ರೇಷ್ಮೆ ಕಾರ್ಖಾನೆ ಉಳಿವಿಗಾಗಿ ಬಾರಕೋಲು ಚಳವಳಿ

 ತಿ.ನರಸೀಪುರ ಕೆಎಸ್‌ಐಸಿ ಕಾರ್ಖಾನೆ ಉಳಿವಿಗಾಗಿ ರೈತರು ಬಾರಕೋಲ ಚಳವಳಿಯನ್ನು ಗುರುವಾರ ನಡೆಸಿದರು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ, ಎಚ್.ಹನುಮಯ್ಯ, ಹಾಲಿನ ನಾಗರಾಜ್ ಇನ್ನಿತರರಿದ್ದರು
ತಿ.ನರಸೀಪುರ ಕೆಎಸ್‌ಐಸಿ ಕಾರ್ಖಾನೆ ಉಳಿವಿಗಾಗಿ ರೈತರು ಬಾರಕೋಲ ಚಳವಳಿಯನ್ನು ಗುರುವಾರ ನಡೆಸಿದರು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ, ಎಚ್.ಹನುಮಯ್ಯ, ಹಾಲಿನ ನಾಗರಾಜ್ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
  • ಸರ್ಕಾರದ ವಿರುದ್ಧ ಆಕ್ರೋಶ
ಮೈಸೂರು: ತಿ.ನರಸೀಪುರ ಕೆಎಸ್‌ಐಸಿ ಕಾರ್ಖಾನೆ ಉಳಿವಿಗಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರೈತರು ಬಾರಕೋಲು ಚಳವಳಿಯನ್ನು ಗುರುವಾರ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದರು. ಕೆಎಸ್‌ಐಸಿ ಉಳಿಸಿ, ರೇಷ್ಮೆ ಬೆಳೆಗಾರರನ್ನು ರಕ್ಷಿಸಿ ಎಂಬ ಧ್ವನಿಯೂ ಮೊಳಗಿತು.
1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಕಾರ್ಖಾನೆ ಸ್ಥಾಪನೆ ಮಾಡಿದ್ದು, ಈ ಭಾಗದ ರೈತರ ಹಿತರಕ್ಷಣೆ, ಉದ್ಯೋಗ ಸೃಷ್ಟಿ, ಮೈಸೂರು ರೇಷ್ಮೆ ಪರಂಪರೆ ಉಳಿವಿಗಾಗಿ ಈ ಕಾರ್ಖಾನೆಯನ್ನು ಪ್ರಾರಂಭ ಮಾಡಲಾಯಿತು. 
ಇಂತಹ ಕಾರ್ಖಾನೆಯನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ 5.8 ಎಕರೆ ಜಾಗವನ್ನು ಬಿಟ್ಟು ಕೊಡಲು ಹೊರಟಿಸಿರುವುದು ರೈತ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ರಮವು ಮೈಸೂರ್ ಸಿಲ್ಕ್ ಎಂಬ ಪರಂಪರೆ ಅಳಿವಿಗೆ ಕಾರಣವಾಗುತ್ತದೆ. ಈ ಪರಂಪರೆ ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲ ವರ್ಗದ ರೈತರ ಆದಾಯ ಮೂಲ ಈ ಕಾರ್ಖಾನೆ. ಇದೀಗ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಹೊರಟಿರುವ ಸಮಂಜಸವಲ್ಲ. 
ಇದೇ ಕಾರ್ಖಾನೆ ಅಭಿವೃದ್ಧಿಗಾಗಿ ಈ ಬಜೆಟ್‌ನಲ್ಲಿ ಹೆಚ್ಚುವರಿ 100 ಕೋಟಿ ರೂ. ನೀಡಿ ಎರಡು ಯಂತ್ರ ಹಾಕಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಕೃತಿಯ ವೈವಿಧ್ಯತೆಯಲ್ಲಿ ಸುಮಾರು ಪಕ್ಷಿಗಳು ಹಾಗೂ 550ಕ್ಕೂ ಹೆಚ್ಚು ಗಿಡ ಮರಗಳು ಈ ಜಾಗದಲ್ಲಿ ಇವೆ. ಇವುಗಳ ನಾಶಕ್ಕೆ ಕಾರಣವಾಗಬೇಕಾಗುತ್ತದೆ. ಕ್ರೀಡಾ ಇಲಾಖೆಯು 200 ಮೀಟರ್ ಅಥ್ಲೆಟಿಕ್ಸ್ ಟ್ರ್ಯಾಕ್, ಬ್ಯಾಡ್ಮಿಂಟನ್, ಖೋಖೋ ಅಂಗಳ ನಿರ್ಮಾಣಕ್ಕೆ 5 ಎಕರೆ ಜಾಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಈ ಜಾಗದಲ್ಲಿ ತಿ.ನರಸೀಪುರ ಪಟ್ಟಣಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಹಾದಿ ಹೋಗಿದೆ. ಕ್ರೀಡಾಂಗಣ ನಿರ್ಮಾಣದಲ್ಲಿ ಇದಕ್ಕೆ ಅಡೆತಡೆಯಾಗಲಿದೆ ಎಂದು ಎಚ್ಚರಿಸಿದರು.
ರೈತ ಕಾರ್ಮಿಕ ಮತ್ತು ಸಾರ್ವಜನಿಕ ವಿರೋಧಿ ಯೋಜನೆಯನ್ನು ಸರ್ಕಾರ ಕೈ ಬಿಟ್ಟು ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಿ ಕ್ರೀಡಾಂಗಣ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಕೆರೆಹುಂಡಿ ರಾಜಣ್ಣ, ಎಚ್.ಹನುಮಯ್ಯ, ಹಾಲಿನ ನಾಗರಾಜ್, ಒಳಗೆರೆ ಗಣೇಶ್, ಗುಂಡ್ಲಾ ಚಿದಂಬರ, ಪ್ರಕಾಶ್ ಗಾಂಧಿ, ದೇವಿರಮ್ಮನಳ್ಳಿಹುಂಡಿ ಮನು, ಪ್ರಭುಸ್ವಾಮಿ ಪುಟ್ಟಸ್ವಾಮಿ, ಶ್ರೀಕಂಠ, ಹೊನ್ನೇಗೌಡನಳ್ಳಿ ಮಹೇಶ್,  ವೈಟ್ ನವೀನ, ಹೆಗ್ಗಡಳ್ಳಿ ಮನು, ಮುದ್ದಳ್ಳಿ ಪ್ರಕಾಶ್, ಜಗದೀಶ್ ಪ್ರಸಾದ್, ದಯಾನಂದ, ಗಣೇಶ, ಕಿಳ್ಳಿಪುರ ಶ್ರೀಕಂಠ  ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net