ದಮನಿತರ ಧ್ರುವೀಕರಣಕ್ಕಿಂತ ಜಾತಿ, ಧರ್ಮ ಧ್ರುವೀಕರಣ ಮುನ್ನೆಲೆಗೆ
ಜಯನಗರ ರೈಲ್ವೆ ಗೇಟ್ ಬಳಿ ಇರುವ ಭೀಮಾ ಕೋರೆಗಾಂವ್ ವಿಜಯಸ್ತಂಭಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಭೀಮಾ ಕೋರೆಗಾಂವ್ ಯುದ್ಧದ 208ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಮಾಜಿಕ ಆಯಾಮದಲ್ಲಿ 1818ರಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧ ಜಗತ್ತಿನಲ್ಲೇ ವಿಶೇಷ ಸಮರ.
ಮೈಸೂರು: ಶೋಷಿತರ, ದಮನಿತರ ಧ್ರುವೀಕರಣಕ್ಕಿಂತ ಇದೀಗ ಜಾತಿ, ಧರ್ಮ ಧ್ರುವೀಕರಣ ಮುನ್ನೆಲೆಗೆ ಬರುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ಜೈ ಭೀಮಾ ಕೋರೆಗಾವ್ ವಿಜಯೋತ್ಸವ ಸಮಿತಿ ವತಿಯಿಂದ ಜಯನಗರ ರೈಲ್ವೆ ಗೇಟ್ ಬಳಿ ಗುರುವಾರ ಸಂಜೆ ಆಯೋಜಿಸಿದ್ದ ಭೀಮಾ ಕೋರೆಗಾಂವ್ ಯುದ್ಧದ 208ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿಗಿಂತ ಈಗಿನ ಸಾಮಾಜಿಕ ಶ್ರೇಣೀಕರಣದ ಸ್ವರೂಪವೇ ಬದಲಾಗಿದೆ. ದಲಿತರನ್ನು ಎಲ್ಲ ಜಾತಿಯವರು ತುಳಿಯುತ್ತಿದ್ದಾರೆ. ಎಲ್ಲರೂ ಸೇರಿಕೊಂಡು ಅಸ್ಪಶ್ಯತೆ ಆಚರಿಸುತ್ತಿದ್ದಾರೆ. ಈಗಲೂ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ಬೇಸರಿಸಿದರು.
20ನೇ ಶತಮಾನ ಸಂಘಟನೆ ಕಾಲ. 21ನೇ ಶತಮಾನ ವಿಘಟನೆಯ ಕಾಲ. ಹೀಗಾಗಿ, ಶೋಷಿತರು ಒಗ್ಗಟ್ಟಾಗಿ ಶೋಷಕರ ವಿರುದ್ಧ ಹೋರಾಡಬೇಕಾಗಿದೆ. ಆದರೆ, ‘ಸರ್ಕಾರಿ ಸವಲತ್ತು ಪಡೆದ ದಲಿತರು ಸ್ವಾರ್ಥಿಗಳಾಗಿ ಕ್ಷುಲ್ಲಕ ಕಾರಣಕ್ಕಾಗಿ ತಮ್ಮಲ್ಲೇ ಜಗಳವಾಡುತ್ತಿದ್ದಾರೆ’ ಎಂಬ ಡಾ.ಅಂಬೇಡ್ಕರ್ ಮಾತು ಈಗಲೂ ಅಕ್ಷರಶಃ ಸತ್ಯವೇ ಆಗಿದೆ ಎಂದು ಎಚ್ಚರಿಸಿದರು.
ಜಗತ್ತಿನ 4ನೇ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿರುವ ಭಾರತದ ಶೇ.60ರಷ್ಟು ಸಂಪತ್ತನ್ನು ಶೇ.1ರಷ್ಟಿರುವ ಶ್ರೀಮಂತರು ಅನುಭವಿಸುತ್ತಿದ್ದಾರೆ. ಇದು ಸಮಾನತೆಯೇ? ಇದು ಯಾರಿಗೆ ಲಾಭ? ಸಾಮಾಜಿಕ, ಆರ್ಥಿಕ, ರಾಜಕೀಯ ಶೋಷಣೆಯೇ ವಿಜೃಂಭಿಸುತ್ತಿದೆ.
ಮಾನವತಾವಾದಕ್ಕಿಂತ ಜಾತಿ, ಧಾರ್ಮಿಕ ಮೂಲಭೂತವಾದವೇ ಮೇಲುಗೈ ಸಾಧಿಸುತ್ತಿದೆ. ಭೀಮಾ ಕೋರೆಗಾಂವ್ ಸಮರದ ಸ್ಫೂರ್ತಿ ಪಡೆದುಕೊಂಡು ಪ್ರಜಾಸತಾತ್ಮಕ ಮಾರ್ಗದಲ್ಲಿ ಬಂಡವಾಳಶಾಹಿ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದರು.
ಆರ್ಥಿಕ ಕೇಂದ್ರೀಕರಣ, ಸಾಮಾಜಿಕ ಶ್ರೇಣಿ ಈ ಸಂದರ್ಭದಲ್ಲಿ ಜಾತಿಗಳು ಜೈಲುಗಳಾಗಿ, ಧರ್ಮಗಳು ದ್ವೀಪಗಳಾಗಿ ಸೃಷ್ಟಿಯಾಗುತ್ತಿವೆ. ಇದರ ವಿರುದ್ಧ ಮನುಷ್ಯತ್ವ ಹೋರಾಟ ನಡೆಯಬೇಕಿದೆ ಎಂದೂ ಹೇಳಿದರು.
ಸಾಮಾಜಿಕ ಆಯಾಮದಲ್ಲಿ 1818ರಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧ ಜಗತ್ತಿನಲ್ಲೇ ವಿಶೇಷ ಸಮರ. ಸಾಮಾಜಿಕ, ಸ್ವಾಭಿಮಾನ, ಅಸ್ಪಶ್ಯತೆ ವಿರುದ್ಧ, ಸಾಮಾಜಿಕ ಮೌಲ್ಯಕ್ಕಾಗಿ ಹೋರಾಡಿದ ವಿಶಿಷ್ಟ ಯುದ್ಧ ಇದು. ಆತ್ಮಾಭಿಮಾನ, ದಲಿತ ಪ್ರಜ್ಞೆ, ಶೋಷಣೆರಹಿತ ಮನಸ್ಥಿತಿಯವರ ಇದನ್ನು ಸಂಭ್ರಮಿಸಬೇಕು.
ಇದು ದಲಿತರು ಕೊಟ್ಟ ಜಯ. ಸಮಾಜದ ಕಟ್ಟಕಡೆಯೇ ಮಹಾರ್ ಸೈನಿಕರು ಕೊಟ್ಟ ವಿಜಯ. ಮಾನವೀಯ ಮನಸ್ಸುಗಳು ಈ ವಿಜಯೋತ್ಸವ ಆಚರಿಸಬೇಕು ಎಂದರು.
ಪೇಶ್ವೆಯವರು ‘ಅಸ್ಪಶ್ಯರ ಸೇವೆ ಬೇಡ’ ಎಂದು ತಿರಸ್ಕರಿಸುವ ಮೂಲಕ ಮಹಾರ್ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಅವರ ವಿರುದ್ಧ ಬ್ರಿಟಿಷರೊಂದಿಗೆ ಸೇರಿ ಯುದ್ಧ ಮಾಡಿ ಸೋಲಿಸುತ್ತಾರೆ. ವರ್ಣಾಶ್ರಮ ಮನಸ್ಥಿತಿ ವಿರುದ್ಧದ ಸಾಮಾಜಿಕ ಹೋರಾಟ ಇದಾಗಿದೆ ಎಂದರು.
ಈ ಯುದ್ಧ ಕುರಿತು ಕೊಂಕು ಮಾತು ಬೇಡ. ಆಗಿನ ಕಾಲದಲ್ಲಿ ದೇಶದ್ರೋಹ, ದೇಶಭಕ್ತಿ ಪರಿಕಲ್ಪನೆಯೇ ಇರಲಿಲ್ಲ. ಹೀಗಾಗಿ, ಇದಕ್ಕೆ ಈ ರೀತಿಯ ಆಯಾಮವೂ ಇರಲಿಲ್ಲ. ಹೀಗಾಗಿ, ಇಂತಹ ಮಾತುಗಳು ಅಪ್ರಸ್ತುತ ಎಂದು ಹೇಳಿದರು.
ಅಂತರಸಂತೆ ಸಾರನಾಥ ಬುದ್ಧ ವಿಹಾರದ ಬಿಕ್ಕುನಿ ಗೌತಮಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್, ರಂಗಕರ್ಮಿ ಎಚ್.ಜನಾರ್ದನ್(ಜನ್ನಿ), ಸಮತಾ ವೇದಿಕೆ ಅಧ್ಯಕ್ಷ ಪ್ರೊ.ರತಿರಾವ್, ಸೆಸ್ಕ್‌ನ ಕಾರ್ಯನಿರ್ವಾಹಕ ಇಂಜನಿಯರ್ ಎಸ್.ಬಿ.ಅನಿತಾ, ವಕೀಲ ಎಸ್.ಉಮೇಶ್, ಆರ್.ಸಿ.ಮಹೇಶ್ ಇನ್ನಿತರರಿದ್ದರು.