ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ್ದರೂ ಹೊಸ ಸಾಲ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ಎಂಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ವಿರುದ್ಧ ಪಿರಿಯಾಪಟ್ಟಣ ಮತ್ತು ಹುಣಸೂರು ಭಾಗದ ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರಲ್ಲದೆ ವಿಷ ಸೇವಿಸಲು ಯತ್ನಿಸಿದ್ದರು.
ನಗರದ ನೆಹರು ವೃತ್ತದಲ್ಲಿನ ಬ್ಯಾಂಕ್ ಎದುರು ಜಮಾವಣೆಗೊಂಡ ರೈತರು, ಬ್ಯಾಂಕ್ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಂಡಿಸಿಸಿ ಬ್ಯಾಂಕ್ ಪಿರಿಯಾಪಟ್ಟಣ ಶಾಸಕರ ಕೈಗೊಂಬೆಯಾಗಿದೆ. ಹುಣಸೂರು ಮತ್ತು ಪಿರಿಯಾಪಟ್ಟಣ ಭಾಗದ ರೈತರಿಗೆ ಸಾಲವನ್ನೇ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ನಂದಿನಾಥಪುರದ ರೈತ ರಂಗಸ್ವಾಮಿ ಆತ್ಮಹತ್ಯೆಗೆ ಯತ್ನಿಸಿ ವಿಷದ ಬಾಟಲು ತೆರೆದು ಕುಡಿಯಲು ಯತ್ನಿಸಿದರು. ಕೂಡಲೇ ಪ್ರತಿಭಟನಾಕಾರರ ಕಿರುಚಾಟದಿಂದ ಎಚ್ಚೆತ್ತ ಪೊಲೀಸರು ವಿಷದ ಬಾಟಲಿ ಕಿತ್ತುಕೊಂಡರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ಇತರ ರೈತರು ಆತ್ಮಹತ್ಯೆಗೆ ಯತ್ನಿಸಿದ ರಂಗಸ್ವಾಮಿ ಅವರನ್ನು ಸಮಾಧಾನಪಡಿಸಿದರು.
ಪಿರಿಯಾಪಟ್ಟಣ ಭಾಗದ ರೈತರಿಗೆ ಬ್ಯಾಂಕ್ ಸಾಲ ನೀಡುತ್ತಿಲ್ಲ. ರೈತರಿಗೆ ಸಹಕಾರಿ ಆಗಬೇಕಾದ ಬ್ಯಾಂಕ್ ಶಾಸಕರ ಕೈ ಗೊಂಬೆಯಾಗಿದೆ. ಕಾಲಕಾಲಕ್ಕೆ ಸಾಲ ಮರುಪಾವತಿ ಮಾಡಿದರೂ ನಮಗೆ ಸಾಲ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಸಾಲವನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಈಗ ಸಾಲ ನೀಡದೆ ಬ್ಯಾಂಕ್ ಸಿಬ್ಬಂದಿ ಆಟ ಆಡಿಸುತ್ತಿದ್ದಾರೆ. ನಮಗೆ ಸಾಲ ನೀಡದಿದ್ದರೆ ವಿಷ ಕುಡಿದು ಸಾಯುತ್ತೇವೆ ಎಂದು ರೈತರು ಅಳಲು ತೋಡಿಕೊಂಡರು.
ರೈತರಿಗೆ ಸಾಥ್ ನೀಡಿದ ಶಾಸಕ ಜಿ.ಡಿ.ಹರೀಶ್ ಗೌಡ ರೈತರೊಡನೆ ಸೇರಿ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಕೆ.ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿ ಹಲವರು ಪಾಲ್ಗೊಂಡಿದ್ದರು.