ಎಚ್‌ಡಿಕೆ ಸಿಎಂ ಆಗಲು ಚಾಮುಂಡೇಶ್ವರಿ ಕ್ಷೇತ್ರವೇ ಕಾರಣ

 ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ
  • ಜೆಡಿಎಸ್‌ನಿಂದಲೇ ಸ್ಪರ್ಧೆಗೆ ಜನರ ಒಲವು
ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆನ್ನುವ ಸಲುವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಕುಮಾರ ಪರ್ವ ಆರಂಭಿಸಿದೆವು. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಲು ಚಾಮುಂಡೇಶ್ವರಿ ಕ್ಷೇತ್ರದ ಶಕ್ತಿಯೇ ಕಾರಣ. ಅದೇ ಕ್ಷೇತ್ರದ ಜನರು ಇಂದಿಗೂ ನನ್ನೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

‘ಜೆಡಿಎಸ್‌ನಿಂದ ಜಿಟಿಡಿ ಅವರು ಎರಡು ಕಾಲನ್ನು ಹೊರಗಿಟ್ಟಿದ್ದಾರೆ’ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂದು ಓಡಾಡುತ್ತಿದ್ದಾರೆ. ನಾನು ಅವರ ಹೇಳಿಕೆಯನ್ನು ಗಮನಿಸಿಲ್ಲ ಎಂದರು.

ಕ್ಷೇತ್ರದ ಜನರು ಮತ್ತೆ ಸ್ಪರ್ಧೆ ಮಾಡಬೇಕು. ನೀವೇ ಶಾಸಕರಾಗಿ ಗೆಲ್ಲಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ, ವಿಶ್ವಾಸದಿಂದ ಇದ್ದಾರೆ ಎಂದರು. ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವನ್ನು ಉಳಿಸಿಕೊಳ್ಳಲು ಎಚ್.ಡಿ.ದೇವೇಗೌಡರು ಶ್ರಮಿಸಿದ್ದಾರೆ. ಈಗ ಕುವಾರಸ್ವಾಮಿ ಅದನ್ನು ಮುಂದುವರಿಸಿದ್ದಾರೆ. ನಾನು ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ತಕ್ಷಣವೇ ಜಿಟಿಡಿ ಕಾಂಗ್ರೆಸ್ ಸೇರುತ್ತಾರೆ ಎಂದು ಮಾತನಾಡಿದರು. ಹಾಗಾದರೆ ನಾನು ಕಾಂಗ್ರೆಸ್ ಸೇರಿದ್ದೇನೆಯೇ? ಜಾ.ದಳದಲ್ಲಿ ಇಲ್ಲವೇ ಎಂದು ತಮ್ಮ ಪಕ್ಷನಿಷ್ಠೆಯನ್ನು ಸಮರ್ಥಿಸಿಕೊಂಡರು.
ಯಾವ ಕುಟುಂಬದಲ್ಲಿ ವ್ಯತ್ಯಾಸ ಇರುವುದಿಲ್ಲ. ಎಲ್ಲ ಕಡೆಗಳಲ್ಲಿ ಸಣ್ಣಪುಟ್ಟ ಮನಸ್ತಾಪ ಇರುವುದು ಸಹಜ. ವೈಮನಸ್ಸು ಹಾಗೆಯೇ ಮುಂದುವರಿಯುತ್ತದೆ ಅಂತೇನಾದರೂ ಕೆಲವರು ಭಾವಿಸಿದ್ದರೆ ಮೂರ್ಖತನವಾಗಲಿದೆ ಎಂದರು.

ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಲು ಹೋಗಲ್ಲ. ಯಾವುದೇ ಸರ್ಕಾರವಾಗಲಿ ಅಥವಾ ಯಾರೇ ಮುಖ್ಯಮಂತ್ರಿಯಾಗಿದ್ದರೂ ರಾಜಕೀಯ ಮಾಡಲು ಹೋಗಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಕೊಟ್ಟಂತೆ ಚಾಮುಂಡೇಶ್ವರಿ ಕ್ಷೇತ್ರಕ್ಕೂ 25 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಶೇಷ ಅನುದಾನ ಕೊಡುವಂತೆ ಭೇಟಿ ಮಾಡಿ ಮನವಿ ಮಾಡಿದ್ದೆ. ಉಪ ಚುನಾವಣೆ ಮುಗಿದ ಬಳಿಕ ಕೊಡುವ ಭರವಸೆ ಕೊಟ್ಟಿದ್ದರು. ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟ ಮೇಲೂ ಭೇಟಿ ಮಾಡಿದಾಗ ಅನುದಾನದ ವಿಚಾರ ಪ್ರಸ್ತಾಪವನ್ನು ಜ್ಞಾಪಿಸಿದ ಮೇಲೆ ಮಾತನಾಡುತ್ತೇನೆ ಎಂದಿದ್ದರು. ಮೊನ್ನೆ ಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಅವರನ್ನು ವರ್ಗಾವಣೆ ವಿಚಾರದಲ್ಲಿ ಭೇಟಿ ಮಾಡಿದ್ದನ್ನು ಬಿಟ್ಟರೆ ಅನುದಾನದ ವಿಷಯ ಪ್ರಸ್ತಾಪಿಸಲಿಲ್ಲ. ಮುಂದೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸುವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net