ಸಂಭ್ರಮದಿಂದ ಮಹನೀಯರ ಜಯಂತಿ ಆಚರಿಸಿ

ಪಿರಿಯಪಟ್ಟಣ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್, ನ್ಯಾಯಾಧೀಶೆ ಜೆ.ಶ್ವೇತಾ ಇತರರಿದ್ದರು.
ಪಿರಿಯಪಟ್ಟಣ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್, ನ್ಯಾಯಾಧೀಶೆ ಜೆ.ಶ್ವೇತಾ ಇತರರಿದ್ದರು.
Published on
ಪಿರಿಯಾಪಟ್ಟಣ: ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹನೀಯರ ಜಯಂತಿಗಳನ್ನು ನಾವು ಸಂಭ್ರಮದಿಂದ ಆಚರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.
ಪಟ್ಟಣದ ವಕೀಲರ ಭವನದಲ್ಲಿ ವಕೀಲರ ಸಂಘ ಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ಸಮಾನತೆಯನ್ನು ಪ್ರತಿಪಾದಿಸಿ ಅದನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಅಂಬೇಡ್ಕರ್ ಬದ್ಧತೆ ತೋರಿದರು. ನಂತರ ರಚನೆಯಾದ ಎಲ್ಲ ಕಾನೂನುಗಳಲ್ಲಿ ಸಮಾಜಕ್ಕೆ ಬೇಕಾದ ಹಕ್ಕು, ಸೌಲಭ್ಯ ಮತ್ತಿತರ ಅಂಶಗಳನ್ನು ಸೇರಿಸಿದರು. ಯಾವುದೇ ಸುಧಾರಣೆ ಒಮ್ಮೆಲೇ ಸಂಭವಿಸುವುದಿಲ್ಲ. ಅದು ಕಾಲಕಾಲಕ್ಕೆ ಆಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ಸಂವಿಧಾನದ ಶಕ್ತಿ ಏನು ಎಂಬುದನ್ನು ಅರಿಯಬೇಕಾದರೆ ಸಾಮಾನ್ಯ ರೈತನ ಮಗ, ಟೀ ಮಾಡುತ್ತಿದ್ದವರು ದೇಶದ ಪ್ರಧಾನಿಯಾಗಿದ್ದಾರೆ. ಇದು ಸಂವಿಧಾನದಿಂದಲೇ ಸಾಧ್ಯ. ಅಹಿಂಸಾ ಮಾರ್ಗ ಎಂದರೆ ತೊಂದರೆ ಕೊಡುವುದನ್ನು ತಡೆಯುವುದೂ ಸಹ ಹೌದು ಎಂದು ತಿಳಿಸಿದರು.
ನ್ಯಾಯಾಧೀಶೆ ಜೆ.ಶ್ವೇತಾ ಮಾತನಾಡಿ, ಹೆಣ್ಣು ಮಕ್ಕಳು ಪ್ರತಿ ದಿನ ಅಂಬೇಡ್ಕರ್ ಅವರನ್ನು ನೆನೆಯಬೇಕಿದೆ. ಸಂವಿಧಾನದಲ್ಲಿ ಹೆಣ್ಣಿಗೆ ಹಲವು ಸಮಾನ ಹಕ್ಕುಗಳನ್ನು ನೀಡುವ ಜತೆಗೆ, ಕಾನೂನಿನ ಬಲವನ್ನೂ ನೀಡಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಮಹದೇವಯ್ಯ ಮಾತನಾಡಿ, ಅಂಬೇಡ್ಕರ್ ತಮ್ಮ ಬಾಲ್ಯದಲ್ಲಿ ಅನುಭವಿಸಿದ ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿ 32 ಪದವಿ ಪಡೆದಿದ್ದರು. ದಮನಿತರ ವರ್ಗಕ್ಕೆ ತಮ್ಮ ಹೋರಾಟದ ಹಾದಿಯಿಂದ ಪಡೆದ ಅನುಭವವನ್ನು ಮೂಲವಾಗಿಟು ್ಟಕೊಂಡು ಉತ್ತಮ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಕಾರ್ಯಕ್ರಮದ ಆಯೋಜಕರಾದ ಲೋಕೇಶ್ ಮತ್ತು ಸುಭಾಷ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net