ರಾಗಿ ಖರೀದಿ ಹಣ ಬಿಡುಗಡೆಗೆ ಶೀಘ್ರ ಕ್ರಮ

ಆ.10ರಂದು ಪ್ರಕಟವಾದ ರಾಗಿ ಸಮಸ್ಯೆ ವರದಿ.
ಆ.10ರಂದು ಪ್ರಕಟವಾದ ರಾಗಿ ಸಮಸ್ಯೆ ವರದಿ.
Published on

ಬೆಟ್ಟದಪುರ:

ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿ ಹಲವು ತಿಂಗಳೇ ಕಳೆದರೂ ಹಣಕ್ಕಾಗಿ ಕಾಯುತ್ತಿದ್ದ ರೈತರ ಸಮಸ್ಯೆಗೆ ‘ವಿಜಯವಾಣಿ’ ವರದಿ ಮೇರೆಗೆ ಶೀಘ್ರವೇ ಹಣ ಬಿಡುಗಡೆಯ ಭರವಸೆ ದೊರೆತಿದೆ.

‘ಅನ್ನದಾತರ ಕೈ ಸೇರದ ರಾಗಿ ಮಾರಾಟದ ಹಣ’ಎಂಬ ಶೀರ್ಷಿಕೆಯಲ್ಲಿ ಆ.10ರಂದು ವಿಜಯವಾಣಿಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಸ್ಪಂದಿಸಿದ್ದು, ಬಾಕಿ ಹಣ ಬಿಡುಗಡೆಗೆ ಸರ್ಕಾರದಮಟ್ಟದಲ್ಲಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದೆ.
ವರದಿಯನ್ನು ಗಮನಿಸಿದ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು, ರಾಗಿ ಖರೀದಿ ಹಾಗೂ ರೈತರಿಗೆ ಹಣ ಪಾವತಿ ಕುರಿತ ಸಂಪೂರ್ಣ ಮಾಹಿತಿಯನ್ನು ಕೇಳಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೈಸೂರು ಜಿಲ್ಲಾ ವ್ಯವಸ್ಥಾಪಕರಿಗೆ ಇಮೇಲ್ ಮೂಲಕ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿಗಮದ ಅಧಿಕಾರಿಗಳು, ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ರೈತರ ಖಾತೆಗಳಿಗೆ ವಿಳಂಬ ಮಾಡದೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಹಣ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಶೇ.90 ರಾಗಿ ಮಾರಾಟ ಮಾಡಿದ ರೈತರ ಖಾತೆಗಳಿಗೆ ಹಣ ಸಂದಾಯವಾಗಿದ್ದು, ಉಳಿದ ರೈತರ ಖಾತೆಗಳಿಗೂ ಅನುದಾನ ಬಿಡುಗಡೆಯಾದ ತಕ್ಷಣ ಹಣ ಜಮೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 29,496 ರೈತರಿಂದ 5,98,094 ಕ್ವಿಂಟಾಲ್ ರಾಗಿ ಖರೀದಿಸಲಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 292.23 ಕೋಟಿ ರೂ.ಗಳಾಗಿವೆ. ಆ.14ರವರೆಗೆ 23,583 ರೈತರ ಖಾತೆಗಳಿಗೆ 262.70 ಕೋಟಿ ರೂ.ಪಾವತಿಸಲಾಗಿದೆ. ಇನ್ನೂ ಸುಮಾರು 2,911 ರೈತರಿಗೆ 29.53 ಕೋಟಿ ರೂ. ಬಾಕಿ ಇದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಬಾಕಿ ಮೊತ್ತ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಜಯವಾಣಿ ವರದಿಗೆ ಮೆಚ್ಚುಗೆ: ವಿಶೇಷವೆಂದರೆ, ಆ.10ರಂದು ವರದಿ ಪ್ರಕಟವಾದ ಕೇವಲ ಎರಡು ದಿನಗಳ ಅವಧಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 20 ಕೋಟಿ ರೂ.ಗೂ ಅಧಿಕ ಮೊತ್ತ ರೈತರ ಖಾತೆಗಳಿಗೆ ಜಮೆಯಾಗಿದೆ. ಇದರಿಂದ ಹಲವು ದಿನಗಳಿಂದ ಹಣಕ್ಕಾಗಿ ಕಾಯುತ್ತಿದ್ದ ಅನ್ನದಾತರಲ್ಲಿ ಸಂತಸ ಮನೆ ಮಾಡಿದೆ. ರೈತರ ಸಮಸ್ಯೆಯನ್ನು ಬೆಳಕಿಗೆ ತಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನ ಸೆಳೆಯುವಲ್ಲಿ ವಿಜಯವಾಣಿ ವರದಿ ಮಹತ್ವದ ಪಾತ್ರವಹಿಸಿದೆ ಎಂದು ರೈತರು ಹಾಗೂ ರೈತಪರ ಸಂಘಟನೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net