

ನಂಜನಗೂಡು: ರಾಷ್ಟ್ರೀಯ ಹೆದ್ದಾರಿ- 766ರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಂಜನಗೂಡು-ಊಟಿ- ಕೇರಳ ಹೆದ್ದಾರಿಯಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಪಘಾತಗಳಾದರೆ ಎನ್ಎಚ್ಎ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಎಚ್ಚರಿಸಿದರು.
ಪಟ್ಟಣದ ನಗರಸಭೆ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ಮೈಸೂರು- ತಮಿಳುನಾಡು- ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಪ್ರತಿನಿತ್ಯ ಅಪಘಾತಗಳು ಜರುಗುತ್ತಿವೆ. ಹೆದ್ದಾರಿ ಅಧಿಕಾರಿಗಳಿಗೆ ರಕ್ಷಾ ರಸ್ತೆ ಸುರಕ್ಷಾ ನಾಮಫಲಕವನ್ನು ಅಳವಡಿಸಲು ಹಲವು ಬಾರಿ ಸಲಹೆ, ಸೂಚನೆ ನೀಡಿದ್ದರೂ ಅದನ್ನು ಪರಿಗಣಿಸುತ್ತಿಲ್ಲ. ಈ ಬಗ್ಗೆ ಯಾವುದೇ ರೀತಿ ಮಾಹಿತಿ ನೀಡುತ್ತಿಲ್ಲ. ಹೊಸ ಸೇತುವೆಯಲ್ಲಿ ಜನರಿಗೆ ಸಂಚರಿಸಲು ತೊಂದರೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಗಮನಕ್ಕೆ ಯಾವುದೇ ವಿಚಾರ ತಿಳಿಸುತ್ತಿಲ್ಲ. ತೀವ್ರ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಕಾಮಗಾರಿ ವೇಳೆ ಸ್ಥಳೀಯ ಅಧಿಕಾರಿಗಳ ಜತೆ ಚರ್ಚಿಸಬೇಕು. ಸುರಕ್ಷತಾ ನಾಮಫಲಕಗಳನ್ನು ಅಳವಡಿಸಬೇಕು. ವಾಹನ ಸವಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಿಮ್ಮ ಬೇಜವಾಬ್ದಾರಿಯಿಂದ ವಾರಕ್ಕೆ ಎರಡು ಜೀವ ಹೋಗುತ್ತಿದೆ. ಇದಕ್ಕೆ ಹೊಣೆ ಯಾರು?. ಒಂದು ವಾರದೊಳಗೆ ಕೆಲಸಗಳನ್ನು ಮುಗಿಸದಿದ್ದರೆ ಗುತ್ತಿಗೆದಾರರ ಪರವಾನಗಿ ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಎಚ್ಚರಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ. ಸ್ಮಿತಾರಾಮು, ಇಒ ಜೇರಾಲ್ಡ್ ರಾಜೇಶ್, ನಗರಸಭೆ ಆಯುಕ್ತ ಬಸವರಾಜು, ಎಇ ಮಹೇಶ್ ಕುಮಾರ್, ಕೆಪಿಟಿಸಿಎಲ್ ಎಇ ದೇವರಾಜಯ್ಯ, ಹೆದ್ದಾರಿ ಅಧಿಕಾರಿ ಕೌಶಿಕ್, ಪಿಎಸ್ಐ ಕೃಷ್ಣಕಾಂತ ಕೋಳಿ ಇತರರು ಇದ್ದರು.
ವಾರದೊಳಗೆ ಬದಲಿ ಮಾರ್ಗ: ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆ ಮೇಲೆ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚಾಗಿ ವಾಹನಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಅಪಾಯ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ ಮೈಸೂರಿನಿಂದ ಕೇರಳ ಮತ್ತು ತಮಿಳುನಾಡಿಗೆ ಬದಲಿ ಮಾರ್ಗವನ್ನು ಗುರುತಿಸಲಾಗಿದೆ. ಇನ್ನು ಒಂದು ವಾರದೊಳಗೆ ಬದಲಿ ಮಾರ್ಗವನ್ನು ಪ್ರಕಟಿಸಲಾಗುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು. ಕೇರಳ, ತಮಿಳುನಾಡು ಹಾಗೂ ಬಂಡೀಪುರಕ್ಕೆ ಪ್ರವಾಸಕ್ಕೆ ಹೋಗುವವರು ಸುಲಲಿತವಾಗಿ ಈ ಮಾರ್ಗವನ್ನು ಬಳಸಬಹುದು. ಇದರಿಂದ ಹೊಸ ಮೇಲ್ಸೇತುವೆ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಜತೆಗೆ ಬಹುಕಾಲ ಈ ಸೇತುವೆ ಬಾಳಿಕೆ ಬರಲಿದೆ ಎಂದರು.