ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

ಜಿಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಮೈಸೂರು ತಾಲೂಕಿನ ಗ್ರಾಪಂಗಳ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ತಾಪಂ ಇಒ ಕೃಷ್ಣ ಮತ್ತಿತರರು ಹಾಜರಿದ್ದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಮೈಸೂರು ತಾಲೂಕಿನ ಗ್ರಾಪಂಗಳ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ತಾಪಂ ಇಒ ಕೃಷ್ಣ ಮತ್ತಿತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಟಿ.ದೇವೇಗೌಡ ಸಲಹೆ
  • ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒಗಳ ಸಭೆ
ಮೈಸೂರು: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು, ಸಾರ್ವಜನಿಕರಿಂದ ದೂರು ಬರದಂತೆ ನಿಗಾ ವಹಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಮೈಸೂರು ತಾಲೂಕಿನ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು. 
ಅದಕ್ಕಾಗಿ ಕ್ರಿಯಾಯೋಜನೆ ಮಾಡಿಕೊಳ್ಳಬೇಕು. ನೀರಿನ ಸಮಸ್ಯೆ ಬರುವ ಗ್ರಾಮಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹಳ್ಳಿಗಳಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದರು.
ಗ್ರಾಪಂಗಳಲ್ಲಿ ಸದಸ್ಯರು ಇಲ್ಲದಿರುವ ಕಾರಣ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳ ಜವಾಬ್ದಾರಿ ದೊಡ್ಡದಿದೆ. ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ತಿಂಗಳು ಕಳೆದಿದೆ. 
ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಪಂನಲ್ಲಿ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕು. ಆಡಳಿತಾಧಿಕಾರಿಗಳು ಪಂಚಾಯಿತಿಗಳಿಗೆ ದಿನಕ್ಕೊಮ್ಮೆ ಭೇಟಿ ನೀಡಲು ಸಾಧ್ಯವಾಗದೆ ಇದ್ದರೂ ವಾರಕ್ಕೊಮ್ಮೆ ಭೇಟಿ ನೀಡಬೇಕು. ಪಿಡಿಒಗಳ ಜತೆಗೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಾಮಗಳಲ್ಲಿ ಎಷ್ಟು ಶಾಲೆಗಳಿವೆ, ಅಂಗನವಾಡಿ ಕೇಂದ್ರಗಳು, ಸ್ಮಶಾನಗಳು ಎಷ್ಟು ಇವೆ ಎಂಬುದನ್ನು ಪರಿಶೀಲಿಸಿ ಮೂಲಸೌಕರ್ಯ ಗಮನಿಸಬೇಕು. ಕುಡಿಯುವ ನೀರು ಒದಗಿಸುವಂತೆ ಮಾಡಬೇಕು. ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.
ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಕೆಲಸ ಮಾಡಬೇಕು. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳಲ್ಲಿ ಕೆಲವು ಬೀದಿಗಳಿಗೆ ಸಂಪರ್ಕ ಇಲ್ಲದಿದ್ದರೆ ಜೋಡಣೆ ಮಾಡಬೇಕು. ಯಾವುದಾದರೂ ಸ್ಮಶಾನದಲ್ಲಿ ಕುಡಿಯುವ ನೀರು ಇಲ್ಲದಿದ್ದರೆ ಗಮನಿಸಬೇಕು. ಅದೇ ರೀತಿ ಅಂಗನವಾಡಿ ಕೇಂದ್ರಗಳಲ್ಲೂ ಪರಿಶೀಲಿಸಬೇಕು ಎಂದು ಸೂಚಿಸಿದರು.
ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಜತೆಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು. 15ನೇ ಹಣಕಾಸು ಆಯೋಗದಲ್ಲಿ ಉಳಿಕೆ ಹಣ, ಬಡ್ಡಿ ಹಣ ಹಾಗೂ ತೆರಿಗೆ ಸಂಗ್ರಹದ ರೂಪದಲ್ಲಿ ಬರುವ ಮೊತ್ತವನ್ನು ಸೇರಿಸಿ ಕ್ರಿಯಾಯೋಜನೆ ತಯಾರಿಸಬೇಕು. ಒಂದು ವೇಳೆ 2024-25ನೇ ಸಾಲಿನಲ್ಲಿ ರೂಪಿಸಿರುವ ಕ್ರಿಯಾ ಯೋಜನೆಯಲ್ಲಿ ಉಳಿದಿರುವ ಅನುದಾನಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಯಾವ ಸಮಸ್ಯೆಗಳಿವೆ? ಅಂಗನವಾಡಿ, ಶಾಲೆ, ಸ್ಮಶಾನಗಳಲ್ಲಿ ಏನೇನು ಕೆಲಸಗಳು ಆಗಬೇಕು? ಕುಡಿಯುವ ನೀರು ಇದೆಯೇ ಅಥವಾ ಇಲ್ಲವೇ? ಕೊಠಡಿಗಳು ದುರಸ್ತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ದುರಸ್ತಿಗೆ ಬಂದಿದ್ದರೆ ಅಂತಹ ಕಟ್ಟಡಗಳ ದುರಸ್ತಿಗೆ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು ಎಂದು ಸೂಚಿಸಿದರು.
ಗ್ರಾಪಂಗೆ ಬರುವ ಅನುದಾನ, ತೆರಿಗೆಯಲ್ಲಿ ಬರುವ ಒಟ್ಟು ಮೊತ್ತದಲ್ಲಿ ಆಡಳಿತಾತ್ಮಕ ವೆಚ್ಚ ಕಳೆದು ಉಳಿದ ಅನುದಾನಕ್ಕೆ ಕ್ರಿಯಾಯೋಜನೆ ತಯಾರು ಮಾಡಬೇಕು. ಇದರಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.ಅದಕ್ಕೆ ಬೇಕಾದರೆ ಸಣ್ಣಪುಟ್ಟ ಮಾರ್ಪಾಡು ಮಾಡಿಕೊಂಡು ಸಲ್ಲಿಸಿದರೆ ಅನುಮೋದನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಏಪ್ರಿಲ್ ಮೊದಲ ವಾರದೊಳಗೆ ಸಲ್ಲಿಸಿ

ಸರ್ಕಾರದಿಂದ ನೀಡುವ ಅನುದಾನ, ತೆರಿಗೆ ಸಂಗ್ರಹದ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಬೇಕು. ಗ್ರಾಪಂನಲ್ಲಿ ಈಗ ಆಡತಾಧಿಕಾರಿಗಳು ಇರುವ ಕಾರಣ ಯಾವುದೇ ಒತ್ತಡ ಇರಲ್ಲ. ತಮಗೆ ಸಿಕ್ಕ ಅವಕಾಶ ಗ್ರಾಮಗಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಗ್ರಾಪಂಗಳಲ್ಲಿ ಆಗಬೇಕಿರುವ ಕೆಲಸಗಳು ಸೇರಿದಂತೆ ಸಮಗ್ರ ಮಾಹಿತಿ ಒಳಗೊಂಡ ವರದಿಯನ್ನು ಏಪ್ರಿಲ್ ಮೊದಲ ವಾರದೊಳಗೆ ತಯಾರಿಸಿ ಸಲ್ಲಿಸಬೇಕು. ನಂತರ, ಮತ್ತೊಂದು ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಮಾತನಾಡಿ, ಗ್ರಾಪಂಗಳಲ್ಲಿ ಎದುರಾಗುವ ಯಾವುದೇ ಸಮಸ್ಯೆ ನಿರ್ವಹಣೆ ಮಾಡಬೇಕು. ಆಡಳಿತಾಧಿಕಾರಿಗಳಿಗೆ ಅನುಭವವಿದೆ. ಪಿಡಿಒಗಳಿಗೂ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ವಿಚಾರಗಳು ಗೊತ್ತಿದೆ. ಆದ್ದರಿಂದ ಎಲ್ಲ ಅಧಿಕಾರಿಗಳು ವಾಸ್ತವತೆ ಅರಿತು ಕೆಲಸ ಮಾಡಿದರೆ ಉತ್ತಮ ಎಂದರು.
ತಾಪಂ ಇಒ ಕೃಷ್ಣ, ಆಡಳಿತಾಧಿಕಾರಿಗಳಾದ ಮಹದೇವಸ್ವಾಮಿ, ಅಶೋಕ್, ಶ್ವೇತಾ, ಮಾಯಪ್ಪ, ಶಿವಣ್ಣ, ಶಿವಕುಮಾರ್, ಜೀವನಕುಮಾರ್, ಸುರೇಶ್, ಪ್ರಕಾಶ್, ರವಿಕುಮಾರ್, ಚಿಕ್ಕಣ್ಣ, ಹರ್ಷದ್ ಪಾಷ, ಯತೀಶ್, ಭವ್ಯಾ, ಸುಹಾಶ್, ಲೋಹಿತ್‌ಬಾಬು ಪಾಲ್ಗೊಂಡಿದ್ದರು.

ಶಾಲೆಗಳಿಗೆ ಹದ್ದುಬಸ್ತು

ಸರ್ಕಾರಿ ಶಾಲೆಗಳ ಜಾಗವನ್ನು ಹದ್ದುಬಸ್ತಿನಲ್ಲಿಟ್ಟು ಸಂರಕ್ಷಣೆ ಮಾಡಲು ಆರ್‌ಟಿಸಿ ಮಾಡಿಸಿಕೊಳ್ಳಬೇಕು. ಗ್ರಾಮ ಠಾಣಾ ಜಾಗದಲ್ಲಿರುವ ಶಾಲೆ ಹೊರತುಪಡಿಸಿ ಉಳಿದ ಶಾಲೆಗಳಿಗೆ ಸರ್ವೇ ಮಾಡಿ ಆರ್‌ಟಿಸಿಯಲ್ಲಿ ಕೂರಿಸಬೇಕು.
 ಕಂದಾಯ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಂದೊಂದು ದಿನ ಒಂದೊಂದು ಶಾಲೆಗಳಲ್ಲಿ ಆರ್‌ಟಿಸಿಯಲ್ಲಿ ಹೆಸರನ್ನು ನಮೂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸರ್ಕಾರಿ ಶಾಲೆಗೆ ವ್ಯಕ್ತಿಯೊಬ್ಬರು ತಮ್ಮ ಜಾಗ ದಾನ ಮಾಡಿದ್ದರು. 
ಅವರಿಗೆ 10 ಲಕ್ಷ ರೂ.ನೀಡಲಾಗಿತ್ತು. ಈಗ ಅವರ ಮೊಮ್ಮಗ ನಮ್ಮ ತಾತನ ಜಾಗವೆಂದು ಹೇಳಿ ಬಂದಿದ್ದರು. ಹೀಗಾಗಿ, ಮುಂದೆ ಅಂತಹ ವಿಚಾರಗಳಿಗೆ ಅವಕಾಶ ಕೊಡದಂತೆ ಮೊದಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಒಗೆ ಹೇಳಿದರು. ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ ವರ್ಗೀಕರಣ ಕೆಲಸ ಮಾಡಬೇಕು. ಕಸ ವಿಂಗಡಣೆಗೆ ಜಾಗ ಇಲ್ಲದಿದ್ದರೆ ಗುರುತಿಸಬೇಕು. ಜಾಗ ಇರುವ ಕಡೆಗಳಲ್ಲಿ ತಕ್ಷಣವೇ ಕೆಲಸ ಶುರು ಮಾಡಬೇಕು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net