ಹುಣಸೂರು ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆ.ಡಿಪಿ.ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅಧಿಕಾರಿಗಳಿಂದ ಪ್ರಗತಿ ಕುರಿತು ಮಾಹಿತಿ ಪಡೆದರು. ಲಕ್ಷ್ಮಿಕಾಂತ್ ರೆಡ್ಡಿ, ಯುಕೇಶ್‌ಕುಮಾರ್, ಎಚ್.ಬಿ.ವಿಜಯಕುಮಾರ್, ಸಿದ್ದಗಂಗಮ್ಮ ಇತರರಿದ್ದರು.
ಹುಣಸೂರು : ಹುಣಸೂರು ನಗರದಲ್ಲಿ ಫುಡ್‌ಕೋರ್ಟ್ ಸ್ಥಾಪನೆಗೆ ಗುರುತಿಸಿರುವ ಜಾಗಕ್ಕೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ನಗರಸಭೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್‌ರೆಡ್ಡಿ ಹಾಗೂ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್ ಸಮ್ಮುಖದಲ್ಲಿ ಆಯೋಜನೆಗೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಗರದ ಸೇತುವೆ ರಸ್ತೆಯಲ್ಲಿರುವ ಜಾಗ ನಗರಸಭೆ ಅಥವಾ ಕಾಫಿವರ್ಕ್ಸ್‌ಗೆ ಸೇರಿದೆಯೇ ಎನ್ನುವುದನ್ನು ಖಚಿತಪಡಿಸಲು ಸರ್ವೇ ನಡೆಸಿ ಜಾಗ ಗುರುತಿಸಿರೆಂದು ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದೆ. ಏನಾಯಿತು ಎಂದು ಪೌರಾಯುಕ್ತೆ ಕೆ.ಮಾನಸಾರಿ ಅವರಿಗೆ ಪ್ರಶ್ನಿಸಿದಾಗ, ಜಾಗದ ಸರ್ವೇ ನಡೆಸಲು ತೆರಳಿದ ವೇಳೆ ಕಾಫಿ ವರ್ಕ್ಸ್‌ನವರು ನ್ಯಾಯಾಲಯದ ಮೆಟ್ಟಿಲೇರಿದ್ದು, ತಡೆಯಾಜ್ಞೆಯಿದೆ ಎಂದು ತಿಳಿಸಿದ್ದಾರೆ ಎಂದರು.
ತಡೆಯಾಜ್ಞೆಯ ಪ್ರತಿ ನಿಮ್ಮಲ್ಲಿದೆಯೇ ಎಂದು ಪ್ರಶ್ನಿಸಿದಾಗ ಮಧ್ಯೆ ಪ್ರವೇಶಿಸಿದ ಕಂದಾಯ ಅಧಿಕಾರಿ ಸಿದ್ದಪ್ಪ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ ಹೊರತು ತಡೆಯಾಜ್ಞೆ ಇಲ್ಲ ಎಂದು ತಿಳಿಸಿದಾಗ, ಇಡೀ ಸಭೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದೀರಾ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ವಾರದ ಹಿಂದೆ ಆಯೋಜನೆಗೊಂಡಿದ್ದ ಕೌನ್ಸಿಲ್ ಸಭೆಯಲ್ಲೂ ಇದೇ ಮಾತನ್ನು ಹೇಳಿ ಇಡೀ ಸಭೆಯನ್ನು ತಪ್ಪುದಾರಿಗೆ ಎಳೆದಿದ್ದೀರಲ್ಲ ಸರಿನಾ? ಕಾಫಿವರ್ಕ್ಸ್ ಇರುವ ಜಾಗದ ಸಮಗ್ರ ವರದಿ ನನಗೆ ಬೇಕು. ಸಂಪೂರ್ಣವಾಗಿ ಸರ್ವೇ ನಡೆಸಿ ವರದಿ ನೀಡಲು ಸೂಚಿಸಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಧ್ಯೆ ಪ್ರವೇಶಿಸಿ, ನ್ಯಾಯಾಲಯಕ್ಕೆ ಹೋದರೆ ನಿಮಗೇನು ಸಮಸ್ಯೆ? ಸರ್ವೇ ಮಾಡಲು ಅಡ್ಡಿಯೇನು ಎಂದು ಪ್ರಶ್ನಿಸಿ, ಸರ್ವೇ ಇಲಾಖೆ ಎಡಿಎಲ್‌ಆರ್ ಮತ್ತು ತಹಸೀಲ್ದಾರ್‌ರಿಗೆ ಈ ಕೂಡಲೇ ಸರ್ವೇ ಕಾರ್ಯ ನಡೆಸಲು ಕ್ರಮವಹಿಸಿರೆಂದು ಸೂಚಿಸಿದರು.
ಅರಣ್ಯ ಇಲಾಖೆ ಬೇಜವಾಬ್ದಾರಿ: ಹುಣಸೂರು ನಗರವ್ಯಾಪ್ತಿಯ ಉದ್ಯಾನದಲ್ಲಿ ಬೆಳೆದಿರುವ ಬೃಹದಾಕಾರದ ಮರದ ಕೊಂಬೆಗಳನ್ನು ಕಡಿಯುವ ಮತ್ತು ಅತ್ತಿಗುಪ್ಪೆ ಸರ್ಕಾರ ಶಾಲೆಯ ಆವರಣದಲ್ಲಿರುವ ಮರವನ್ನು ತೆರವುಗೊಳಿಸುವ ಕುರಿತು 10 ತಿಂಗಳಿನಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಾನೆ ಸ್ವತ: ಕೋರಿದರೂ ಕ್ರಮವಹಿಸಿಲ್ಲ. ಏಕೆ? ಒಂದು ಮರ ಕಡಿಯಲು ಎಷ್ಟು ಸಮಯ ಬೇಕು? ಅನಾಹುತ ಸಂಭವಿಸಿದ ನಂತರವಷ್ಟೇ ಮರ ಕಡಿಯುತ್ತೀರಾ? ಮರ ಕಡಿಯಲು ಅಡ್ಡಿಪಡಿಸುತ್ತಿರುವವರ‌್ಯಾರು? ಎಸಿಎಫ್, ಡಿಸಿಎಫ್ ಯಾರೆಂದು ಹೇಳಿ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಆರ್‌ಎಫ್‌ಒ ನಂದಕುಮಾರ್‌ರನ್ನು ತರಾಟೆಗೆ ತೆಗೆದುಕೊಂಡರು. ಹಲವು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿಲ್ಲ. ಶೀಘ್ರ ಕ್ರಮವಹಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದಾಗ ಕಾಡಂಚಿನ ಗ್ರಾಮಗಳಲ್ಲೂ ರೈತರಿಗೆ ಅನನುಕೂಲವಾಗುತ್ತಿದೆ. ಪರಿಸರ ಸೂಕ್ಷ್ಮ ವಲಯ(ಇಎಸ್‌ಜೆಡ್)ಎಂಬ ಕಾರಣವೊಡ್ಡಿ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಎಲ್ಲದಕ್ಕೂ ಎನ್‌ಒಸಿ ಕೇಳುತ್ತಾರೆ ಎಂದು ಬೇಸರಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಸರ್ಕಾರ ಇದೀಗ ಹೊರಡಿಸಿರುವ ನೂತನ ಆದೇಶದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಡಿಯಿಂದ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಮಾತ್ರ ಪರಿಸರ ಸೂಕ್ಷ್ಮವಲಯವೆಂದು ಘೋಷಿಸಿದ್ದು, ಇನ್ನು ಮುಂದೆ ಇದನ್ನು ಹೊರತುಪಡಿಸಿ ಯಾರೂ ಇಲಾಖೆ ಅನುಮತಿ ಪಡೆಯಬೇಕಿಲ್ಲ. ಗ್ರಾ.ಪಂ.ಅಧಿಕಾರಿಗಳಿಗೆ,. ಕಂದಾಯ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿರೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಡಿಎಚ್‌ಒ ಕುಮಾರಸ್ವಾಮಿ, ಪ್ರಭಾರ ಡಿಡಿಪಿಐ ಅನಂತರಾಜ್, ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್, ತಹಸೀಲ್ದಾರ್ ಜೆ.ಮಂಜುನಾಥ್, ತಾ.ಪಂ.ಆಡಳಿತಾಧಿಕಾರಿ ಸಿದ್ದಗಂಗಮ್ಮ, ಇಒ ಕೆ.ಹೊಂಗಯ್ಯ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಸಿದ್ದರು.
ಚುನಾವಣೆ ಏಕೆ ನಡೆಸಿಲ್ಲ?
ತಾಲೂಕಿನ 12 ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಚುನಾವಣೆ ಅವಧಿ ಪೂರ್ಣಗೊಂಡು 8 ತಿಂಗಳಾದರೂ ನಡೆಸಿಲ್ಲ ಏಕೆ? ಆಡಳಿತಾಧಿಕಾರಿಗೆ 195 ದಿನಗಳ ಅವಧಿ ಮಾತ್ರ ಆಡಳಿತ ನಡೆಸಲು ಅವಕಾಶವಿದೆ. ಹೀಗಿದ್ದೂ ಇನ್ನೂ ಮುಂದುವರೆದಿದ್ದಾರಲ್ಲ, ಅವರಿಗೆ ಈ ಅಧಿಕಾರ ನೀಡಿದವರ‌್ಯಾರು? ಈ ಅವಧಿಯಲ್ಲಿ ಅಕ್ರಮಗಳು ನಡೆದಿದ್ದರೆ ಇದಕ್ಕೆ ಸಹಕಾರ ಇಲಾಖೆಯ ಅಧಿಕಾರಿಗಳೇ ಹೊಣೆಯಾಗುತ್ತಾರೆಯೇ ಹೊರತು ಎಂ.ಡಿ. ಯಲ್ಲ ಎಂಬುದು ನಿಮಗೆ ತಿಳಿದಿರಲಿ. ಇಷ್ಟಕ್ಕೂ ಜಿಲ್ಲಾಮಟ್ಟದಲ್ಲಿ ಆಡಳಿತಾಧಿಕಾರಿಯಾಗಿ ಕುಳಿತಿರುವವರು ಈ ಹಿಂದೆ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವವರೇ ಎನ್ನುವುದು ನಿಮಗೆ ತಿಳಿದಿಲ್ಲವೇ? ಕೂಡಲೇ ಸಂಘಗಳ ಚುನಾವಣೆ ನಡೆಸಿರಿ. ರೈತರಿಗೆ ಒಂದು ನಯಾಪೈಸೆ ಸಾಲ ಇನ್ನೂ ಕೊಟ್ಟಿಲ್ಲ. ಇನ್ಯಾವಾಗ ನೀಡುತ್ತೀರಿ ಎಂದು ಸಭೆಯಲ್ಲಿದ್ದ ಸಹಕಾರ ಇಲಾಖೆ ಎಆರ್ ಅನಸೂಯಾ ಮತ್ತು ಅಧಿಕಾರಿ ರಾಜಣ್ಣ ಅವರಿಗೆ ಶಾಸಕ ಚಾಟಿ ಬೀಸಿದರು.
--------
ಹೆಮ್ಮಿಗೆ ಹಾಡಿಗೆ ಸೆಸ್ಕ್ ಸಂಪರ್ಕವಿಲ್ಲ
ತಾಲೂಕಿನ ಹೆಮ್ಮಿಗೆ ಹಾಡಿಯಲ್ಲಿ ವಾಸಿಸುವ ಸೋಲಿಗ ಸಮುದಾಯದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲವೆಂದು ತಿಳಿದು ಸೆಸ್ಕ್ ಎಎ ಸುನಿಲ್‌ರನ್ನ ಪ್ರಶ್ನಿಸಿದಾಗ ಈ ಬಗ್ಗೆ ಮಾಹಿತಿ ಪಡೆದು ಶೀಘ್ರ ಕ್ರಮವಹಿಸುವುದಾಗಿ ತಿಳಿಸಿದರು. ತಾಲೂಕಿನ ಉಡುವೇಪುರ, ಕಿಕ್ಕೇರಿಕಟ್ಟೆ ಮುಂತಾದ ಗ್ರಾಮಗಳಲ್ಲಿ ರೈತರಿಗೆ ನೋಟೀಸ್ ನೀಡಲಾಗುತ್ತಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದಾಗ, ಕಂದಾಯ ಮತ್ತು ಅರಣ್ಯ ಇಲಾಖೆ ವಾರದೊಳಗೆ ಜಂಟಿ ಸರ್ವೇ ಕಾರ್ಯ ನಡೆಸಿ ಗೊಂದಲಪರಿಹರಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಯೋಜನಾ ಪ್ರಾಧಿಕಾರ ಅಧಿಕಾರಿ ಗೈರು
ಹುಣಸೂರು ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಕೆಡಿಪಿ ಸಭೆಗಳಿಗೆ ಹಾಜರಾಗುತ್ತಿಲ್ಲ. ಇಂದೂ ಕೂಡ ಇಲ್ಲ. ಈ ಕುರಿತು ಸಂಬಂಧಪಟ್ಟವರಿಗೆ ನೋಟೀಸ್ ಜಾರಿಗೊಳಿಸಿ ಹಾಗೂ ಪದೇ ಪದೇ ಗೈರಾಗುತ್ತಿರುವ ಕುರಿತು ತನಿಖೆ ನಡೆಸಬೇಕೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಜಿಲ್ಲಾದಿಕಾರಿಗಳಿಗೆ ಒತ್ತಾಯಿಸಿದಾಗ, ನೋಟೀಸ್ ಜಾರಿಗೊಳಿಸಲು ಡಿಸಿ ಸೂಚಿಸಿದರು.
ವರದಿ ಪರಿಣಾಮ: ತಾಲೂಕಿನ ಕೊತ್ತೇಗಾಲ ಗ್ರಾ.ಪಂ. ಪೌರಕಾರ್ಮಿಕ ಹರೀಶ್ ಅವರಿಗೆ 30 ತಿಂಗಳಿನಿಂದ ವೇತನ ಪಾವತಿಸದೇ ಸತಾಯಿಸಲಾಗುತ್ತಿತ್ತು. ಈ ಕುರಿತು ನ.4ರಂದು ವಿಜಯವಾಣಿ ಪತ್ರಿಕೆಯಲ್ಲಿ ವಿಸ್ತ್ರತ ವರದಿ ಪ್ರಕಟಗೊಂಡಿತ್ತು. ವರದಿ ಪರಿಣಾಮ ಇದೀಗ ಪೌರಕಾರ್ಮಿಕನಿಗೆ ವೇತನ ಪಾವತಿ ಮಾಡಲಾಗಿದೆ. ಈ ಕುರಿತು ಇಒ ಕೆ.ಹೊಂಗಯ್ಯ ಸಭೆಗೆ ಮಾಹಿತಿ ನೀಡಿ 71 ಸಾವಿರ ರೂ. ವೇತನ ಬಾಕಿಯಿದ್ದು ಈ ಪೈಕಿ ಮೊದಲ ಹಂತವಾಗಿ 20 ಸಾವಿರ ರೂ. ಗಳನ್ನು ಪಾವತಿಸಲಾಗಿದೆ. ಹಂತಹಂತವಾಗಿ ಬಾಕಿ ಪಾವತಿಸಲಾಗುವುದು ಎಂದರು.