

ಸಾಲಿಗ್ರಾಮ: ಹಾಲಿ ಶಾಸಕ ಡಿ.ರವಿಶಂಕರ್ ಮತ್ತು ಮಾಜಿ ಶಾಸಕ ಸಾ.ರಾ.ಮಹೇಶ್ ವಿರುದ್ಧ ಭೇರ್ಯ ಗ್ರಾಮಸ್ಥರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಭೇರ್ಯ ಗ್ರಾಮವನ್ನು ಹೋಬಳಿ ಮಾಡುತ್ತೇನೆ ಎಂದು ಭರವಸೆ ನೀಡಿ ನಮಗೆ ಮೋಸ ಮಾಡಿದ್ದಾರೆ. ನಾನು ಗೆದ್ದ ತಕ್ಷಣ ನನ್ನ ಮೊದಲ ಗುರಿ ಭೇರ್ಯ ಗ್ರಾಮವನ್ನು ಹೋಬಳಿ ಮಾಡುವುದು ಎಂದು ಹಾಲಿ ಶಾಸಕ ಡಿ.ರವಿಶಂಕರ್ ಪ್ರತಿ ಮನೆ ಮನೆ ತೆರಳಿ ಜನರಿಂದ ವೋಟು ಪಡೆದಿದ್ದಾರೆ. ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಈ ಸಂಬಂಧ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಅಲ್ಲದೆ ಮಾಜಿ ಶಾಸಕ ಸಾ.ರಾ.ಮಹೇಶ್ ಅವರು ಸಹ, ಸಾಲಿಗ್ರಾಮ ಹೊಸ ತಾಲೂಕು ಮಾಡುವ ಸಂದರ್ಭದಲ್ಲಿ ಭೇರ್ಯ ಗ್ರಾಮವನ್ನು ಹೋಬಳಿ ಮಾಡುತ್ತೇವೆ ಎಂದು ಭರವಸೆ ನೀಡಿ, ಜನರಿಂದ ವೋಟು ಪಡೆದು ಬಳಿಕ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳನ್ನು ಈ ಭಾಗದ ಜನರು ಬೆಂಬಲಿಸಿದ್ದಾರೆ. ಆದರೆ ಭೇರ್ಯ ಹೋಬಳಿ ಮಾಡುವ ಸಂಬಂಧ ಯಾರೂ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಗ್ರಾಮದ ಗಾಂಧಿ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಹಾಸನ- ಮೈಸೂರು ರಾಜ್ಯ ಹೆದ್ದಾರಿ ಸಂಚಾರ ತಡೆದು ಕೆಲವು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಮೂರು ಪಕ್ಷಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯರ ಮುಖಂಡರು ಹೋರಾಟವನ್ನು ಪಕ್ಷಾತೀತವಾಗಿ ಬೆಂಬಲಿಸಿದರು.
ಈಗ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಭೇರ್ಯ ಹೋಬಳಿ ಮಾಡುವ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮನವೊಲಿಕೆಗೆ ಸಿಗದ ಕಿಮ್ಮತ್ತು:
ಶಾಸಕ ಡಿ.ರವಿಶಂಕರ್ ಅವರು ಮುಖಂಡರಿಗೆ ಕರೆ ಮಾಡಿ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿ ಮನವೊಲಿಸಿದರೂ ಗ್ರಾಮಸ್ಥರು ಸೊಪ್ಪು ಹಾಕಲಿಲ್ಲ. ಅದೇ ರೀತಿ ಮಾಜಿ ಶಾಸಕ ಸಾರಾ ಅವರು ತಮ್ಮ ಬೆಂಬಲಿಗರಿಗೆ ಕರೆ ಮಾಡಿ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ಪ್ರತಿಭಟನಾಕಾರರು ಪಕ್ಷಾತೀತವಾಗಿ ಪಟ್ಟು ಬಿಡದೆ ಪ್ರತಿಭಟನೆ ಮುಂದುವರಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ಸಾಮಾಜಿಕ ಕಾರ್ಯಕರ್ತ ಡಿ.ಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷ ಶಿವಶಂಕರ್, ಮುಶೀರ್, ಮಾಜಿ ಉಪಾಧ್ಯಕ್ಷ ಶಿವಕುಮಾರ್, ಕನ್ನಡ ಯುವಕ ಸಂಘದ ಮಾಜಿ ಅಧ್ಯಕ್ಷ ಕೃಷ್ಣ, ಏರ್ಟೆಲ್ ಚಂದ್ರು, ಕಾರ್ಯದರ್ಶಿ ದಿನೇಶ್, ಉದೇಶ ನಾಯಕ, ಸಿದ್ದಯ್ಯ, ಬಿ.ಎಚ್.ಮಹದೇವ್, ಬಿ.ಟಿ.ಮಹೇಶ್, ಪ್ರೇಮ ಕುಮಾರ್, ಬೋರಪ್ಪ ನಾಯಕ, ಕಾಲಿಗ್, ಸಣ್ಣಯ್ಯ, ಗಾರೆ ಕೃಷ್ಣ, ದೇವರಾಜ್, ಚಂದ್ರಶೇಖರಯ್ಯ ಸೇರಿದಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮತ್ತು ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ವಾಲ್ಮೀಕಿ ಸಂಘದ ಪದಾಧಿಕಾರಿಗಳು ಮತ್ತು ಕನಕ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಭಗೀರಥ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.