ದೇಶದಲ್ಲಿ ನಶಿಸುತ್ತಿದೆ ಕೋಮು ಸೌಹಾರ್ದ

ನಿರಂತರ ರಂಗ ಉತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. ರಾಮೇಶ್ವರಿ ವರ್ಮಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರಸಾದ್ ಕುಂದೂರು ಇದ್ದರು.
ನಿರಂತರ ರಂಗ ಉತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. ರಾಮೇಶ್ವರಿ ವರ್ಮಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರಸಾದ್ ಕುಂದೂರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ರಂಗಭೂಮಿ ಪ್ರಬಲ ಅಸ್ತ್ರ
  • ರಂಗಕರ್ಮಿ ರಾಮೇಶ್ವರಿ ವರ್ಮಾ ಅಭಿಮತ
ಮೈಸೂರು: ದೇಶದಲ್ಲಿ ಕೋಮು ಸೌಹಾರ್ದತೆ ನಶಿಸುತ್ತಿದ್ದು, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ರಂಗಭೂಮಿ ಪ್ರಬಲವಾದ ಅಸ್ತ್ರವಾಗಿದೆ ಎಂದು ರಂಗಕರ್ಮಿ ರಾಮೇಶ್ವರಿ ವರ್ಮಾ ಹೇಳಿದರು.
ನಗರದ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ನಿರಂತರ ರಂಗ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಂಗಭೂಮಿ ಸಮಾಜದ ಕನ್ನಡಿ ಹಾಗೂ ಸಾಕ್ಷಿಪ್ರಜ್ಞೆಯಾಗಿದೆ. ಸಂವಿಧಾನವು ಕಾನೂನು ದಾಖಲೆ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬರ ಜೀವನತತ್ವ ಆಗಬೇಕಿದೆ ಎಂದರು.
ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಕೋಮುದ್ವೇಷ ಬಿತ್ತಲು ನಾಟಕ ಬರೆಯುತ್ತಿರುವವರಿಗೆ ನಾಚಿಕೆ ಆಗಬೇಕು. ಮನುಷ್ಯರ ನಡುವೆ ಭಿನ್ನಭೇದವನ್ನು ಕಲೆಯು ಎಣಿಸಬಾರದು. ಅದು ಜಾತಿ ವಿನಾಶಕ್ಕೆ ಕಾರಣವಾಗಬೇಕೇ ಹೊರತು ಜಾತಿ ವೈಷಮ್ಯ ಬೆಳೆಸುವುದಕ್ಕಲ್ಲ ಎಂದು ಹೇಳಿದರು.
ಕಲೆಯ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಸಾಮಾಜಿಕ ಹೊಣೆಗಾರಿಕೆ ಕಲಾವಿದನಿಗೆ ಅಗತ್ಯ. ಹೊಣೆಗೇಡಿಗಳಾಗದೆ ಮಾನವೀಯತೆ, ಸೌಹಾರ್ದತೆ ನೆಲೆಸಲು ರಂಗಭೂಮಿ ಶ್ರಮಿಸಬೇಕು. ವಾಟ್ಸ್‌ಆ್ಯಪ್‌ನಲ್ಲಿ ಬರುತ್ತಿರುವ ತಿರುಚಿದ ಚರಿತ್ರೆಯನ್ನೇ ಓದುತ್ತಿರುವ ಯುವ ಮನಸುಗಳಿಗೆ ವಾಸ್ತವ ಸತ್ಯವನ್ನು ಕಲಿಸಬೇಕು ಎಂದು ತಿಳಿಸಿದರು.
ನಿರಂತರದ ಪ್ರಸಾದ್ ಕುಂದೂರು ಮಾತನಾಡಿದರು. ಇದಕ್ಕೂ ಮೊದಲು ಹಾಸನದ ಗಣೇಶ್ ಮತ್ತು ತಂಡದವರು ಕೋಲಾಟ ಪ್ರದರ್ಶಿಸಿದರು. ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ಬೆಂಗಳೂರಿನ ಕಲಾಮಾಧ್ಯಮ ತಂಡದವರು ರಾಜೇಶ್ವರಿ ತೇಜಸ್ವಿ ಆತ್ಮಕಥೆ ಆಧಾರಿತ ನನ್ನ ತೇಜಸ್ವಿ ನಾಟಕ ಪ್ರದರ್ಶಿಸಿದರು.

ಡಿ.21 ರವರೆಗೆ ‘ನಿರಂತರ ರಂಗ ಉತ್ಸವ

‘ನಿರಂತರ ರಂಗ ಉತ್ಸವ’ವು ಡಿ.21 ರವರೆಗೆ ನಡೆಯಲಿದ್ದು, ಡಿ.18ರಂದು ಸಂಜೆ 5.30ಕ್ಕೆ ಬಿ.ವಿ.ಕಾರಂತರ ರಂಗ ಗೀತೆಗಳನ್ನು ದೇವಾನಂದ್ ವರಪ್ರಸಾದ್ ಮತ್ತು ನಿರಂತರ ತಂಡ ಪ್ರಸ್ತುತ ಪಡಿಸಲಿದೆ. ನಂತರ ಸಂಜೆ 6.15ಕ್ಕೆ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ ಭಾಗವಹಿಸಲಿದ್ದಾರೆ. ಸಂಜೆ 7ಗಂಟೆಗೆ ನಾದಸಂಜೆ-ರವಿಶಂಕರ್ ಮಿಶ್ರಾ ಅವರ ಕೊಳಲು ಹಾಗೂ ಜುನೈನ್ ಖಾನ್ ಅವರ ಸಿತಾರ್ ಜುಗಲ್ಬಂದಿ ಇರಲಿದೆ. ಡಿ.19ರಂದು ಸಂಜೆ 5.30ಕ್ಕೆ ಶ್ರೀನಿವಾಸ್‌ಭಟ್ (ಚೀನಿ) ಅವರ ರಂಗ ಗೀತೆಗಳನ್ನು ದೇವಾನಂದ್ ವರಪ್ರಸಾದ್ ಮತ್ತು ನಿರಂತರ ತಂಡದವರು ಹಾಡುವರು. ಸಂಜೆ 6.15ಕ್ಕೆ ಸಭಾ ಕಾರ್ಯಕ್ರಮದಲ್ಲಿ ನಾಟಕಕಾರ ರಾಜಪ್ಪ ದಳವಾಯಿ, ನಿರಂತರದ ಶ್ರೀನಿವಾಸ್ ಪಾಲಹಳ್ಳಿ ಭಾಗವಹಿಸುವರು. ಸಂಜೆ 7ಕ್ಕೆ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದಿಂದ ಪ್ರತಿ ಗಂಧರ್ವ ನಾಟಕ ಪ್ರದರ್ಶನ ಇರಲಿದೆ.
ಡಿ.20ರಂದು ಸಂಜೆ 5.30ಕ್ಕೆ ಜಾನಪದ ಮತ್ತು ತತ್ವಪದ ಗಾಯನವನ್ನು ದೇವಾನಂದ್ ವರಪ್ರಸಾದ್ ಮತ್ತು ನಿರಂತರ ಗೆಳೆಯರು ನಡೆಸಿಕೊಡುವರು. 6.15ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ಡಿ.ವಿಜಯಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸುವರು. ನಂತರ ನಿರಂತರ ರಂಗತಂಡವು ಗೊರೂರು ನಾಟಕ ಪ್ರದರ್ಶಿಸಲಿದೆ. ಡಿ.21ರಂದು ಸಂಜೆ 5.30ಕ್ಕೆ ಕಡೂರಿನ ನವೀನ್‌ಕುಮಾರ್ ಮತ್ತು ತಂಡದವರು ವೀರಗಾಸೆ ಪ್ರದರ್ಶಿಸುವರು. ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಹಿರಿಯ ರಂಗಕರ್ಮಿ ಎ.ಜಿ.ಚಿದಂಬರರಾವ್ ಜಂಬೆ, ಸಂಸ್ಕೃತಿ ಚಿಂತಕ ದೇವನೂರ ಬಸವರಾಜು ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net