ಜನನ-ಮರಣ ನೋಂದಣಿ ಶೇ.100 ಆಗಲಿ

 ಜನನ, ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ
ಜನನ, ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ
  • ಕಡಕೊಳ ಪಟ್ಟಣ ಪಂಚಾಯಿತಿಗೆ ನೋಟಿಸ್
ಮೈಸೂರು: ಜನನ-ಮರಣ ನೋಂದಣಿ ಶೇ.100 ಕಡ್ಡಾಯವಾಗಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನನ, ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜನನ ನೋಂದಣಿಗಳು ಕಳೆದ ಮೂರು ತಿಂಗಳ ಅವಧಿಯಲ್ಲಿ ಶೇ.100 ಆಗಿರುವುದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಶಂಶನಾ ಪತ್ರ ನೀಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಜನನ ಆದ 21 ದಿನಗಳ ಒಳಗಾಗಿ ನೋಂದಣಿ ಆಗಬೇಕು. ಜಿಲ್ಲೆಯ ಚೆಲುವಾಂಬ ಆಸ್ಪತ್ರೆ, ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆ (ರಾಜಕುಮಾರಿ ಕೃಷ್ಣಜಮ್ಮಣಿಯವರ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ), ತಿ.ನರಸೀಪುರ, ಎಚ್.ಡಿ.ಕೋಟೆ ತಾಲೂಕು ಆಸ್ಪತ್ರೆಗಳಲ್ಲಿ ನಿಗದಿತ ಅವಧಿಯಲ್ಲಿ ನೋಂದಣಿ ಆಗಿವೆ. ಈ ಮೂಲಕ ಶೇ.100 ಗುರಿ ಸಾಧನೆ ಮಾಡಿವೆ ಎಂದು ತಿಳಿಸಿದರು.
ನಂಜನಗೂಡು ತಾಲೂಕು ಆಸ್ಪತ್ರೆ, ಹುಣಸೂರು ನಗರಸಭೆ, ನಂಜನಗೂಡು ನಗರಸಭೆ, ತಿ.ನರಸೀಪುರ ಪುರಸಭೆ, ಮೈಸೂರು ವಲಯ ಕಚೇರಿ 2 ಹಾಗೂ ವಲಯ ಕಚೇರಿ 8ಗಳು ಜನನ ಘಟನೆಗಳ ವಿಳಂಬ ನೋಂದಣಿ ಮಾಡಿವೆ. ಇದು ಸರಿಯಲ್ಲ. ವಿಳಂಬ ಮಾಡದೆ ನೋಂದಣಿ ಮಾಡಬೇಕು. ವಿಳಂಬ ನೋಂದಣಿಗೆ ಸಾರ್ವಜನಿಕರಿಂದ ಶುಲ್ಕ ಪಡೆಯದೆ ಸಂಬಂಧಿಸಿದ ಅಧಿಕಾರಿಗಳು ಪಾವತಿ ಮಾಡುವಂತೆ ಆಗಬೇಕು. ಆಗ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಮರಣ ಸಂಭವಿಸಿದ 21 ದಿನಗಳ ಒಳಗೆ ನೋಂದಣಿ ಆಗಬೇಕು. ಕಡಕೊಳ ಪಟ್ಟಣ ಪಂಚಾಯಿತಿ ಶ್ರೀರಾಂಪುರ, ಕೆ.ಆರ್.ಆಸ್ಪತ್ರೆ, ನಂಜನಗೂಡು ನಗರಸಭೆ, ಹೂಟಗಳ್ಳಿ ನಗರಸಭೆ, ತಿ.ನರಸೀಪುರ ಪುರಸಭೆ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಮೈಸೂರು ವಲಯ ಕಚೇರಿ-6, ವಲಯ ಕಚೇರಿ-9, ವಲಯ ಕಚೇರಿ -2, ಕೆ.ಆರ್.ನಗರ ಪುರಸಭೆ, ಪಿರಿಯಾಪಟ್ಟಣ ಪುರಸಭೆ, ಬನ್ನೂರು ಪುರಸಭೆ, ಬೋಗಾದಿ ಪಟ್ಟಣ ಪಂಚಾಯಿತಿಗಳಲ್ಲಿ ಮರಣ ನೋಂದಣಿ ವಿಳಂಬವಾಗಿ ಆಗಿದೆ. ಶೇ.92.8 ವಿಳಂಬ ನೋಂದಣಿ ಆಗಿರುವ ಕಡಕೋಳ ಪಟ್ಟಣ ಪಂಚಾಯಿತಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ವಿಳಂಬವಾಗಿ ಜನನ, ಮರಣ ನೋಂದಣಿ ಮಾಡಿರುವ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಿಳಿಸಿದರು. ಜನನ,  ಮರಣ ನೋಂದಣಿ ಕುರಿತಂತೆ ಸಿಬ್ಬಂದಿಗೂ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಚಿತ್ರಾ, ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಎನ್.ವಿ.ಸತೀಶ್, ಜಿಲ್ಲಾ ಮಕ್ಕಳ ಸಂತಾನೋತ್ಪತ್ತಿ ಅಧಿಕಾರಿ ಡಾ.ಮಹಮ್ಮದ್ ಸಿರಾಜ್ ಅಹಮದ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸುರೇಶ್ ಅಂಗಡಿ, ಕೃಷಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ತಹಸೀಲ್ದಾರ್ ರಾಮ್ ಪ್ರಸಾದ್, ಸಹಾಯಕ ನಿರ್ದೇಶಕ ಎಂ.ವಿ.ಹೊನ್ನೇಗೌಡ , ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಗಣೇಶ, ಎಸ್.ಸಂಧ್ಯಾ ಇನ್ನಿತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net