ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರ ಹೊಮ್ಮಿತ್ತು. ಆ ನಂತರ 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆದಿತ್ತು. 2024-25ನೇ ಸಾಲಿನಲ್ಲಿ ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದುಕೊಂಡಿತ್ತು. ಸೂಪರ್ ಸ್ವಚ್ಛ ಲೀಗ್ ಪ್ರಶಸ್ತಿ ಪಡೆದ ನಗರಗಳನ್ನು ರ‌್ಯಾಂಕಿಂಗ್ ವ್ಯಾಪ್ತಿಗೆ ಒಳಪಡಿಸಲಿಲ್ಲ. ಸ್ವಚ್ಛತಾ ರ‌್ಯಾಂಕಿಂಗ್ ಜತೆಗೆ ಇದುವರೆಗೆ ನಗರವು ಹಲವು ಪ್ರಶಸ್ತಿಗಳನ್ನು ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಪಡೆದುಕೊಂ ಡಿದೆ. 2018, 2020 ಮತ್ತು 2022ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪಟ್ಟವನ್ನು ಪಡೆಯಿತು. 2021ರಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿ, ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ, 2019 ರಿಂದ 2024ವರೆಗೆ ನಿರಂತರವಾಗಿ ಫೈವ್‌ಸ್ಟಾರ್ ರ‌್ಯಾಂಕಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆದಿದೆ. 2025-26ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಗೆ ಈಗಾಗಲೇ ಟೂಲ್‌ಕಿಟ್ ಬಿಡುಗಡೆಯಾಗಿದ್ದು, ಈ ಟೂಲ್‌ಕಿಟ್ ಆಧಾರದ ಮೇಲೆ ನಗರವನ್ನು ಸ್ವಚ್ಛ ಸರ್ವೇಕ್ಷಣೆಗೆ ಅಣಿಗೊಳಿಸುವ ಕಾರ್ಯ ನಡೆಯುತ್ತಿದೆ.