ಅವಧೂತ ದತ್ತ ಪೀಠದಲ್ಲಿ ಬ್ರಹ್ಮೋತ್ಸವ

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜನ್ಮದಿನೋತ್ಸವ
  • 31ರವರೆಗೆ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮ
ಮೈಸೂರು: ನಗರದ ಅವಧೂತ ದತ್ತ ಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೇ 24ರಿಂದ  31ರವರೆಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಮಹಾಸಂಗಮವೇ ಏರ್ಪಡಲಿದೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 84ನೇ ಜನ್ಮದಿನೋತ್ಸವ, ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 27ನೇ ಬ್ರಹ್ಮೋತ್ಸವ ಹಾಗೂ ನಾದ ಮಂಟಪದ 28ನೇ ವಾರ್ಷಿಕೋತ್ಸವ ನಿಮಿತ್ತ ಆಶ್ರಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಮೇ 24ರಂದು ಬೆಳಗ್ಗೆ 9ಕ್ಕೆ ಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಸಂಜೆ 5ಗಂಟೆಗೆ ಶೇಷವಾಹನ ಉತ್ಸವ, 6ಗಂಟೆಗೆ ಬ್ರಹ್ಮೋತ್ಸವ, ಶ್ರೀಗಳ ಜನ್ಮದಿನೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಚಾಲನೆ ದೊರೆಯಲಿದೆ.
ಮೇ 25ರಂದು ಕೊಳಲು ವಾದಕ ಪಂಡಿತ್ ರಾಕೇಶ್ ಚೌರಾಸಿಯಾ ಮತ್ತು ತಬಲಾ ವಾದಕ ಪಂಡಿತ್ ಅನಿಂದೋ ಚಟರ್ಜಿ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ, ಮೇ 26ರಂದು ಶ್ರೀಗಳ 84ನೇ ಜನ್ಮದಿನದ ಅಂಗವಾಗಿ ಅಭಿಷೇಕ, ಲಕ್ಷ್ಮೀ ಹೋಮ, ಸಂಸ್ಕೃತ ಶಿಕ್ಷಣ ಸೇವೆ ಉದ್ಘಾಟನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೇ 27ರಂದು ಶ್ರೀಗಳಿಗೆ ಪ್ರತ್ಯಕ್ಷ ಪಾದಪೂಜೆ, ವಿವಿಧ ಕ್ಷೇತ್ರಗಳ ಗಣ್ಯರಿಗೆ ದತ್ತ ಪೀಠದ ವತಿಯಿಂದ ವೇದನಿಧಿ, ಶಾಸ್ತ್ರನಿಧಿ ಮತ್ತಿತರ ಬಿರುದು ಪ್ರದಾನ, ಸಂಜೆ 6ಕ್ಕೆ ಅನ್ನಮಯ್ಯ ಕೀರ್ತನ ನೃತ್ಯಾಂಜಲಿ ಜರುಗಲಿದೆ.
ಮೇ 28ರಂದು ಸಂಜೆ ದತ್ತ ವೆಂಕಟೇಶ್ವರ ಸ್ವಾಮಿಗೆ ತೆಪ್ಪೋತ್ಸವ, ಮೇ 29ರಂದು ಹಿಂದುಸ್ತಾನಿ ದ್ವಂದ್ವ ವಾದನ ಕಾರ್ಯಕ್ರಮ ನಡೆಯಲಿದೆ. ಪಂಡಿತ್ ವಿಶ್ವಮೋಹನ್ ಭಟ್(ಮೋಹನ ವೀಣೆ) ಮತ್ತು ಪಂಡಿತ್ ಸಲೀಲ್ ವಿಶ್ವ ಮೋಹನ್ ಭಟ್ (ಸಾತ್ವಿಕ ವೀಣೆ) ಭಾಗವಹಿಸಲಿದ್ದಾರೆ. 
ಮೇ 30ರಂದು ಬೆಳಗ್ಗೆ 10ಕ್ಕೆ ಅಂಗವಿಕಲರಿಗೆ ಸಹಾಯಕ ಉಪಕರಣಗಳ ವಿತರಣೆ, ಸಂಜೆ ಪಂಡಿತ್ ಸಂಜೀವ್ ಅಭ್ಯಂಕರ್ ಅವರಿಂದ ಸಂಗೀತ ಸುಧೆ, ಮೇ 31ರಂದು ವೀಣೆ ಮತ್ತು ಪಿಟೀಲು ವಾದನ ಕಾರ್ಯಕ್ರಮ ಇರಲಿದೆ. ವಿದ್ವಾನ್ ಕುಮರೇಶ್ ರಾಜಗೋಪಾಲನ್ ಮತ್ತು ವಿದುಷಿ ಜಯಂತಿ ಕುಮರೇಶ್ ಅವರಿಂದ ವೀಣಾ-ವಯಲಿನ್ ಜುಗಲ್ಬಂದಿ ಏರ್ಪಡಿಸಲಾಗಿದೆ.

ದೈನಂದಿನ ವಿಶೇಷ ಚಟುವಟಿಕೆ:

ಭಕ್ತರ ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ ಪ್ರತಿದಿನ ಬೆಳಗ್ಗೆ 6.30ಕ್ಕೆ ದತ್ತ ಕ್ರಿಯಾ ಯೋಗ ತರಗತಿಗಳು ಹಾಗೂ ಮಧ್ಯಾಹ್ನ 12 ಮತ್ತು ಸಂಜೆ 4 ಗಂಟೆಗೆ ಶ್ರೀಗಳೇ ಸಂಯೋಜಿಸಿರುವ ಮ್ಯೂಸಿಕ್ ಥೆರಪಿ(ಸಂಗೀತ ಚಿಕಿತ್ಸೆ) ಕಾರ್ಯಕ್ರಮಗಳು ನಾದ ಭವನದಲ್ಲಿ ನಡೆಯಲಿವೆ. 
ಮೈಸೂರಿನ ಜನತೆ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ್ಳಬೇಕೆಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net