ಚಾಮುಂಡಿಬೆಟ್ಟದ ತಪ್ಪಲಿನ ಕೆರೆ ಒತ್ತುವರಿ ತೆರವು

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೆರೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೆರೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ
Published on
ಮೈಸೂರು:ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೆರೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಈ ಜಾಗ ತಮ್ಮ ಮನೆಗೆ ಸೇರಿದ್ದು ಎಂದು ಹಾಕಲಾಗಿದ್ದ ಎರಡು ನಾಮಫಲಕಗಳು ಜೆಸಿಬಿ ಮೂಲಕ ತೆರವು ಮಾಡಿದ್ದಲ್ಲದೆ, ಜಾಗದ ಎರಡು ಕಡೆಗಳಲ್ಲಿ ಹಾಕಿದ್ದ ಕಾಂಕ್ರೀಟ್ ತಡೆ ಗೋಡೆಗಳನ್ನು ಕೆಡವಲಾಯಿತು.
ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಶಿವರಾತ್ರಿ ಹಬ್ಬ ಮುಗಿಯುವುದರೊಳಗೆ ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೆ ನಾವೇ ಒತ್ತುವರಿ ತೆರವು ಮಾಡುತ್ತೇವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದರು.
ಶಾಸಕರ ಎಚ್ಚರಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸ್ಥಳ ಪರಿಶೀಲನೆ ಮಾಡಿದ ತಹಸೀಲ್ದಾರ್ ಮಹೇಶ್‌ಕುಮಾರ್, ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.
ಈ ಸ್ಥಳದಲ್ಲಿ 6.10 ಎಕರೆ ಜಾಗ ಕೆರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಇದರಲ್ಲಿ ಈಗ 3.17 ಎಕರೆ ಕೆರೆ ಜಾಗವನ್ನು ತೆರವು ಮಾಡಲಾಗಿದೆ. ಕೆಲ ಭಾಗವನ್ನು ಒತ್ತುವರಿ ಮಾಡಿಕೊಂಡಿರುವವರೇ ನಾವೇ ತೆರವು ಮಾಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಇಲ್ಲಿ ಕೆಲ ಭಾಗ ಕಾಂಪೌಂಡ್ ನಿರ್ಮಿಸಿದ್ದವರೇ ಮುಂದೆ ಬಂದು ನಾಳೆಯೊಳಗೆ ತೆರವು ಮಾಡುತ್ತೇವೆ ಎಂದು ಮನವಿ ಮಾಡಿಕೊಂಡರು. ಭಾನುವಾರ ಮಧ್ಯಾಹ್ನದ ಒಳಗೆ ತೆರವು ಮಾಡಬೇಕು.
ಇಲ್ಲವಾದರೆ ಸೋಮವಾರ ಉಳಿದ ಭಾಗವನ್ನು ಮತ್ತೆ ತಾಲೂಕು ಆಡಳಿತದಿಂದಲೇ ತೆರವುಗೊಳಿಸಲಾಗುವುದು ಎಂದು ತಹಸೀಲ್ದಾರ್ ಮಹೇಶ್‌ಕುಮಾರ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಕೇವಲ 3.17 ಎಕರೆ ಕೆರೆ ಜಾಗ ಮಾತ್ರ ಒತ್ತುವರಿಯಾಗಿಲ್ಲ. ಇದರ ಜತೆಗೆ ಈ ಜಾಗದಲ್ಲಿಯೇ ಒತ್ತುವರಿ ಮಾಡಿಕೊಂಡು 10 ಮನೆಗಳನ್ನು ಕಟ್ಟಲಾಗಿದೆ, 20ಕ್ಕೂ ಹೆಚ್ಚು ನಿವೇಶನಗಳನ್ನು ಮಾಡಿದ್ದಾರೆ. ಹೀಗಾಗಿ ಮುಂದೆ ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಾನೂನು ತಜ್ಞರ ಜತೆ ಚರ್ಚಿಸಿ ಕೆರೆ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net