ಬಸವ ಪಥದಲ್ಲಿ ಸಾಗುವ ಮೂಲಕ ಮನುಷ್ಯರಾಗಿ: ಸಿಎಂ ಸಿದ್ದರಾಮಯ್ಯ
-ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2025-26ನೇ ಸಾಲಿನ ‘ಬಸವ ರಾಷ್ಟ್ರೀಯ ಪುರಸ್ಕಾರ’ವನ್ನು ಬೀದರ್‌ನ ಡಾ.ಸಿದ್ಧರಾಮ ಶರಣ ಬೆಲ್ದಾಳ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಜಿ.ಟಿ.ದೇವೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಇದ್ದರು.
ಮೈಸೂರು: ಬಸವ ಪಥದಲ್ಲಿ ಸಾಗುವ ಮೂಲಕ ಮನುಷ್ಯರಾಗಿ ಬದುಕಬೇಕು. ಸಮಾನತೆಯ ಸಮಾಜಕ್ಕೆ ಸಂಕಲ್ಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಬಸವ ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಅವ್ಯವಸ್ಥೆ, ಜಾತಿವ್ಯವಸ್ಥೆ, ಮೂಢನಂಬಿಕೆ ವಿರುದ್ಧ ಬಸವಣ್ಣನವರು ಹೋರಾಡಿದರು. ಅವರು ತಳ ಸಮುದಾಯದಿಂದ ಬಂದವರಲ್ಲ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದವರು. ಆದರೂ ಅವರು ‘ನಾನು ಅಸ್ಪಶ್ಯ ಸಮಾಜದಲ್ಲಿ ಹುಟ್ಟಿದ್ದೇನೆ’ ಎಂದು ಹೇಳಿದ್ದನ್ನು ಮನಸ್ಸಿನೊಳಗೆ ಇಳಿಸಿಕೊಳ್ಳಬೇಕು. ಅವರ ಕನಸಾಗಿದ್ದ ಸಮ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಈ ಸೂಕ್ಷ್ಮತೆಯನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ. ಜಾತಿರಹಿತ ಸಮ ಸಮಾಜ, ವರ್ಣಾಶ್ರಮರಹಿತ ಮಾನವೀಯತೆಯ ಸಮಾಜಕ್ಕಾಗಿ ಬಸವಾದಿ ಶರಣ ಶ್ರಮಿಸಿದರು. ಇದೇ ದಾರಿಯಲ್ಲಿ ಸಾಗಿದ ಬಹಳಷ್ಟು ಮಹನೀಯರು ಇದಕ್ಕಾಗಿ ಪರಿಶ್ರಮಿಸಿದರು. ಆದಾಗ್ಯೂ, ಈಗಲೂ ಜಾತಿ ವ್ಯವಸ್ಥೆ ಹೋಗಿಲ್ಲ. ಬದಲಿಗೆ ಇನ್ನಷ್ಟು ಗಟ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚಲನರಹಿತ ಜಾತಿ ವ್ಯವಸ್ಥೆ ಜಡ್ಡುಗಟ್ಟಿದೆ. ಎಲ್ಲಿಯವರೆಗೆ ಇನ್ನೂ ಅಸಮಾನತೆ ಸಮಾಜ ಇರಬೇಕು? ಏಕೆ ಇನ್ನೂ ಬಡತನ, ಅನಕ್ಷರತೆ, ತಾರತಮ್ಯ ಗಟ್ಟಿಯಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಂದಿಗೂ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ. ಪರಿಣಾಮ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೋಗುವ ಪರಿಸ್ಥಿತಿ ಈಗಲೂ ಇದೆ. ವಿದ್ಯಾವಂತರೇ ಮೂಢನಂಬಿಕೆಗೆ ಬಲಿಯಾಗುತ್ತಿದ್ದಾರೆ. ಮನುವಾದಿಗಳು ಮೌಢ್ಯವನ್ನೇ ನಂಬುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಾತಿ ವ್ಯವಸ್ಥೆ ಸಾಂಕ್ರಾಮಿಕ ರೋಗ. ಜತೆಗೆ ಅದು ಅಂಟುರೋಗವಿದ್ದಂತೆ. ಎಲ್ಲರೂ ಮನುಷ್ಯರಾಗುವವರೆಗೂ ಜಾತಿ ವ್ಯವಸ್ಥೆ ಹೋಗಲ್ಲ. ಯಾವ ಧರ್ಮಗಳೂ ದ್ವೇಷಿಸಲು ಹೇಳಿಲ್ಲ. ಪರಸ್ಪರ ಪ್ರೀತಿಸಲು ಹೇಳಿವೆ. ಬಸವಣ್ಣನವರು ಸಹ ಇದನ್ನೇ ಪ್ರತಿಪಾದಿಸಿದರು. ನಾನು ದೇವರಿಲ್ಲ ಎಂದು ಹೇಳಲ್ಲ. ಎಲ್ಲ ಕಡೆ ದೇವರಿದ್ದಾನೆ. ದೇವನೊಬ್ಬ ನಾಮ ಹಲವು. ಇವ ನಮ್ಮವ ಎನ್ನುವ ಮನಸ್ಥಿತಿ ಇನ್ನೂ ಬಂದಿಲ್ಲ. ಹೀಗಾಗಿ ಬಸವಣ್ಣನ ತತ್ವಗಳು ಇಂದಿಗೂ ಬೇಕು, ಮುಂದಕ್ಕೂ ಬೇಕಾಗುತ್ತವೆ ಎಂದು ಹೇಳಿದರು.
ಕರ್ಮ ಸಿದ್ಧಾಂತವನ್ನು ಬಸವಣ್ಣ ತಿರಸ್ಕರಿಸಿದ್ದರು. ಹಿಂದಿನ ಜನ್ಮದಲ್ಲಿ ಕರ್ಮ ಮಾಡಿದ್ದೆ ಎಂಬುದೆಲ್ಲ ಸುಳ್ಳು. ಇದನ್ನು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟು ಹಾಕಿದ್ದು ಎಂಬ ಸತ್ಯವನ್ನು ಬಸವಾದಿ ಶರಣರು ಮನವರಿಕೆ ಮಾಡಿಕೊಟ್ಟರು. ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿದ್ದರೆ ಅಸಮಾನತೆಯ ಸಮಾಜ ನಿರ್ಮಾಣ ಆಗುತ್ತಿರಲಿಲ್ಲ ಎಂದರು.
ಇಂದಿಗೂ ಜಾತಿ ವ್ಯವಸ್ಥೆ ಬೇರೂರಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಎಲ್ಲರಿಗೂ ದೊರಕಿದಾಗ ಜಾತಿ ವ್ಯವಸ್ಥೆ ನಿರ್ಮೂಲ ಸಾಧ್ಯ. ನಮ್ಮ ಸರ್ಕಾರ ಬಸವಣ್ಣನವರ ವಿಚಾರಧಾರೆ ಅನುಸರಿಸುತ್ತಿದೆ. ನಾನು ಸಹ ಬಸವಣ್ಣನವರ ಪಕ್ಕಾ ಅನುಯಾಯಿ. ಬಸವ, ಅಂಬೇಡ್ಕರ್ ಕಂಡಂತಹ ಸಮ ಸಮಾಜದ ಕನಸು ಸರ್ಕಾರದ ಉದ್ದೇಶ. ಎಲ್ಲರೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಬಸಣ್ಣನವರ ಆಶಯದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಸಮಾಜ ಪರಿವರ್ತನೆಗೆ ಕ್ರಮವಹಿಸಿದೆ. ಇದು ಒಂದು ಜಾತಿ, ಧರ್ಮಕ್ಕೆ ಸಿಮೀತವಾಗಿಲ್ಲ ಎಂದರು.
ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸವ ಭವನಕ್ಕೆ 5 ಕೋಟಿ ರೂ.ಅನುದಾನ ನೀಡುವುದಾಗಿ ಸಿಎಂ ಈ ಸಂದರ್ಭದಲ್ಲಿ ಭರವಸೆ ನೀಡಿದರು. ಇದೇ ವೇಳೆ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಶಿಲಾನ್ಯಾಸವನ್ನು ಸಿಎಂ ಅನಾವರಣಗೊಳಿಸಿದರು.