ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ನೂತನವಾಗಿ ನೇಮಕಗೊಂಡಿರುವ ಜೂನಿಯರ್ ಪವರ್‌ಮನ್‌ಗಳ 4ನೇ ತಂಡದವರಿಗೆ ಆರು ದಿನಗಳ ಪ್ರವೇಶಾತಿ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು.
ಮೈಸೂರು ತಾಲೂಕಿನ ಕಡಕೊಳದಲ್ಲಿರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೊದಲ ದಿನದಂದು, ವಿದ್ಯುತ್ ವಿತರಣಾ ವ್ಯವಸ್ಥೆ, ಟ್ರಾನ್ಸ್‌ಫಾರ್ಮರ್ ನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ವಿದ್ಯುತ್ ಕಳ್ಳತನ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಹಾಗೂ ವಿಡಿಯೋಗಳ ಮೂಲಕ ತರಬೇತಿ ನೀಡಿದರು.
ಸೆಸ್ಕ್ ತರಬೇತಿ ಶಾಖೆ ಉಪ ಪ್ರಧಾನ ವ್ಯವಸ್ಥಾಪಕಿ ಎಂ.ವೈ.ಹೇಮಾ ಮಾತನಾಡಿ, ಪವರ್‌ಮನ್‌ಗಳು ಗ್ರಾಹಕರು ಹಾಗೂ ಸೆಸ್ಕ್ ನಡುವಿನ ಸಂಪರ್ಕದ ಸೇತುವೆಯಾಗಿರುತ್ತಾರೆ. ಹೀಗಾಗಿ ಅವರು ಗ್ರಾಹಕರೊಂದಿಗೆ ಸಂಯಮ, ಸಹನೆ, ಸೌಹಾರ್ದತೆಯಿಂದ ನಡೆದುಕೊಂಡು, ಅಡಚಣೆರಹಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಆದ್ದರಿಂದ ಕರ್ತವ್ಯದಲ್ಲಿ ಯಾವುದೇ ತಪ್ಪುಗಳು ಸಂಭವಿಸಿದಾಗ ಅದನ್ನು ಸರಿಪಡಿಸಲು ವಿಳಂಬ ಮಾಡಬಾರದು ಎಂದು ಹೇಳಿದರು.
ಅದರಲ್ಲೂ ಜೀವಕ್ಕೆ ಹಾನಿಯಾಗುವಂತಹ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು. ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ತಡೆರಹಿತ ವಿದ್ಯುತ್ ಒದಗಿಸುವುದು ಸೆಸ್ಕ್‌ನ ಪ್ರಮುಖ ಧ್ಯೇಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ಮುಖ್ಯವಾಗಿ ಗ್ರಾಹಕರ ಸಹಕಾರದೊಂದಿಗೆ ಈ ಗುರಿ ಸಾಧಿಸಲು ನಿರಂತರವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಜೂನಿಯರ್ ಪವರ್ ಮನ್‌ಗಳ ಕರ್ತವ್ಯ ಹಾಗೂ ಲೈನ್‌ಗಳ ಸಂರಕ್ಷಣೆ ಮಾಡುವ ಕುರಿತು ನಿವೃತ್ತ ಅಧೀಕ್ಷಕ ಇಂಜಿನಿಯರ್ ವೈರಮುಡಿ, ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಸಿ. ಮೋಹನ್ ಶಂಕರ್ ಹಾಗೂ ವಿದ್ಯುತ್ ಸುರಕ್ಷತೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಎಸ್. ವಿಶ್ವನಾಥ್ ಮಾಹಿತಿಯೊಂದಿಗೆ ತರಬೇತಿ ನೀಡಿದರು.
ವಿವಿಧ ವಿಷಯಗಳ ತರಬೇತಿ:
ತರಬೇತಿಯಲ್ಲಿ ವಿದ್ಯುತ್ ಮಾಪಕಗಳು, ಬಿಲ್ಲಿಂಗ್, ದರ ನಿಗದಿ, ಎಸ್‌ಒಪಿ, ಅರ್ಥಿಂಗ್, ವಿದ್ಯುತ್ ಕಳ್ಳತನ ಪತ್ತೆ, ಸೇವಾ ನಿಯಮಗಳು ಒಳಗೊಂಡಂತೆ, ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು. ಇದಲ್ಲದೆ 220 ಕೆವಿ ವಿದ್ಯುತ್ ಕೇಂದ್ರ, ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರ ಹಾಗೂ ಮೀಟರ್ ಪರೀಕ್ಷಾ ಪ್ರಯೋಗಾಲಯಗಳ ಭೇಟಿಗೂ ಅವಕಾಶ ನೀಡಲಾಗಿದೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ:
ಜೂನಿಯರ್ ಪವರ್‌ಮನ್‌ಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗಗಳ ದುರಸ್ತಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಪಾಲನೆ, ವಿದ್ಯುತ್ ಅಡಚಣೆಯಿಲ್ಲದೆ ಗುಣಮಟ್ಟದ ವಿದ್ಯುತ್ ಪೂರೈಕೆ, ಸೆಸ್ಕ್‌ನ ಕಾರ್ಯವೈಖರಿ, ವಿದ್ಯುತ್ ಉತ್ಪಾದನೆ, ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಹಾಗೂ ತಡೆರಹಿತ ವಿದ್ಯುತ್ ಒದಗಿಸುವುದು, ಹೊಸ ತಂತ್ರಜ್ಞಾನ, ಕಾರ್ಯವಿಧಾನಗಳ ಅಳವಡಿಸಿಕೆ ಇತರ ಮಾಹಿತಿಯನ್ನು ತರಬೇತಿಯಲ್ಲಿ ನೀಡಲಾಯಿತು.
ಸೆಸ್ಕ್ ತರಬೇತಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎನ್. ಜ್ಯೋತಿ, ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ನಿವೃತ್ತ ಅಧೀಕ್ಷಕ ಇಂಜಿನಿಯರ್ ಜೆ.ಬಿ. ಯೋಗೇಗೌಡ ಇತರರಿದ್ದರು.