ಮುಸ್ಲಿಂ ಲೀಗ್ ಬೇಡಿಕೆಗೆ ಮಣಿದು ದೇಶ ವಿಭಜನೆ ಮಾಡಿದ ಕಾಂಗ್ರೆಸ್ : ಮಾಜಿ ಎಂಎಲ್‌ಸಿ ತೋಂಟದಾರ್ಯ ಆಕ್ರೋಶ
ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ‘ಬಿಜೆಪಿ ಕರ್ನಾಟಕದ ಮಹಾರಥರು’ ಕೃತಿಯನ್ನು ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಬಿಡುಗಡೆ ಮಾಡಿದರು. ತೋಂಟದಾರ್ಯ, ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಟಿ.ಎಸ್. ಶ್ರೀವತ್ಸ, ಎಂ.ಜಿ.ಮಹೇಶ್, ಎಸ್.ಆರ್.ಗೋಪಾಲ್‌ರಾವ್ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು: ಅಖಂಡ ಭಾರತ ನಿರ್ಮಾಣವಾಗಬೇಕೆಂಬುದು ಎಲ್ಲರ ಬಯಕೆ ಆಗಿತ್ತು. ಆದರೆ, ಮುಸ್ಲಿಂ ಲೀಗ್‌ನ ಬೇಡಿಕೆಗೆ ಕಾಂಗ್ರೆಸ್ ಮಣಿದು ದೇಶ ವಿಭಜನೆ ಮಾಡುವ ಮೂಲಕ ದೇಶದ ಜನರಿಗೆ ಆಘಾತ ಉಂಟು ಮಾಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಲೇಖಕ ಎಸ್.ಆರ್.ಗೋಪಾಲ್‌ರಾವ್ ರಚನೆಯ ‘ಬಿಜೆಪಿ ಕರ್ನಾಟಕದ ಮಹಾರಥರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಖಂಡ ಭಾರತ ನಿರ್ಮಣ ಆಗಬೇಕು ಎಂಬುದು ಕಾಂಗ್ರೆಸ್‌ನವರ ಕಲ್ಪನೆ ಕೂಡ ಆಗಿತ್ತು. ಆದರೆ, ಅವರು ಸ್ವಾತಂತ್ರೃ ಬಂದ ಸಂದರ್ಭ ಮುಸ್ಲಿಂ ಲೀಗ್‌ನ ಒತ್ತಡಕ್ಕೆ ಮಣಿದರು ಎಂದರು.
ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ವಿಧಿ ಜಾರಿಗೊಳಿಸಿ ಅಲ್ಲಿಗೆ ಹೋಗಲು ಅನುಮತಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಜನರು ದೇಶದ ಎಲ್ಲಿಯಾದರೂ ಭೂಮಿ, ಜಮೀನು ಖರೀದಿಸಬಹುದು. ಆದರೆ ದೇಶದ ಜನರು ಮಾತ್ರ ಜಮ್ಮ ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಸುವಂತಿಲ್ಲ ಎಂಬ ಕಾಯ್ದೆ ಜಾರಿಗೊಳಿಸಲಾಯಿತು. ದೇಶದ ಹಿತಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಹಲವಾರು ನಿರ್ಣಯಗಳನ್ನು ಕೈಗೊಂಡಿತು. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸಿದ್ಧಾಂತ ಹೊಂದಿರುವ ಪಕ್ಷವೊಂದರ ಅಗತ್ಯವನ್ನು ಮನಗಂಡು ಜನಸಂಘವನ್ನು ಪ್ರಾರಂಭಿಸಲಾಯಿತು. ಜನಸಂಘ ಮುಂದೆ ಬಿಜೆಪಿಯಾಯಿತು ಎಂದರು.
ಕೃತಿ ಬಿಡುಗಡೆ ಮಾಡಿದ ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಮಾತನಾಡಿ, ಈ ಕೃತಿಯಲ್ಲಿ ಬಿಜೆಪಿ ರಾಜ್ಯ ನಾಯಕರ ಕೊಡುಗೆಯನ್ನು ದಾಖಲೀಕರಣ ಮಾಡಿದ್ದಾರೆ. ಪಕ್ಷ ಸಾಗಿ ಬಂದಿರುವ ಹಾದಿ, ಎದುರಿಸಿದ ಸಂಕಷ್ಟ ಎಲ್ಲವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪಕ್ಷದ ನಾಯಕರು ಹಾಕಿಕೊಟ್ಟಿರುವ ಸಿದ್ಧಾಂತ, ಆದರ್ಶಗಳನ್ನು ಮುಂದಿಟ್ಟುಕೊಂಡು ಮುಂದುವರೆಯೋಣ ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಶಾಸಕ ಟಿ.ಎಸ್. ಶ್ರೀವತ್ಸ, ಪಕ್ಷದ ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಲೇಖಕ ಎಸ್.ಆರ್. ಗೋಪಾಲ್ ರಾವ್, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಡಾ.ಅನಿಲ್ ಥಾಮಸ್ ಇದ್ದರು.