ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯದ 18ನೇ ವರ್ಷದ ಜಯಂತಿ ಮಹೋತ್ಸವ
ಕಂಪಲಾಪುರ: ಗ್ರಾಮದ ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯದ 18ನೇ ವರ್ಷದ ಜಯಂತಿ ಮಹೋತ್ಸವ ಅಪಾರ ಜನಸ್ತೋಮದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ಪ್ರಾತಃಕಾಲದಲ್ಲಿ ಅರ್ಚಕ ಗಣಪತಿ ಭಟ್ ಮತ್ತು ತಂಡದವರಿಂದ ಪೂಜಾ ವಿಧಿ ವಿಧಾನಗಳು ನೆರವೇರಿದವು. ವಿವಿಧ ಬಗೆಯ ಪುಷ್ಪಾಲಂಕಾರದಿಂದ ದೇವಸ್ಥಾನ ಹಾಗೂ ಚೌಡೇಶ್ವರಿ ಅಮ್ಮನವರ ಮೂರ್ತಿ ಆಕರ್ಷಣೀಯವಾಗಿತ್ತು. ಭಕ್ತರು ದೇವಸ್ಥಾನದ ಬಳಿ ದೇವಿಯನ್ನು ಕಣ್ತುಂಬಿಕೊಂಡರು.
ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. 1 ಗಂಟೆಯಿಂದ ಶ್ರೀನಾಗ ವಿದ್ಯಾ ಸಂಸ್ಥೆ ಆವರಣದಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 6 ಗಂಟೆಯಿಂದ ವಿದ್ಯುತ್ ದೀಪಾಲಂಕಾರದ ಭವ್ಯ ಮಂಟಪದಲ್ಲಿ ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ಇಟ್ಟು , ಮಂಗಳವಾದ್ಯ, ಕೇರಳದ ಚಂಡೆ ಹಾಗೂ ಕರಡಿ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಉತ್ಸವ ನೆರವೇರಿತು.
ಮುನ್ನೆಚ್ಚರಿಕೆ ಕ್ರಮವಾಗಿ ಪಿರಿಯಾಪಟ್ಟಣ ಪೊಲೀಸರು ವ್ಯವಸ್ಥೆ ಮಾಡಿದರು.