ಶ್ರೀರಾಮಕೃಷ್ಣ ಆಶ್ರಮದಲ್ಲಿ ಮೇಳೈಸಿದ ಶತಮಾನೋತ್ಸವ ಸಂಭ್ರಮ..!

ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಸ್ವಾಮಿ ಗೌತಮಾನಂದಜಿ ಮಹಾರಾಜ, ಎಚ್.ಕೆ.ಪಾಟೀಲ್, ಸ್ವಾಮಿ ರಾಘವೇಶಾನಂದಜಿ, ಸ್ವಾಮಿ ಮುಕ್ತಿದಾನಂದ, ಡಾ.ಡಿ.ಮಾದೇಗೌಡ,  ಜಿ.ಹರೀಶ್ ಪಾಲ್ಗೊಂಡಿದ್ದರು.
ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಸ್ವಾಮಿ ಗೌತಮಾನಂದಜಿ ಮಹಾರಾಜ, ಎಚ್.ಕೆ.ಪಾಟೀಲ್, ಸ್ವಾಮಿ ರಾಘವೇಶಾನಂದಜಿ, ಸ್ವಾಮಿ ಮುಕ್ತಿದಾನಂದ, ಡಾ.ಡಿ.ಮಾದೇಗೌಡ, ಜಿ.ಹರೀಶ್ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಣ್ಯರಿಂದ ಶತಮಾನದ ನೆನಪುಗಳ ಸ್ಮರಣೆ
  • ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ
  • 300 ಜನ ಪೌರಕಾರ್ಮಿಕರಿಗೆ ನಾರಾಯಣಪೂಜೆ
  • ವಿಶೇಷ ಅಂಚೆ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್, ‘ಶ್ರೀರಾಮಕೃಷ್ಣ ಆಶ್ರಮ-100 ವರ್ಷಗಳು’ ವಿಡಿಯೋ ಬಿಡುಗಡೆ
ಮೈಸೂರು: ‘ತನ್ನ ಮುಕ್ತಿಗಾಗಿ ಮತ್ತು ಜಗತ್ತಿನ ಹಿತಕ್ಕಾಗಿ’ ಎಂಬ ಆಶಯದೊಂದಿಗೆ ಆಧ್ಯಾತ್ಮಿಕ, ಶಿಕ್ಷಣ, ಸಮಾಜ ಸೇವೆ ಮಾಡುತ್ತಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ನಾಲ್ಕು ದಿನಗಳ ಶತಮಾನೋತ್ಸವಕ್ಕೆ ಅರ್ಥಪೂರ್ಣವಾಗಿ ಚಾಲನೆ ದೊರೆಯಿತು.
ಯಾದವಗಿರಿಯ ಆಶ್ರಮದ ಶಾಲಾ ಆವರಣದಲ್ಲಿ ಸಂಜೆ ಆಯೋಜಿಸಿದ್ದ ಶತಮಾನೋತ್ಸವ(1925-2025) ಸಮಾರಂಭದಲ್ಲಿ 100 ವರ್ಷಗಳ ಸಾರ್ಥಕ ಸೇವೆಯನ್ನು ಸ್ಮರಿಸಲಾಯಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದೇಶ- ವಿದೇಶಗಳಿಂದ ಆಗಮಿಸಿದ ಸ್ವಾಮೀಜಿಗಳು, ಮಾತೆಯರು, ಪ್ರತಿನಿಧಿಗಳು, ಗಣ್ಯರು, ಶಾಲೆಯ ಹಳೇ ವಿದ್ಯಾರ್ಥಿಗಳು ಸಾಕ್ಷಿಯಾದರು.
ಕೋಲ್ಕತ್ತಾದಲ್ಲಿರುವ ರಾಮಕೃಷ್ಣಮಠ, ರಾಮಕೃಷ್ಣ ಮಿಷನ್, ಬೇಲೂರು ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ ಸಾನ್ನಿಧ್ಯದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಉತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಶೇಷ ಅಂಚೆ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್, ‘ಶ್ರೀರಾಮಕೃಷ್ಣ ಆಶ್ರಮ-100 ವರ್ಷಗಳು’ ವಿಡಿಯೋ ಬಿಡುಗಡೆಗೊಳಿಸಲಾಯಿತು.
ಎಚ್.ಕೆ.ಪಾಟೀಲ ಅವರು ಮಾತನಾಡಿ, ರಾಮಕೃಷ್ಣ ಆಶ್ರಮವು ಜ್ಞಾನ, ಸಮಾಜಸೇವೆ, ಶಿಕ್ಷಣ ಯಜ್ಞ ಮಾಡುತ್ತಿದೆ. ಯಾರೂ ಗಮನ ನೀಡದಂತಹ ಗ್ರಾಮ ಸೇವೆಯನ್ನೂ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಆಶಯವನ್ನು ನನಸು ಮಾಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನಾದರ, ಅಗೌರವಕ್ಕೆ ಒಳಗಾಗಿರುವ ಬಡ, ರೋಗಿಗಳು ದೇವೋಭವ ಎಂದು ವಿವೇಕಾನಂದರು ಕರೆದರು. ಇವರನ್ನು ದೇವರು ಎಂದು ಭಾವಿಸಬೇಕೆಂಬ ಸಂದೇಶ ಮಹತ್ವದಾಗಿದೆ. ಪ್ರತಿ ಜೀವದಲ್ಲಿ ದೇವರು ಕಾಣಬೇಕೆಂಬ ಮತ್ತೊಂದು ವಿವೇಕವಾಣಿ ಎಲ್ಲೆಡೆ ಪ್ರಜ್ವಲಿಸಬೇಕಿದೆ ಎಂದರು.
ನೈತಿಕತೆ, ಭ್ರಾತೃತ್ವ, ಸಮಾನತೆ ದಾರಿಯಲ್ಲಿ ಸಾಗದ ಆಶ್ರಮ, ಸಂಘ-ಸಂಸ್ಥೆಗಳಿಂದ ಮನುಕುಲಕ್ಕೆ ಏನು ಪ್ರಯೋಜನವಿಲ್ಲ. ಇದಕ್ಕೆ ಹೊರತಾಗಿರುವ ರಾಮಕೃಷ್ಣ ಆಶ್ರಮವು ಸರ್ವಜನಾಂಗದ ಶಾಂತಿ ತೋಟ ಎಂಬ ಕುವೆಂಪು ಮಾತನ್ನು ಅಕ್ಷರಶಃ ಅನುಷ್ಠಾನ ಮಾಡುತ್ತಿದೆ ಎಂದರು.
ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ರಾಮಕೃಷ್ಣ ಆಶ್ರಮದ ಕೊಡುಗೆ ಅಪಾರ. ಕುವೆಂಪು ಅವರು ಇಷ್ಟು ಎತ್ತರಕ್ಕೆ ಬೆಳೆಯಲು, ಶಿಕ್ಷಣ-ಸಂಸ್ಕೃತಿ-ಭಾಷಾ ಪ್ರಬುದ್ಧತೆ ಬೆಳೆಯಲು ಆಶ್ರಮದ ಪ್ರಭಾವ ಮತ್ತು ಅನುಭಾವ ಕಾರಣವಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರು ಈ ಜಗತ್ತು ಕಂಡು ಶ್ರೇಷ್ಠ ಸಂತರು. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರು ಪರಸ್ಪರ ಭೇಟಿ ಮಾಡಿಲ್ಲ. ಆದರೆ, ಅವರ ಆಶಯ ಒಂದೇ ಆಗಿತ್ತು. ಜಾತಿ-ಅಸ್ಪಶ್ಯತೆ ವಿನಾಶ ಅಂಬೇಡ್ಕರ್ ಹೋರಾಟವಾಗಿದ್ದರೆ, ವಿವೇಕಾನಂದರು ಜಾತಿ-ಅಸ್ಪಶ್ಯತೆ ಖಂಡಿಸಿ, ಎಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಧರ್ಮ ಮತ್ತು ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು ಎಂದರು.
ಊಟಿ ರಾಮಕೃಷ್ಣಮಠದ ಸ್ವಾಮಿ ರಾಘವೇಶಾನಂದಜಿ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ಮಾಜಿ ಎಂಎಲ್‌ಸಿ ಡಾ.ಡಿ.ಮಾದೇಗೌಡ, ಕರ್ನಾಟಕ ಅಂಚೆ ವೃತ್ತದ ಮುಖ್ಯ ಅಂಚೆ ಅಧೀಕ್ಷಕ ಜಿ.ಹರೀಶ್ ಪಾಲ್ಗೊಂಡಿದ್ದರು.

ಪೌರಕಾರ್ಮಿಕರಿಗೆ ನಾರಾಯಣಪೂಜೆ

ಇದಕ್ಕೂ ಮುನ್ನ 300 ಜನ ಪೌರಕಾರ್ಮಿಕರಿಗೆ ನಾರಾಯಣಪೂಜೆ ಸಲ್ಲಿಸಲಾಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಡಪ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಅನುಪಮಾನಂದಜಿ, ಹಲಸೂರು ರಾಮಕೃಷ್ಣಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ, ಶಾಸಕ ಜಿ.ಟಿ.ದೇವೇಗೌಡ ಇತರರು ಪಾಲ್ಗೊಂಡಿದ್ದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸ್ಮರಣ ಸಂಚಿಕೆ, ‘ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು’ ಗ್ರಂಥ, ಆಶ್ರಮದ ಇತಿಹಾಸ, ಪರಿಷ್ಕೃತ ಗ್ರಂಥದ ಲೋಕಾರ್ಪಣೆಗೊಳಿಸಲಾಯಿತು. ಶ್ರೀರಾಮಕೃಷ್ಣ ಆಶ್ರಮದ ಚೆನ್ನೈ ಅಧ್ಯಕ್ಷ ಸ್ವಾಮಿ ಸತ್ಯಜ್ಞಾನಾನಂದಜಿ, ವೆಂಕಟಾಪುರದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದಜಿ, ಮೈಸೂರು ಮಾಜಿ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜಿ ಭಾಗಿಯಾಗಿದ್ದರು.

ವಿವೇಕ ಸ್ಮಾರಕಕ್ಕೆ ರಾಜಿ ಮಾಡಿಸಿದ್ದೆ

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರ ಮತ್ತು ವಿವೇಕ ಸ್ಮಾರಕ ನಿರ್ಮಾಣದ ಕುರಿತು ಉಂಟಾಗಿದ್ದ ವಿವಾದ ಇದೀಗ ಬಗೆಹರಿದಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸರ್ಕಾರಿ ಶಾಲೆಯನ್ನು ನೆಲಸಮಗೊಳಿಸಿ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿತ್ತು. ಸಂಘರ್ಷ ಉಂಟಾಗಬಾರದೆಂದು ಎರಡು ಕಡೆಯವರನ್ನು ಕರೆದು 2 ಬಾರಿ ಸಂಧಾನ ಮಾಡಿ ರಾಜಿ ಸೂತ್ರ ಮಾಡಿದ್ದೆ. ಇದರಿಂದ ಸಮಸ್ಯೆ ನಿವಾರಣೆಯಾಗಿದೆ ಎಂದರು.

ಸಿಎಂ ಗೈರು

ಶ್ರೀರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾದರು. ಮೆಕ್ಕೆಜೋಳ ಬೆಲೆ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ನಗರಕ್ಕೆ ಬರುವುದು ತಡವಾಯಿತು. ಹೀಗಾಗಿ, ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬರಲಿಲ್ಲ. ಸಂಜೆ ನಡೆದ ಇತರ ಎರಡು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net