ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು : ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಎಚ್ಚರಿಕೆ

 ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್
ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್
Published on
ಮೈಸೂರು: ರಾಜ್ಯದ ಮತದಾರರ ಪಟ್ಟಿಯಿಂದ 86 ಲಕ್ಷ ಮತದಾರರ ಹೆಸರು ಕೈಬಿಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸುಳ್ಳು ಆರೋಪ ಮಾಡಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಹೇಳಿದರು.
ಮತದಾರರ ಪಟ್ಟಿಯಿಂದ 86 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಹೇಳಿರುವುದು ಬೇಜವಾಬ್ದಾರಿತನದ ಪರಮಾವಧಿ. ರಾಜ್ಯದಲ್ಲಿ ಇನ್ನೂ ನೋಟಿಫಿಕೇಷನ್ ಆಗಿಲ್ಲ. ಮ್ಯಾಪಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಆಗಲೇ ಮತದಾರರ ಪಟ್ಟಿಯ ಪರಿಷ್ಕರಣೆ ಆಗಿದೆ ಎಂದು ಸುಳ್ಳು ಸುದ್ದಿ ಹರಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ರಾಷ್ಟ್ರ ದ್ರೋಹದ ಕೆಲಸ ಮಾಡುತ್ತಿರುವ ಲಕ್ಷ್ಮಣ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನರಸಿಂಹರಾಜ ಕ್ಷೇತ್ರದಲ್ಲಿ 60 ಸಾವಿರ ಮತದಾರರ ಹೆಸರು ಡಿಲೀಟ್ ಆಗಿದೆ ಎಂದು ಆರೋಪಿಸಿದ್ದಾರೆ. 2002ಕ್ಕಿಂತ ಮುಂಚೆ ಇಲ್ಲದವರು ಈಗ ಹೇಗೆ ಬಂದರು? ಅವರು ಭಾರತೀಯರೇ ಆಗಿದ್ದರೆ ಅವರ ಪಾಲಕರು ಭಾರತದ ಯಾವುದಾದರೂ ಮೂಲೆಯಲ್ಲಿ ಮತದಾರರಾಗಿದ್ದರೆ ಅದರ ದಾಖಲೆ ನೀಡಿದರೆ ಸಾಕು. ಅವರ ಹೆಸರು ಡಿಲೀಟ್ ಆಗುವುದಿಲ್ಲ. ನೀವು ಹೇಳಿರುವಂತೆ ಡಿಲೀಟ್ ಆಗಿರುವ 80 ಲಕ್ಷ ಜನ ಯಾವ ದೇಶದವರು? ಅವರ ಮೇಲೆ ನಿಮಗ್ಯಾಕೆ ಪ್ರೀತಿ? ಅವರು ನಿಜವಾದ ಭಾರತೀಯ ಪೌರರೇ ಆದರೆ 2002ರಲ್ಲಿ ಅವರ ಅಥವಾ ಅವರ ಕುಟುಂಬದವರ ಮತದಾರರ ಪಟ್ಟಿ ಕೊಟ್ಟು ದೃಢೀಕರಿಸಲಿ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರಕ್ಕೂ ಎಸ್‌ಐಆರ್‌ಗೂ ಸಂಬಂಧವಿಲ್ಲ. ಇದು ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಪ್ರಕ್ರಿಯೆ. 2002ರ ಚುನಾವಣಾ ಪಟ್ಟಿಯಲ್ಲಿ ಹೆಸರಿಲ್ಲದೇ ಇರುವವರು ತಮ್ಮ ತಂದೆ, ತಾಯಿ ಅಥವಾ ಪೋಷಕರ ವೋಟರ್ ಐಡಿ ನಂಬರ್ ಕೊಟ್ಟರೆ ಸಾಕು. ಇದ್ಯಾವುದು ಇಲ್ಲದವರು ಭಾರತೀಯ ಎಂದು ಹೇಗೆ ನಂಬಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಒಟ್ಟು 12 ಬಾರಿ ಎಸ್‌ಐಆರ್ ನಡೆದಿದೆ. ಕರ್ನಾಟಕದಲ್ಲಿ ಕೊನೆಯ ಬಾರಿಗೆ ಎಸ್‌ಐಆರ್ ಆಗಿದ್ದು 2002ರಲ್ಲಿ. 2012ರಲ್ಲಿ ಎಸ್‌ಐಆರ್ ಆಗಬೇಕಿತ್ತು. ಆದರೆ, ಅಂದು ಆಡಳಿತದಲ್ಲಿದ್ದ ಕೇಂದ್ರ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ. 2022ರಲ್ಲಿ ಕೋವಿಡ್ ಕಾರಣಕ್ಕೆ ಮುಂದೂಡಿಕೆಯಾಯಿತು. ಈಗ ದೇಶದ ಎಲ್ಲ ರಾಜ್ಯಗಳಲ್ಲೂ ನಡೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗಿರಿಧರ್, ಸೋಮಸುಂದರ್, ಮಹೇಶ್‌ರಾಜೇ ಅರಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net