ಯುವರಾಜ ಕಾಲೇಜಿನ ಸ್ವಾಯತ್ತತೆ ರದ್ದು ಸರಿಯಲ್ಲ: ಮಾಜಿ ಎಂಎಲ್ಸಿ ಮರಿತಿಬ್ಬೇಗೌಡ ಆಕ್ರೋಶ

ಮರಿತಿಬ್ಬೇಗೌಢ
ಮರಿತಿಬ್ಬೇಗೌಢ
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಪ್ರಾಧ್ಯಾಪಕರು ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ
  • ಎರಡು ದಶಕಗಳಿಂದ ಸ್ವಾಯತ್ತ ಕಾಲೇಜಾಗಿ ಗುಣಮಟ್ಟ ಶಿಕ್ಷಣ ನೀಡುವ ಸಂಸ್ಥೆಯಾಗಿದೆ
ಮೈಸೂರು:ನಗರದ ಪ್ರತಿಷ್ಠಿತ ಯುವರಾಜ ಕಾಲೇಜಿನ ಸ್ವಾಯತ್ತತೆ ರದ್ದು ಮಾಡಿರುವುದು ವಿಪರ್ಯಾಸದ ಕ್ರಮ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷರೂ ಅದ ಮೈಸೂರು ವಿಶ್ವ ವಿದ್ಯಾಲಯದ ಕುಲಪತಿಗಳು ಸ್ವಾಯತ್ತತೆ ರದ್ದು ಮಾಡಿರುವುದು ದುರಂತ. ಈ ನಿಟ್ಟಿನಲ್ಲಿ ಯುವರಾಜ ಕಾಲೇಜು ಪ್ರಾಧ್ಯಾಪಕರು ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಎರಡು ದಶಕಗಳಿಂದ ಸ್ವಾಯತ್ತ ಕಾಲೇಜಾಗಿ ಗುಣಮಟ್ಟ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಅತ್ಯಾಧುನಿಕ ಸೌಕರ್ಯದೊಂದಿಗೆ ವಿದ್ಯಾರ್ಥಿ ಸ್ನೇಹಿ ವಾತಾವರಣ ಇದೆ. 4 ಬಾರಿ ನ್ಯಾಕ್ ಮಾನ್ಯತೆ ಪಡೆದುಕೊಂಡಿದೆ. 26 ಕೋಟಿ ರೂ.ಅನುದಾನ ಹೊಂದಿದೆ ಎಂದು ಹೇಳಿದರು.
ಯುವರಾಜ ಕಾಲೇಜು 2028ರ ವೇಳೆಗೆ ಶತಮಾನೋತ್ಸವ ಆಚರಿಸಿಕೊಳ್ಳಲು ಮುಂದಾಗಿದೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು 2025-26ನೇ ಸಾಲಿನಿಂದಲೇ ಸ್ವಾಯತ್ತತೆ ಬೇಡ ಎಂದು ಪತ್ರ ಬರೆದು ಕೋರಿದರು. ಈ ಬಗ್ಗೆ ಗೌರ್ನಿಂಗ್ ಸಭೆಯಲ್ಲಿ ಚರ್ಚಿಸದ ಕುಲಪತಿಗಳು ಫೆ. 5ರಂದು ವಿಶೇಷ ಸಿಂಡಿಕೇಟ್ ಸಭೆ ಕರೆದು ತೀರ್ಮಾನಿಸಿ ಫೆ. 16ರಂದು ಯುವರಾಜ ಕಾಲೇಜು ಮೈಸೂರು ವಿವಿಯ ಘಟಕ ಕಾಲೇಜು ಎಂದು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.
ಮೂವರು ಮಹಿಳಾ ಪ್ರಾಧ್ಯಾಪಕರನ್ನು ಹೊರತು ಪಡಿಸಿ ಕಾಯಂ ಪ್ರಾಧ್ಯಾಪಕರು ಸ್ವಾಯತ್ತತೆ ರದ್ದು ಮಾಡುವ ಪತ್ರಕ್ಕೆ ಸಹಿ ಮಾಡಿದ್ದಾರೆ. ಕಾಯಂ ಅಧ್ಯಾಪಕರ ಕೊರತೆಯ ಕಾರಣದಿಂದ ಸ್ವಾಯತ್ತತೆ ರದ್ದು ಮಾಡಿರುವುದು ದುರಂತ ಎಂದರು.
ಸ್ವಾಯತ್ತತೆ ರದ್ದಾಗಿರುವುದಕ್ಕೆ ಕ್ರಮ ತೆಗೆದುಕೊಳ್ಳಲು ಯುವರಾಜ ಕಾಲೇಜು ಆಡಳಿತ ಮಂಡಲಿ, ಪ್ರಾಧ್ಯಾಪಕರ ವಿರುದ್ಧ ತನಿಖೆ ಮಾಡಿಸುವಂತೆ ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಲಾಗುವುದು. ಸ್ವಾಯತ್ತತೆ ಸ್ಥಾನಮಾನ ಮುಂದುವರಿಸುವಂತೆ ಆದೇಶ ಮಾಡಬೇಕು ಎಂದು ಸರ್ಕಾರವನ್ನು ಕೋರಲಾಗುವುದು ಎಂದು ಹೇಳಿದರು.
ಯುವರಾಜ ಕಾಲೇಜಿನಲ್ಲಿ 9 ಪಿಜಿ ಕೋರ್ಸ್ ಮುಚ್ಚಲಾಗಿದೆ. ಗಂಗೋತ್ರಿಯಲ್ಲಿ 6, ಸಂಜೆ ಕಾಲೇಜಿನಲ್ಲೂ ಪಿಜಿ ಕೋರ್ಸ್ ಮುಚ್ಚಿವೆ. ಇದು ಶತಮಾನ ಪೂರೈಸಿರುವ ಮೈಸೂರು ವಿವಿಗೆ ಅಪಕೀರ್ತಿ ಮತ್ತು ವಿವಿಯ ಅಸ್ತಿತ್ವವವೇ ಅಲುಗಾಡುತ್ತಿರುವುದಕ್ಕೆ ನಿದರ್ಶನವಾಗಿದೆ ಎಂದರು.
ಮಂಡ್ಯ ವಿವಿಗೆ ಮೈಸೂರು ವಿವಿಯಿಂದ ನಿಯೋಜಿತರಾಗಿದ್ದ 11 ಪ್ರಾಧ್ಯಾಪಕರನ್ನು ಮೂಲ ವಿಶ್ವವಿದ್ಯಾನಿಲಯಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ನಾಲ್ಕು ಬಾರಿ ಪತ್ರ ಬರೆದರೂ ಉಪಯೋಗವಾಗಿಲ್ಲ. ಉನ್ನತ ಶಿಕ್ಷಣ ಸಚಿವರು ಕೂಡಲೇ ಇವರನ್ನು ಮೈಸೂರು ವಿವಿಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ವಿವಿ ಪ್ರಭಾರ ಕುಲಪತಿ ನೇಮಕಾತಿಯಲ್ಲೂ ಹಗರಣವಾಗಿದೆ. ಪ್ರಾಧ್ಯಾಪಕರ ಜ್ಯೇಷ್ಠತೆಯನ್ನು ಕಡೆಗಣಿಸಿ ಜ್ಯೇಷ್ಠತೆಯಲ್ಲಿ 6 ನೇ ಕ್ರಮಾಂತಕದಲ್ಲಿದ್ದ ಪ್ರೊ.ಶಿವಚಿತ್ತಪ್ಪ ಅವರನ್ನು ವಿವಿ ಕಾಯಿದೆಗೆ ವಿರುದ್ಧವಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಪತ್ರ ಬರೆದರೂ ಇಲಾಖೆ ಕ್ರಮವಹಿಸಿಲ್ಲ. ರಾಜ್ಯಪಾಲರು ಮಧ್ಯಪ್ರವೇಶಿಸಿ ನೇಮಕಾತಿ ಗೊಂದಲ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಗಮನಹರಿಸಲಿ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮರಿತಿಬ್ಬೇಗೌಡ ಕೋರಿದರು.
ಚಾಮರಾಜನಗರ, ಮಂಡ್ಯ ಮತ್ತು ಹಾಸನದಲ್ಲಿ ಅವೈಜ್ಞಾನಿಕವಾಗಿ ವಿಶ್ವವಿದ್ಯಾನಿಲಯ ಆರಂಭಿಸಿ ಯಾವುದೇ ಅನುದಾನ ನೀಡದೆ ವಿದ್ಯಾರ್ಥಿಗಳ ಶುಲ್ಕದಿಂದ ಕಾಲೇಜು ನಡೆಸುವ ನೀತಿಯಿಂದ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತಿದೆ. ಇದು ಮೈಸೂರು ವಿವಿಯೂ ದುಸ್ಥಿತಿಗೆ ತಲುಪಿದೆ ಎಂದರು.
ರಾಜ್ಯ ಸರ್ಕಾರವೇ ನೇರವಾಗಿ ಮೈಸೂರು ವಿವಿ ನಿವೃತ್ತ ನೌಕರರಿಗೆ ಪಿಂಚಣಿ ಕೊಡಬೇಕು. 2 ಸಾವಿರ ನಿವೃತ್ತರಿಗೆ ಪ್ರತಿ ತಿಂಗಳು ಮೈಸೂರು ವಿವಿ 9 ಕೋಟಿ ರೂ. ಕೊಡಬೇಕು. ವಿವಿಯಲ್ಲಿ ಹಣ ಇಲ್ಲದೆ ನೌಕರರಿಗೆ ಸಕಾಲದಲ್ಲಿ ವೇತನ ದೊರೆಯುತ್ತಿಲ್ಲ. ಈ ಬಜೆಟ್‌ನಲ್ಲಿ ಮೈಸೂರು ವಿವಿಗೆ ಹೆಚ್ಚಿನ ಅನುದಾನ ಕೊಡಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net