ಮಕ್ಕಳಿಗೆ ಭಾಷೆ ಮೇಲೆ ಹಿಡಿತವಿಲ್ಲ: ಡಿಡಿಪಿಐ ಉದಯಕುಮಾರ್ ಕಳವಳ

ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ತಾಲೂಕು ಕನ್ನಡ ಭಾಷಾ ಶಿಕ್ಷಕರ ಬಳಗದ ಉದ್ಘಾಟನಾ ಕಾರ್ಯಕ್ರಮ
ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ತಾಲೂಕು ಕನ್ನಡ ಭಾಷಾ ಶಿಕ್ಷಕರ ಬಳಗದ ಉದ್ಘಾಟನಾ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಭಾಷಾ ಶಿಕ್ಷಕರು ಉತ್ತಮ ರೀತಿಯಲ್ಲಿ ಕನ್ನಡ ಭಾಷೆಯನ್ನು ಕಲಿಸಿ
  • ಕನ್ನಡ ಭಾಷಾ ಕಲಿಕೆ ಬಹಳ ಮುಖ್ಯ.
  • ಮಕ್ಕಳಿಗೆ ಭಾಷೆ ಬಳಕೆಯೇ ಗೊತ್ತಿಲ್ಲ.
ಮೈಸೂರು: ಮೊಬೈಲ್‌ನಲ್ಲಿ ಕಳೆದುಹೋಗಿರುವ ಮಕ್ಕಳಿಗೆ ಕನ್ನಡ ಭಾಷೆ ಮೇಲೆ ಹಿಡಿತವೇ ಇಲ್ಲ. ಇದು ಶೈಕ್ಷಣಿಕ ಬೆಳವಣಿಗೆ ದುರ್ಬಲಗೊಳಿಸುತ್ತಿದೆ. ಆದ್ದರಿಂದ ಕನ್ನಡ ಭಾಷಾ ಶಿಕ್ಷಕರು ಉತ್ತಮ ರೀತಿಯಲ್ಲಿ ಕನ್ನಡ ಭಾಷೆಯನ್ನು ಕಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯಕುಮಾರ್ ತಿಳಿಸಿದರು.
ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ತಾಲೂಕು ಕನ್ನಡ ಭಾಷಾ ಶಿಕ್ಷಕರ ಬಳಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷಾ ಕಲಿಕೆ ಬಹಳ ಮುಖ್ಯ. ಆದರೆ, ಈಗಿನ ಮಕ್ಕಳಿಗೆ ಭಾಷೆ ಬಳಕೆಯೇ ಗೊತ್ತಿಲ್ಲ. ಆಡು ಭಾಷೆ, ಗ್ರಾಂಥಿಕ ಭಾಷೆ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಆದ್ದರಿಂದ ಕನ್ನಡ ಭಾಷಾ ಶಿಕ್ಷಕರು ಅರ್ಥಪೂರ್ಣವಾಗಿ ಕನ್ನಡ ಭಾಷೆಯನ್ನು ಕಲಿಸಬೇಕು. ಕಾಗುಣಿತ, ಒತ್ತಕ್ಷರವನ್ನು 8ನೇ ತರಗತಿಯೊಳಗೆ ಮಕ್ಕಳಿಗೆ ಸರಿಯಾಗಿ ಕಲಿಸಬೇಕು. ಇದರಿಂದ ಮುಂದಿನ ಹಂತದ ಕಲಿಕೆ, ಓದಿನಲ್ಲಿ ಎದುರಾಗುವ ವೈಫಲ್ಯವನ್ನು ತಡೆಯಬಹುದಾಗಿದೆ ಎಂದರು.
ಮೊಬೈಲ್‌ನಲ್ಲಿ ದೊರೆಯುತ್ತಿರುವ ಲಘು ಮನರಂಜನೆಯಲ್ಲಿ ಮಕ್ಕಳು ಮುಳುಗಿ ಹೋಗಿದ್ದಾರೆ. ಇದರಿಂದಾಗಿ ಓದು-ಬರವಣಿಗೆ ಕಡಿಮೆಯಾಗಿದ್ದು, ಕಲಿಕೆಯೂ ಕ್ಷೀಣಿಸಿದೆ. ಆದ್ದರಿಂದ ಶಿಕ್ಷಕರು ಉನ್ನತ ಬೋಧನೆಯೊಂದಿಗೆ ಅವರಲ್ಲಿ ಗುಣಮಟ್ಟದ ಶಿಕ್ಷಣ ಕಲಿಸಬೇಕು. ಭಾಷಾ ಅಭಿಮಾನವನ್ನೂ ಮೂಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು ಮಾತನಾಡಿ, ಕನ್ನಡ ಭಾಷೆ, ಕನ್ನಡ ಶಾಲೆಗಳ ಕುರಿತು ಹಿಂಜರಿಕೆ ಈಗಲೂ ಇದೆ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇದನ್ನು ನಿವಾರಿಸಲು ಕನ್ನಡ ಭಾಷಾ ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮ ಬೋಧನೆ ಮಾಡುವ ಶಿಕ್ಷಕರು ಆಂಗ್ಲ ಮಾಧ್ಯಮದಲ್ಲಿ ಮಾಡುವ ಪತ್ರ ವ್ಯವಹಾರವನ್ನು ಬಿಡಬೇಕು. ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡದಲ್ಲೇ ಎಲ್ಲರೂ ವ್ಯವಹರಿಸಬೇಕು. ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಭಾಷಾ ಬಳಕೆಯನ್ನು ಹೆಚ್ಚಿಸಬೇಕು ಎಂದರು.
ಕನ್ನಡ ಶಾಲೆ, ಕನ್ನಡ ಭಾಷೆ ಉಳಿದರೆ ಕನ್ನಡ ಉಳಿಯುತ್ತದೆ. ಕನ್ನಡ ಭಾಷೆಯಲ್ಲೇ ಮಕ್ಕಳು ವ್ಯವಹರಿಸುವ, ಆಲೋಚಿಸುವ, ಚಿಂತಿಸುವ, ಕಲಿಯುವ, ವಿಮರ್ಶಿಸುವ, ಓದುವ-ಬರೆಯುವ ಭಾಷಾ ಕೌಶಲವನ್ನು ಶಿಕ್ಷಕರು ಕಲಿಸಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ ಮಾತನಾಡಿ, ಶಾಲಾ ಶಿಕ್ಷಕರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದಾಗ್ಯೂ, ಇದು ಮಕ್ಕಳಿಗೆ ಬೋಧನೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವಿವಿಧ ಇಲಾಖೆಯ ನೌಕರರಿಗೆ ದೊರೆಯುವಂತೆ ಸರ್ಕಾರಿ ಶಾಲಾ ಶಿಕ್ಷಕರಿಗೆ ಬಡ್ತಿ ದೊರೆಯುತ್ತಿಲ್ಲ. 25-30 ವರ್ಷವಾದರೂ ಶಿಕ್ಷಕರಾಗಿಯೇ ಕೆಲಸ ಮಾಡುತ್ತಿದ್ದಾರೆ. ಮಾಸಿಕ ಗೌರವಧನ ರೂಪದಲ್ಲಿ ಕೇವಲ 12,500 ರೂ. ನೀಡಿ ಅತಿಥಿ ಉಪನ್ಯಾಸಕರಿಗೆ ಅವಮಾನ ಮಾಡಲಾಗುತ್ತಿದೆ. 
ದಿನಗೂಲಿ ಕಾರ್ಮಿಕರು ಇದಕ್ಕಿಂತ ಹೆಚ್ಚು ದುಡಿಯುತ್ತಿದ್ದಾರೆ. ಪ್ರಾಥಮಿಕ, ಪ್ರೌಢ, ಪಿಯು, ಪದವಿ, ವಿಶ್ವವಿದ್ಯಾಲಯದವರೆಗೆ ರಾಜ್ಯದಲ್ಲಿ 75 ಸಾವಿರ ಬೋಧಕರ ಹುದ್ದೆಗಳು ಖಾಲಿಯಾಗಿವೆ. ಈ ಎಲ್ಲ ವಿಷಯಗಳನ್ನು ಸದನದಲ್ಲಿ ಮಂಡಿಸಿ ನ್ಯಾಯಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕನ್ನಡದ ಮನೆ-ಮನಗಳು ಇದೀಗ ಆಂಗ್ಲಮಯವಾಗಿವೆ. ಕನ್ನಡ ಭಾಷೆ ಕಳೆದುಹೋಗುತ್ತಿದೆ. ಇದನ್ನು ಉಳಿಸಿ-ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಕನ್ನಡ ಭಾಷಾ ವಿಷಯದಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯಲು ಶ್ರಮಿಸಿದ ಕನ್ನಡ ಭಾಷಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ‘ಪರೀಕ್ಷಾ ಸಾರಥಿ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಬಳಗದ ಅಧ್ಯಕ್ಷ ಹು.ವ.ಮಹದೇವಪ್ರಸಾದ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಸಹ ಶಿಕ್ಷಕರ ಸಂಘದ ಮುರಳಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net