ಕಾಂಗ್ರೆಸ್ ಪಕ್ಷದೊಳಗೇ ಶಾಸಕರ ಖರೀದಿ: ಛಲವಾದಿ ನಾರಾಯಣಸ್ವಾಮಿ ಆರೋಪ

ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಮೂರು ಬಣಗಳ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ
  • ಬೆಂಗಳೂರಿನಲ್ಲಿ ಶಾಸಕರನ್ನು ಕೊಂಡುಕೊಳ್ಳಲು ಖರೀದಿ ಕೇಂದ್ರ
  • ಕಾಂಗ್ರೆಸ್ ಸುಡುವ ಮನೆ. ಅದಕ್ಕೆ ಭವಿಷ್ಯ ಇಲ್ಲ.
ಮೈಸೂರು: ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷದೊಳಗೇ ಶಾಸಕರ ಖರೀದಿ ನಡೆದಿದೆ. ಆದರೆ, ರೈತರ ಬೆಳೆಗಳ ಖರೀದಿಗೆ ಹಿಂದೇಟು ಹಾಕಲಾಗುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಒಂದು ಪಕ್ಷದಿಂದ ಇನ್ನೊಂದು ಪಕ್ಷದ ಶಾಸಕರ ಖರೀದಿ ಹಿಂದಿತ್ತು. ಇದೀಗ ಕಾಂಗ್ರೆಸ್ ಪಕ್ಷದೊಳಗೇ ತನ್ನ ಶಾಸಕರ ಖರೀದಿ ನಡೆಯುತ್ತಿದೆ. ಈ ಸಂಖ್ಯೆ 50 ದಾಟಿದೆ. ಮೂರು ಬಣಗಳ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ ಜೋರಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರು ಬೆಳೆದ ಮೆಕ್ಕೆಜೋಳಕ್ಕಾಗಿ ಖರೀದಿ ಕೇಂದ್ರ ತೆರೆಯುತ್ತಿಲ್ಲ. ರೈತರ ಸಮಸ್ಯೆ ಪರಿಹಾರ ಮಾಡುತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಶಾಸಕರನ್ನು ಕೊಂಡುಕೊಳ್ಳಲು ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಜರಿದರು.
ಅಧಿಕಾರ ಹಂಚಿಕೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನಡುವೆ ‘ನಾನು ಕೊಡೆ, ನೀ ಬಿಡೆ’ ಎಂಬುವಂತಹ ಕಿತ್ತಾಟ ಸೃಷ್ಟಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಆಡಳಿತ ವಿಫಲವಾಗಿ, ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರಕ್ಕಾಗಿ ಇಷ್ಟೆಲ್ಲ ಆಗುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ಸುಮ್ಮನಿದೆ. ಬೋನ್‌ಲೆಸ್, ಶುಗರ್‌ಲೆಸ್‌ನಂತೆ ಕಾಂಗ್ರೆಸ್ ಕೂಡ ಪವರ್‌ಲೆಸ್. ಇದಕ್ಕೆ ತಾಕತ್ತಿಲ್ಲ ಎಂದು ಗುಡುಗಿದರು.
‘ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ಅಲ್ವೇ? ಅವರು ಪಕ್ಷ ಅಧ್ಯಕ್ಷರಾಗಿರುವುದು ಕಸ ಗುಡಿಸುವುದಕ್ಕಾಗಿಯೇ? ನಾನೇ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ಖಡಕ್ ಆಗಿ ಹೇಳಬೇಕಿತ್ತು. ಹಾಗೆ ಮಾಡಿಲ್ಲ. ಅಧ್ಯಕ್ಷರಾಗಿ ಇಷ್ಟು ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ಹೊರ ಬನ್ನಿ ಎಂದು ಖರ್ಗೆ ವಿರುದ್ಧ ಕುಟುಕಿದರು.
ಕಾಂಗ್ರೆಸ್ ಹೈಕಮಾಂಡ್ ಸತ್ತಿದೆ. ಅದೊಂದು ಡೆಡ್‌ಬಾಡಿ. ಅದು ಇನ್ನೂ ಜೀವಂತವಾಗಿದ್ದರೆ ಕಾಂಗ್ರೆಸ್‌ನ ಎಲ್ಲ ಶಾಸಕರ ಬಾಯಿ ಮುಚ್ಚಿಕೊಂಡು ಇರುತ್ತಿದ್ದರು ಎಂದು ಕಾಲೆಳೆದರು.
ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯಲು ರಾಹುಲ್ ಗಾಂಧಿ ಹೊರಟಿದ್ದಾರೆ. ಸ್ವಾತಂತ್ರೃ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂಬ ಮಹಾತ್ಮಗಾಂಧಿ ಅವರ ಆಶಯವನ್ನು ಈಗಲಾದರೂ ಈಡೇರಿಸಲು ಇವರು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯನ್ನು ಸಂವಿಧಾನ, ಅಂಬೇಡ್ಕರ್, ಮೀಸಲಾತಿ ವಿರೋಧಿ ಎಂಬುವಂತೆ ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ, ಸಂವಿಧಾನ ಹೆಸರು ಹೇಳಿಕೊಂಡು ಸಂವಿಧಾನಕ್ಕೆ ದ್ರೋಹ, ಅಂಬೇಡ್ಕರ್ ಹೆಸರಿನಲ್ಲಿ ಅವರಿಗೆ ಮೋಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ. ಸಂವಿಧಾನಕ್ಕೆ ಏನಾಗಿದೆ? ನರೇಂದ್ರ ಮೋದಿ ಅವರು ಇದನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.
‘ಕಾಂಗ್ರೆಸ್ ಸುಡುವ ಮನೆ. ಅದಕ್ಕೆ ಭವಿಷ್ಯ ಇಲ್ಲ. ಆ ಪಕ್ಷವನ್ನು ಸೇರುವವರಿಗೂ ಭವಿಷ್ಯ ಇಲ್ಲ’ ಎಂದು ಅಂಬೇಡ್ಕರ್ ಹೇಳಿದ್ದ ಮಾತು ತಡವಾದರೂ ಈಗ ನಿಜವಾಗುತ್ತಿದೆ. ಕಾಂಗ್ರೆಸ್ ಮುಳುಗುವ ಹಡಗು. ಅದಕ್ಕೆ ರಾಷ್ಟ್ರೀಯ ಪಕ್ಷದ ಗೌರವವೂ ಉಳಿದಿಲ್ಲ. ಸಂವಿಧಾನ ರಕ್ಷಣೆ, ಅಂಬೇಡ್ಕರ್ ಸ್ಮರಣೆ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿದಿದ್ದರೆ ಇಷ್ಟೊತ್ತಿಗಾಗಲೇ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೂ ಭಾರತರತ್ನ ಪ್ರಶಸ್ತಿ ಕೊಟ್ಟಿರುತ್ತಿದ್ದರು. ಇದು ಆಸ್ತಿ-ಮನೆ ಇಲ್ಲದ ಗಾಂಧಿ ಮನೆತನ. ಇದು ಕಡುಬಡತನ ಕುಟುಂಬವೂ ಹೌದು ಎಂದು ಲೇವಡಿ ಮಾಡಿದರು.
ದಲಿತರ ಪಾಲಿಗೆ ಕಾಂಗ್ರೆಸ್ ನಿಧಾನಗತಿ ವಿಷ. ಈ ಪಕ್ಷದಿಂದ ದೇಶದ ಜನರು, ದಲಿತರು ಉದ್ಧಾರವಾಗಲ್ಲ. ಗ್ಯಾರಂಟಿ ಯೋಜನೆಗಾಗಿ ಸರ್ಕಾರಿ ಖಜಾನೆಯನ್ನೂ ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆಯುತ್ತಿದೆ. ದಲಿತ ಮೀಸಲು ಹಣ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ದಲಿತರಿಗೆ ಮೋಸ ಮಾಡಿದೆ ಎಂದೂ ಹರಿಹಾಯ್ದರು.
ಬಿಜೆಪಿ ವತಿಯಿಂದ ಸಂವಿಧಾನ ದಿನಾಚರಣೆ, ಅಂಬೇಡ್ಕರ್ ಸ್ಮರಣಾ ಕಾರ್ಯಕ್ರಮ ನ.26ರಿಂದ ಡಿಸೆಂಬರ್ 6ರವರೆಗೆ ರಾಜ್ಯಾದ್ಯಂತ ನಡೆಯಲಿದೆ. 11 ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು 
ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕ ಹರ್ಷವರ್ಧನ್, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪ್ರಫುಲ್ಲಾ, ಮಹದೇವಯ್ಯ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net