ಮೈಸೂರು: ಕಾಲ ಕಾಲಕ್ಕೆ ನೀರಿನ ಪೈಪ್‌ಲೈನ್‌ಗಳನ್ನು ಪರಿಶೀಲಿಸಿ, ಒಡೆದ ಪೈಪ್‌ಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.
ನೀರಿನ ಸಮಸ್ಯೆ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರು ಮೋಳೆ, ಬಿಳಿಗೆರೆ ಗ್ರಾಮ ಪಂಚಾಯಿತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ನೀರಿನ ಅಭಾವ ಕಂಡು ಬಂದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಕೆಳ ಹಂತದಲ್ಲೇ ಸಮಸ್ಯೆ ಸರಿಪಡಿಸಿಕೊಳ್ಳಬೇಕು. ನೀರು ಬಿಡುವ ಅವಧಿಯನ್ನು ನಿಗದಿಪಡಿಸಿ, ಸರಿಯಾದ ಸಮಯಕ್ಕೆ ವಾಟರ್‌ಮನ್ ಮೂಲಕ ನೀರು ಸರಬರಾಜು ಮಾಡಿಸಿ. ಈಗ ಎಲ್ಲ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಹಬ್ಬಗಳು ನಡೆಯುತ್ತವೆ. ಈ ವೇಳೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು ಎಂದು ಪಿಡಿಒಗಳಿಗೆ ತಾಕಿತ್ತು ಮಾಡಿದರು.
ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ನೀರನ್ನು ಮಿತವಾಗಿ ಬಳಸಬೇಕು. ಸಮರ್ಪಕವಾಗಿ ಉಪಯೋಗಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತಲೆ ದೋರುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದು, ಹಲವು ಮನೆಗಳಲ್ಲಿ ನಲ್ಲಿ ಪೈಪ್‌ಗಳಿಗೆ ಮೋಟಾರ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ಎಲ್ಲ ಮನೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ದೂರಿದರು.
ನಂಜನಗೂಡು ಹಾಗೂ ವರುಣ ಕ್ಷೇತ್ರದ 62 ಹಳ್ಳಿಗಳಿಗೆ ನೀರು ಪೂರೈಸುವ ದೊಡ್ಡ ಕವಲಂದೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಪುನಶ್ಚೇತನ ಕಾಮಗಾರಿಯ ಪ್ರಗತಿ ಬಗ್ಗೆ ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ರಾಮೀಣ ನೀರು ಸರಬರಾಜು ಕಾರ್ಯ ಪಾಲಕ ಇಂಜಿನಿಯರ್ ರಾಮಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನು, ಕಿರಿಯ ಸಹಾಯಕ ಇಂಜಿನಿಯರ್ ಪ್ರವೀಣ್, ಹದಿನಾರು ಪಿಡಿಒ ಪ್ರದೀಪ್, ಬಿಳಿಗೆರೆ ಪಿಡಿಒ ಗಣೇಶ್ ಹಾಜರಿದ್ದರು.