ಮಾನದಂಡ ಪರಿಶೀಲಿಸಿ ವಸ್ತುಗಳನ್ನು ಖರೀದಿಸಿ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎ.ಕೆ.ನವೀನಕುಮಾರಿ ಸಲಹೆ

ಶಾರದ ವಿಲಾಸ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಎ.ಕೆ.ನವೀನ ಕುಮಾರಿ ಉದ್ಘಾಟಿಸಿದರು. ಕೆ.ಕೆ.ಅಮರನಾಥ್, ಎಂ.ಕೆ.ಲಲಿತಾ, ಡಾ.ಮಂಟೇಸ್ವಾಮಿ, ಆರ್.ದಿನೇಶ್, ಡಾ.ಎಂ.ದೇವಿಕಾ, ಎನ್.ಶ್ರೀಧರ್ ಇದ್ದರು.
ಶಾರದ ವಿಲಾಸ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಎ.ಕೆ.ನವೀನ ಕುಮಾರಿ ಉದ್ಘಾಟಿಸಿದರು. ಕೆ.ಕೆ.ಅಮರನಾಥ್, ಎಂ.ಕೆ.ಲಲಿತಾ, ಡಾ.ಮಂಟೇಸ್ವಾಮಿ, ಆರ್.ದಿನೇಶ್, ಡಾ.ಎಂ.ದೇವಿಕಾ, ಎನ್.ಶ್ರೀಧರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ವಸ್ತುಗಳಿಗೆ ಒಂದು ಮಾನದಂಡ ಇರುತ್ತದೆ. ಅದರ ಬಗ್ಗೆ ಗ್ರಾಹಕರು ತಿಳಿದುಕೊಳ್ಳಬೇಕು
  • ಗ್ರಾಹಕರು ಒಂದು ರೂಪಾಯಿ ಮೋಸ ಹೋದರೂ ಗ್ರಾಹಕ ಸಂರಕ್ಷಣೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ
ಮೈಸೂರು:ವಸ್ತುಗಳನ್ನು ಖರೀದಿಸುವಾಗ ಬಹುಮುಖ್ಯವಾಗಿ ಉಪಯೋಗಿಸುವ ಅವಧಿ, ಸರ್ಕಾರ ನಿಗದಿಪಡಿಸುವ ಮಾನದಂಡಗಳನ್ನು ಪರಿಶೀಲಿಸಬೇಕು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎ.ಕೆ.ನವೀನಕುಮಾರಿ ಹೇಳಿದರು.
ಜಿಲ್ಲಾಡಳಿತ, ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶಾರದ ವಿಲಾಸ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವಸ್ತುಗಳಿಗೆ ಒಂದು ಮಾನದಂಡ ಇರುತ್ತದೆ. ಅದರ ಬಗ್ಗೆ ಗ್ರಾಹಕರು ತಿಳಿದುಕೊಳ್ಳಬೇಕು. ಆಹಾರದ ಪೊಟ್ಟಣ ಖರೀದಿಸುವಾಗ ಅವಧಿಯನ್ನು ಪರಿಶೀಲಿಸಬೇಕು. ಚಿನ್ನಾಭರಣ ಖರೀದಿಸುವಾಗ ವಸ್ತುವಿನ ಮೇಲೆ ಐಎಸ್‌ಐ, ಹಾಲ್ಮಾರ್ಕ್‌ನಂತಹ ಚಿಹ್ನೆಗಳನ್ನು ನೋಡಬೇಕು. ಇಂತಹ ಚಿಹ್ನೆಗಳಿದ್ದಲ್ಲಿ ಆ ವಸ್ತುಗಳು ಉತ್ತಮವಾದ ಗುಣಮಟ್ಟದಿಂದ ಕೂಡಿದ್ದು ಸರ್ಕಾರದಿಂದ ದೃಢೀಕರಿಸಿ ಮಾರುಕಟ್ಟೆಗೆ ಬಂದಿರುತ್ತದೆ ಎಂದರ್ಥ ಎಂದರು.
ವಿಶ್ವ ಗ್ರಾಹಕರ ದಿನಾಚರಣೆಯನ್ನು ಭಾರತದಲ್ಲಿ 1986ರಲ್ಲಿ ಜಾನ್ ಕೆನಡಿಯನ್ ಜಾರಿಗೆ ತಂದರು. ಗ್ರಾಹಕ ಸಂರಕ್ಷಣೆ ಕಾಯ್ದೆ-2019ರಲ್ಲಿ ಹಲವಾರು ರೀತಿಯ ತಿದ್ದುಪಡಿಗಳನ್ನು ಮಾಡಲಾಯಿತು ಮತ್ತು ಗ್ರಾಹಕರಿಗೆ ಹಲವಾರು ಸೇವೆಗಳನ್ನು ಸೇರಿಸಲಾಗಿತ್ತು. ಈ ಗ್ರಾಹಕ ಸಂರಕ್ಷಣಾ ಕಾಯ್ದೆ 2000ರಲ್ಲಿ ಪ್ರಗತಿ ಕಾಣಲು ಆರಂಭವಾಯಿತು ಎಂದು ಹೇಳಿದರು.
ಗ್ರಾಹಕರು ಒಂದು ರೂಪಾಯಿ ಮೋಸ ಹೋದರೂ ಗ್ರಾಹಕ ಸಂರಕ್ಷಣೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಗ್ರಾಹಕರು ಆಯೋಗಕ್ಕೆ ಹೋಗದೆಯೂ ಆನ್‌ಲೈನ್ ಮೂಲಕವೂ ದೂರು ದಾಖಲಿಸುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ ಎಂದರು.
ಬ್ಯಾಂಕ್‌ನವರು ನಿಗದಿತ ಬಡ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ಗ್ರಾಹಕರ ಮೇಲೆ ಹಾಕಿದರೆ ಜಾಹೀರಾತುಗಳನ್ನು ನಂಬಿ ಮೋಸ ಹೋದರು ಸಹ ದೂರು ದಾಖಲಿಸಬಹುದು. ವಿಮಾ ಕಂಪನಿಗಳು ಮೋಸ ಮಾಡಿದಾಗ, ವೈದ್ಯಕೀಯ ವಸ್ತು ಹಾಗೂ ಔಷಧಗಳ ಖರೀದಿಯಲ್ಲಿ ಮೋಸ ಮಾಡಿದಾಗ ಮೆಡಿಕಲ್ ನಿರ್ಲಕ್ಷೃದಿಂದ ತಪ್ಪಾದಾಗ ಗ್ರಾಹಕರ ಕಾಯ್ದೆಯಡಿ ಪರಿಹಾರ ಪಡೆದುಕೊಳ್ಳುವಂತಹ ಹಕ್ಕನ್ನು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಎಂ.ಕೆ.ಲಲಿತಾ ಮಾತನಾಡಿ, ವಿಶ್ವ ಗ್ರಾಹಕರ ದಿನವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ಮೂಲಕ ಇಂದಿನ ದಿನಮಾನಗಳಲ್ಲಿ ಗ್ರಾಹಕರು ಅತಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
2019ರ ಕಾಯ್ದೆಯ ಪ್ರಕಾರ 18 ವರ್ಷ ತುಂಬಿದ ಯಾವುದೇ ವ್ಯಕ್ತಿ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಬಹುದು. ಅದಕ್ಕೂ ಮುನ್ನ ನಿಮ್ಮ ಬಳಿ ಸೂಕ್ತ ದಾಖಲೆಗಳು ಇರಬೇಕು. ಪ್ರತಿಯೊಬ್ಬ ಗ್ರಾಹಕನು ಯಾವುದೇ ವಸ್ತುವನ್ನು ಖರೀದಿಸಿದರು ಅದರ ರಸೀದಿಯನ್ನು ಪಡೆದುಕೊಳ್ಳಬೇಕು. ಮುಂದೆ ಯಾವುದೇ ತೊಂದರೆಗಳಾದರೂ ಈ ರಸೀದಿಗಳ ಮುಖಾಂತರ ದೂರಗಳನ್ನು ದಾಖಲಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಕೆ.ಅಮರನಾಥ್ ಮಾತನಾಡಿ, ವಸ್ತುಗಳನ್ನು ಖರೀದಿಸಿದಾಗ ಪಡೆಯುವ ರಸೀದಿಯಲ್ಲಿ ಜಿಎಸ್‌ಟಿ ಸಂಖ್ಯೆ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮೋಸ ಹೋದ ಸಂದರ್ಭದಲ್ಲಿ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಟೇಸ್ವಾಮಿ, ಶಾರದ ವಿಲಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ದಿನೇಶ್, ಪ್ರಾಂಶುಪಾಲೆ ಡಾ.ಎಂ.ದೇವಿಕಾ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಶ್ರೀಧರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net