೇವಲ ಸರ್ಕಾರಿ ಕಡತಕ್ಕೆ ಸೀಮಿತವಾಗಬಾರದು. ಅದು ನಾಗರಿಕರ ಹೊಣೆಗಾರಿಕೆಯೂ ಹೌದು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.
2ನೇ ದಿನವಾದ ಭಾನುವಾರ ‘ಮೈಸೂರು ಸಾಹಿತ್ಯ ಸಂಭ್ರಮ’ ಸಮಾರಂಭದಲ್ಲಿ ‘ಮೈಸೂರಿನ ಪರಿಸರ, ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ’ ಗೋಷ್ಠಿಯಲ್ಲಿ ವ್ಯಕ್ತವಾದ ಒಟ್ಟಾರೆ ಅಭಿಮತ ಇದು.
ಪರಿಸರವಾದಿ ಮೇಜರ್ ಸುಧೀರ್ ಒಂಬತ್ಕೆರೆ ಮಾತನಾಡಿ, ನೈಸರ್ಗಿಕ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲಕರ್ತವ್ಯ. ಸಂವಿಧಾನ ಆರ್ಟಿಕಲ್ 48ಎ ಇದನ್ನೇ ಪ್ರತಿಪಾದಿಸುತ್ತದೆ. ಅಧಿಕಾರಿಗಳದ್ದು ಕರ್ತವ್ಯದೊಂದಿಗೆ ಜವಾಬ್ದಾರಿವೂ ಹೌದು. 
ಆದರೆ, ಮಣಿಪಾಲ್ ಆಸ್ಪತ್ರೆ ಬಳಿ ಮತ್ತು ಕುಕ್ಕರಹಳ್ಳಿ ಕೆರೆ ಬಳಿ ನಡೆಯುತ್ತಿರುವ ಮೇಲ್ಸೇತುವೆಯಂತಹ ಯೋಜನೆಗಳು ಮೈಸೂರಿನ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಮೈಸೂರಿನ ಪರಿಸರ, ಹಸಿರು ವಲಯ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಇಲ್ಲವಾದರೆ ಭವಿಷ್ಯ ಕಷ್ಟಕರವಾಗಲಿದೆ ಎಂದು ಎಚ್ಚರಿಸಿದರು.
ಜಲತಜ್ಞ ಯು.ಎನ್.ರವಿಕುಮಾರ್ ಮಾತನಾಡಿ, ಪಾಂಡವರ ಪತ್ನಿ ದ್ರೌಪದಿಯಂತೆ ನಮ್ಮ ಕೆರೆಗಳು. ಅನೇಕ ಗಂಡಂದಿರು. ಆದರೆ, ದ್ರೌಪದಿಯ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳಲ್ಲ. ಹಾಗೆಯೇ, ಅನೇಕ ಇಲಾಖೆಗಳಿವೆ. ಆದರೆ, ಯಾವುದೂ ಕೆರೆಗಳ ಸಂರಕ್ಷಣೆ ಜವಾಬ್ದಾರಿ ತೆಗೆದುಕೊಳ್ಳಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನೀರಿನ ಸಂರಕ್ಷಣೆಯೇ ಮರೆತುಹೋಗಿದೆ. ಜನರು ನದಿಯಿಂದ ನೀರು ತರುವಾಗ ಕಾವೇರಿಮ್ಮ ಆಗಿದ್ದಳು. ಪೂಜಿಸುತ್ತಿದ್ದರೂ ಸಹ. ಆದರೀಗ, ನಳದಲ್ಲಿ ಬರುವ ನೀರಿನಿಂದಾಗಿ ಆಕೆ ಕಾವೇರಿಯಾಗಿದ್ದಾಳೆ. ಜಲದ ಮಹತ್ವ ಈಗಿನ ಜನರಿಗಿಲ್ಲ. ಹೀಗಾಗಿ, ಪರಿಸರ, ಕೆರೆ ಸಂರಕ್ಷಣೆಗಳೆಲ್ಲ ಜೀವನದ ಶಿಕ್ಷಣವಾಗಬೇಕು. ಆಗಲೇ ಬದಲಾವಣೆ ಸಾಧ್ಯ ಎಂದರು.
ಪರಿಸರವಾದಿ ಪರಶುರಾಮೇಗೌಡ ಮಾತನಾಡಿ, ರಾಜ್ಯದಲ್ಲಿರುವ ನದಿಗಳ ನೀರು ಕುಡಿಯಲು ಯೋಗ್ಯವಲ್ಲ. ಕೆಲ ನದಿಗಳ ನೀರು ಸ್ನಾನಕ್ಕೂ ಯೋಗ್ಯವಲ್ಲ ಎಂದು ವೈಜ್ಞಾನಿಕವಾಗಿ ರುಜುವಾತಾಗಿದೆ. ಅಭಿವೃದ್ಧಿಗಾಗಿ ಮರಗಳ ಹನನ ಎಲ್ಲೆಡೆ ಅವ್ಯಾಹತವಾಗಿ ಸಾಗಿದೆ. 
ಅತಿಯಾದ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಮಣ್ಣೂ ವಿಷವಾಗಿದೆ. ಅಂತರ್ಜಲ ಕುಸಿದಿದೆ. ಪ್ಲಾಸ್ಟಿಕ್, ಕಸ ಇದೀಗ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದನ್ನೆಲ್ಲ ತಡೆಗೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಹೇಳಿದರು. ಡಾ.ಎಚ್.ಎಸ್.ಚಂಪಾ ಸಂವಾದವನ್ನು ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net