ಚಂದದ ಮನೆಗೊಂದು ಕಾರು ಎಂಬ ಕಾಲ ಹೋಯಿತು. ಈಗೇನಿದ್ದರೂ ನನಗೊಂದು, ನನ್ನ ಹೆಂಡತಿಗೊಂದು ಮತ್ತು ಮಕ್ಕಳಿಗೊಂದು ಕಾರು ಬೇಕು ಅನ್ನುವ ಕೊಳ್ಳುಬಾಕತನದ ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ. ನಮ್ಮಲ್ಲಿ ಈ ಕೊಳ್ಳುಬಾಕತನದ ಒತ್ತಡವನ್ನು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಉಂಟು ಮಾಡಿದ್ದನ್ನು ನಾವು ಮರೆಯುವಂತಿಲ್ಲ. ಕಾಲಿಗೆ, ಮೆದುಳಿಗೆ, ದೇಹಕ್ಕೆ ಕೆಲಸ ಕೊಡದ ನಾವು ಈಗ ನಮ್ಮ ದೇಹದ ಒಂದೊಂದು ಅಂಗಕ್ಕೂ ಒಂದೊಂದು ಸಲಕರಣೆ ಬೇಕು ಎನ್ನುವ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ನಮ್ಮಲ್ಲಿರುವ ಇಂಥ ಕೊಳ್ಳುಬಾಕತನವೇ ಗ್ರಾಹಕ ಸಂಸ್ಕೃತಿಯಾಗಿ ನಿತ್ಯವೂ ಬೆಳೆಯುತ್ತಾ, ವ್ಯಾಪಾರಿ ಸ್ವರೂಪದ ಧೋರಣೆಗಳು ದ್ರೋಹ ವಂಚನೆಗಳಾಗಿ ಬದಲಾಗುತ್ತಾ ಮತ್ತವು ಪ್ರತಿನಿತ್ಯವು ಹೆಚ್ಚಾಗುತ್ತಾ ಗ್ರಾಹಕರ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ ಎಂದರು.