ರಾಜ್ಯ ಸರ್ಕಾರದ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ
ಬಜೆಟ್‌ನಿಂದಾಗಿ ಕಂಗೆಟ್ಟಿರುವ ಬಿಜೆಪಿ ಪ್ರಚಾರಕ್ಕಾಗಿ ಚೊಂಬು ಹಿಡಿದು ಪ್ರತಿಭಟನೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಸರ್ಕಾರದ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಎಲ್ಲ ವರ್ಗದವರಿಗೂ ಆಶಾದಾಯಕವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಇದು ದೂರದೃಷ್ಟಿಯಿರುವ ಸಾಮಾಜಿಕ ನ್ಯಾಯವುಳ್ಳ ಬಜೆಟ್ ಆಗಿದೆ. ಆದರೆ, ಉತ್ತಮ ಬಜೆಟ್‌ನಿಂದಾಗಿ ಕಂಗೆಟ್ಟಿರುವ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಇತರರು ಪ್ರಚಾರಕ್ಕಾಗಿ ಚೊಂಬು ಹಿಡಿದು ಪ್ರತಿಭಟಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೊಟ್ಟಿರುವ ಚೊಂಬನ್ನು ಇದೀಗ ಬಿಜೆಪಿ ನಾಯಕರು ಪ್ರದರ್ಶಿಸಿದ್ದಾರೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯಕ್ಕೆ ಎರಡು ರೈಲನ್ನು ನೀಡಿರುವುದು ಬಿಟ್ಟರೆ ಬೇರೆ ಏನು ಕೊಟ್ಟಿಲ್ಲ. ಅದು ರಾಜ್ಯಕ್ಕೆ ಏನು ನೀಡದೇ ಬರೀ ಚೊಂಬು ಕೊಟ್ಟಿದೆ. ಆ ಚೊಂಬನ್ನೇ ರಾಜ್ಯದ ಬಿಜೆಪಿ ನಾಯಕರು ಪ್ರದರ್ಶನ ಮಾಡುತ್ತಿದ್ದಾರೆ. ಬಿಜೆಪಿಯವರು ಮೊದಲು ಜಿಡಿಪಿ ಎಂದರೇನು, ರಾಜ್ಯದ ಜಿಡಿಪಿ ಎಷ್ಟು ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗುವ ಮುನ್ನ ಇದ್ದ 53 ಲಕ್ಷ ಕೋಟಿ ರೂ. ಸಾಲವನ್ನು ಇದೀಗ 218 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಿದ್ದಾರೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡಲ್ಲ. ಸಿದ್ದರಾಮಯ್ಯ ಅವರು 2.85 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.
ಆದರೆ, ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ 3 ಲಕ್ಷ ಕೋಟಿ ರೂ. ಸಾಲ ಮಾಡಿದ್ದರು. ಒಟ್ಟಾರೆ ಬಜೆಟ್ ಗಾತ್ರದ ಶೇ.25ರವರೆಗೂ ಸಾಲ ಮಾಡಬಹುದು. ಸಿಎಂ ಸಾಲ ಮಾಡಬೇಕಿರುವುದು 1.32 ಲಕ್ಷ ಕೋಟಿ ರೂ. ಆಗಿದ್ದು. ಇದು ಶೇ.25ರ ಒಳಗೆ ಇದೆ ಎಂದು ತಿರುಗೇಟು ಕೊಟ್ಟರು.
ಜಿಎಸ್‌ಟಿ ಸಂಗ್ರಹಿಸಿ ನಾವು ರಾಜ್ಯದಿಂದ ಕೇಂದ್ರಕ್ಕೆ 5 ಲಕ್ಷ ಕೋಟಿ ರೂ. ಕೊಡುತ್ತೇವೆ. ಅದು ರಾಜ್ಯಕ್ಕೆ ಬರಬೇಕಾದ ಪಾಲನ್ನೂ ನೀಡುತ್ತಿಲ್ಲ. ಹೀಗಾಗಿ, ಅದು ರಾಜ್ಯದೊಂದಿಗೆ ತಾರತಮ್ಯ ಮಾಡುತ್ತಿದೆ. ರಾಜ್ಯಕ್ಕೆ ಬರಬೇಕಾದ ಪಾಲನ್ನು ರಾಜ್ಯದ ಬಿಜೆಪಿ ನಾಯಕರು ಕೊಡಿಸುತ್ತಿಲ್ಲ ಎಂದು ಹರಿಹಾಯ್ದರು.
ಮೇಕೆದಾಟು ಕುಡಿಯುವ ನೀರು ಯೋಜನೆಗೂ ಕೇಂದ್ರ ಸರ್ಕಾರವು ಅನುಮತಿ ನೀಡುತ್ತಿಲ್ಲ. 12 ವರ್ಷದಲ್ಲಿ ಒಂದೇ ಒಂದು ಜಲಾಶಯವನ್ನೂ ಬಿಜೆಪಿ ನಿರ್ಮಿಸಿಲ್ಲ. ರಾಜ್ಯದಲ್ಲಿ 21 ಡ್ಯಾಂಗಳು ನಿರ್ಮಾಣ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ ಒಂದೇ ಒಂದು ಕೆರೆಯನ್ನೂ ಕಟ್ಟಿಸಿಲ್ಲ.
ಸುಮ್ಮನೆ ಬಾಯಿಗೆ ಬಂದಹಾಗೆ ಮಾತನಾಡಿದ ಕಾರಣಕ್ಕೆ ಆರ್.ಅಶೋಕ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಪಕ್ಷ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ.ರಾಮು, ಎಂ.ಶಿವಣ್ಣ ಇನ್ನಿತರರಿದ್ದರು.