ಬಿಜೆಪಿಯ ಮನೆ ದೇವರೇ ಸುಳ್ಳು: ಮಾಜಿ ಸಚಿವೆ ರಾಣಿ ಸತೀಶ್ ಕಿಡಿ

ಮಾಜಿ ಸಚಿವೆ ರಾಣಿ ಸತೀಶ್
ಮಾಜಿ ಸಚಿವೆ ರಾಣಿ ಸತೀಶ್
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಾತಿ ಕುರಿತು ಬಹಿರಂಗ ಚರ್ಚೆಗೆ ಕಾಂಗ್ರೆಸ್ ಸಿದ್ಧವಾಗಿದ್ದು, ಬಿಜೆಪಿ ತಯಾರಿದೆಯೇ
  • ವೈಜ್ಞಾನಿಕವಾಗಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡದೆ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮಂಡನೆ
ಮೈಸೂರು: ಮಹಿಳಾ ಮೀಸಲಾತಿ ಕುರಿತು ಬಹಿರಂಗ ಚರ್ಚೆಗೆ ಕಾಂಗ್ರೆಸ್ ಸಿದ್ಧವಾಗಿದ್ದು, ಬಿಜೆಪಿ ತಯಾರಿದೆಯೇ ಎಂದು ಮಾಜಿ ಸಚಿವೆ ರಾಣಿ ಸತೀಶ್ ಸವಾಲು ಹಾಕಿದರು.
ಮಹಿಳಾ ಮೀಸಲಾತಿ ನೆರಳಿನಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆ ಮಾಡಲು ಮುಂದಾಗಿದ್ದು ನ್ಯಾಯಸಮ್ಮತವಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ವೈಜ್ಞಾನಿಕವಾಗಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡದೆ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮಂಡನೆ ಮಾಡಿದ್ದಾರೆ. 
ಕಾಂಗ್ರೆಸ್ ಕೊಟ್ಟ ಸ್ಥಳೀಯ ಸಂಸ್ಥೆಗಳ ಮಹಿಳಾ ಮೀಸಲಾತಿಯಿಂದ ಬಹಳಷ್ಟು ಮಹಿಳೆಯರು ರಾಜಕೀಯವಾಗಿ ಅಧಿಕಾರ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳುವ ಪ್ರತಿಯೊಂದು ಮಾತುಗಳು ಕೇವಲ ಸುಳ್ಳು. ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ತರಾತುರಿಯಲ್ಲಿ ಮಂಡಿಸಿ ಸೋಲಾದಾಗ ಕಾಂಗ್ರೆಸ್‌ಗೆ ಮಸಿ ಬಳಿಯುತ್ತಿದ್ದಾರೆ. ರಾಜೀವ್ ಗಾಂಧಿ ಮಹಿಳಾ ಮೀಸಲಾತಿ ಮಸೂದೆಗೆ ಮೊದಲು ಉತ್ತೇಜನ ನೀಡಿದರು. 14 ಜನರ ಸಮಿತಿ ರಚಿಸಿ ವರದಿ ಪಡೆದಿದ್ದರು. ಕಾಂಗ್ರೆಸ್ ಸರ್ಕಾರ ಮಂಡಿಸಿದಾಗ ಬಿಜೆಪಿ ಬೆಂಬಲ ನೀಡಲಿಲ್ಲ.
 ಮೀಸಲಾತಿಯಲ್ಲಿ ಒಳಮೀಸಲಾತಿ ಇಲ್ಲ, ಈಗಿನ ಜನಗಣತಿ ಇಲ್ಲದೆ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲಾತಿ ಮಾತ್ರವಲ್ಲದೆ ಕ್ಷೇತ್ರ ಮರುವಿಂಗಡಣೆ ಮಸೂದೆ ಕೂಡ ಮಂಡಿಸಿದರು. ಐದು ರಾಜ್ಯಗಳ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಈ ಮಸೂದೆ ಮಂಡಿಸಿದರು ಎಂದು ದೂರಿದರು.
ಬಿಜೆಪಿಯವರು ಮನುವಾದಿಗಳು, ಅವರಿಗೆ ಮಹಿಳಾ ಪರ ನೀತಿ ಇಲ್ಲ. ಆದರೆ, ಕಾಂಗ್ರೆಸ್ ಮಹಿಳಾ ಪರವಾಗಿದೆ. ಈ ಮಸೂದೆ ಪಂಚರಾಜ್ಯ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರುತ್ತದೆ. ಮಹಿಳೆಯರ ಭಾವನೆಗಳನ್ನು ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆ ಎಂದರು.
ಈವರೆಗೂ ಮನೆಯಲ್ಲಿ ಕುಳಿತ್ತಿದ್ದ ಬಿಜೆಪಿ ಮಹಿಳಾಮಣಿಯರು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಹೊರಬಂದಿದ್ದಾರೆ. ನಿಜವಾಗಿಯು ಮಹಿಳಾ ಮೀಸಲಾತಿ ವಿರೋಧಿಗಳು ನಾವಾ ಅಥವಾ ನೀವಾ? ನಿಜವಾದ ಮಹಿಳಾ ವಿರೋಧಿಗಳು ಬಿಜೆಪಿಯವರೇ ಹೊರತು ಕಾಂಗ್ರೆಸ್ಸಿಗರಲ್ಲ ಎಂದು ಕುಟುಕಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಬಿಜೆಪಿಯವರು ಮಹಿಳಾ ಪೀಡಕರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವರು. ಮಹಿಳೆಯರ ಪರವಾಗೇ ಇದ್ದರೆ ಈ ಕ್ಷಣ ಮಹಿಳಾ ಮೀಸಲಾತಿ ಮಸೂದೆ ಪಾಸ್ ಮಾಡಿ ಎಂದು ಆಗ್ರಹಿಸಿದರು.
ಅಮೆರಿಕದ ನಡೆದಿರುವ ಎಫ್‌ಸ್ಟೀನ್ ಫೈಲ್ ಹಾಗೂ ಹೆಚ್ಚು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ಪಕ್ಷದವರೇ ಹೆಚ್ಚು ಪಾತ್ರ ವಹಿಸಿದ್ದಾರೆ. ಬಿಜೆಪಿಯವರ ಮಾತು ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬಂತಾಗಿದೆ ಎಂದು ಟೀಕಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಎಐಸಿಸಿ ಉಸ್ತುವಾರಿ ಪ್ಯಾರಿಜಾನ್, ಮೈಸೂರು ಗ್ರಾಮಾಂತರ ಮಹಿಳಾ ಅಧ್ಯಕ್ಷೆ ಪ್ರೇಮ, ಕಾರ್ಯದರ್ಶಿ ಪುಷ್ಪಲತಾ ಚಿಕ್ಕಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net