ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ: ಮಾನವ-ವನ್ಯಜೀವಿ ಸಂಘರ್ಷಕ್ಕೆ ಪ್ರವಾಸೋದ್ಯಮ ಕಾರಣವಲ್ಲ ಎಂದ ತಜ್ಞರು

ಸಫಾರಿ
ಸಫಾರಿ
Published on
ಮೈಸೂರು: ಅರಣ್ಯ ಇಲಾಖೆಯು ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಕಾರ್ಯಾಚರಣೆಯನ್ನು ಗುರುವಾರದಿಂದ (ಫೆ.19) ಪುನರಾರಂಭಿಸಿದೆ. ವಾಹನಗಳ ಸಂಖ್ಯೆ ಮತ್ತು ಅವಧಿ ಕಡಿಮೆ ಮಾಡುವ ಷರತ್ತಿನೊಂದಿಗೆ ಸಫಾರಿಗೆ ಅನುಮತಿ ನೀಡಲಾಗಿದ್ದು, ಈ ನಿರ್ಧಾರವನ್ನು ‘ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಷನ್’ (ಕೆಇಟಿಆರ್ಎ) ಸ್ವಾಗತಿಸಿದೆ. ಇದು ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಸಾರ್ವಜನಿಕ ವಿಶ್ವಾಸ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ರಚನಾತ್ಮಕ ಹೆಜ್ಜೆಯಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಕಳೆದ ಕೆಲವು ವಾರಗಳಿಂದ ಸಫಾರಿ ಸ್ಥಗಿತಗೊಂಡಿದ್ದರಿಂದ ಬಂಡೀಪುರ-ನಾಗರಹೊಳೆ-ಕಬಿನಿ ವ್ಯಾಪ್ತಿಯಲ್ಲಿ ಸ್ಥಳೀಯ ಉದ್ಯೋಗ ಮತ್ತು ಪ್ರವಾಸೋದ್ಯಮ ಆಧಾರಿತ ಉದ್ದಿಮೆಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇದೀಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ, ನಿಗದಿತ ಮಾರ್ಗಗಳಲ್ಲಿ ನಡೆಯುವ ನಿಯಂತ್ರಿತ ಪರಿಸರ ಪ್ರವಾಸೋದ್ಯಮವು ಇತ್ತೀಚಿನ ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳಿಗೆ ಕಾರಣವಲ್ಲ ಎಂದು ವನ್ಯಜೀವಿ ಮತ್ತು ಸಂರಕ್ಷಣಾ ತಜ್ಞರು ಪುನರುಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹುಲಿಗಳ ಸಂರಕ್ಷಣೆಗಾಗಿ ಕೆಲಸ ಮಾಡುವ ಒಂದು ಅಂತಾರಾಷ್ಟ್ರೀಯ ಸಂಸ್ಥೆ, 'ಟ್ರಾವೆಲ್ ಆಪರೇಟರ್ಸ್ ಫಾರ್ ಟೈಗರ್ಸ್' ಸಂಸ್ಥಾಪಕ ಹಾಗೂ ವನ್ಯಜೀವಿ ಸಂರಕ್ಷಕ ಜೂಲಿಯನ್ ಮ್ಯಾಥ್ಯೂಸ್, "ಕರ್ನಾಟಕದಲ್ಲಿ ಸಫಾರಿಗಳು ಪುನರಾರಂಭಗೊಂಡಿರುವುದು ಮತ್ತು ಸ್ಥಳೀಯ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಸಂತಸ ತಂದಿದೆ. ಆದರೆ, ಸಂಘರ್ಷಕ್ಕೆ ಪರಿಸರ ಪ್ರವಾಸೋದ್ಯಮವೇ ಕಾರಣ ಎಂದು ದೂಷಿಸುವುದು ಮತ್ತು ಅದರ ಪರಿಣಾಮವಾಗಿ ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ವಾಸ್ತವವಾಗಿ, ವನ್ಯಜೀವಿ ಸಂಘರ್ಷವು ಉದ್ಯಾನವನಗಳ ಸಂರಕ್ಷಣಾ ಪ್ರಯತ್ನಗಳ ಯಶಸ್ಸಿನ ಪರಿಣಾಮವಾಗಿದೆ. ಇದು ಅರಣ್ಯ ಇಲಾಖೆಯ ನಿರ್ವಹಣಾ ವಿಷಯವೇ ಹೊರತು ಪ್ರವಾಸೋದ್ಯಮದ ಸಮಸ್ಯೆಯಲ್ಲ. ಹೆಚ್ಚುತ್ತಿರುವ ಹುಲಿಗಳ ಸಾಂದ್ರತೆ ಮತ್ತು ಜನಸಂಖ್ಯೆಯನ್ನು ಒಟ್ಟಾಗಿ ಹೇಗೆ ನಿರ್ವಹಿಸುವುದು ಎಂಬುದು ಪ್ರಮುಖ ಪ್ರಶ್ನೆ. ಇದಕ್ಕೆ ಪೂರ್ವಭಾವಿ ನಿರ್ವಹಣೆ ಮತ್ತು ಸಾಮೂಹಿಕ ಬೆಂಬಲದ ಅಗತ್ಯವಿದೆ. ಪ್ರವಾಸಿಗರು ನೀಡುವ ಶುಲ್ಕ ಉದ್ಯಾನವನಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ," ಎಂದು ಹೇಳಿದ್ದಾರೆ.
ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಸಂರಕ್ಷಣಾ ಕಾರ್ಯದ ಯಶಸ್ಸಿಗೆ ಸಾಕ್ಷಿ ಎಂದು ತಜ್ಞರು ಹೇಳಿದ್ದಾರೆ. ಪ್ರಾಣಿಗಳ ಸಂಖ್ಯೆ ಏರಿಕೆಯಾದಂತೆ ಅವುಗಳ ತನ್ನ ಪ್ರದೇಶಕ್ಕಾಗಿ ಪೈಪೋಟಿ ನಡೆಸುತ್ತವೆ ಹಾಗೂ ದುರ್ಬಲ ಪ್ರಾಣಿಗಳು ಕಾಡಿನಂಚಿನ ಪ್ರದೇಶಗಳಿಗೆ ಬರುತ್ತವೆ. ಇದು ಸಂಘರ್ಷಕ್ಕೆ ದಾರಿಯಾಗುತ್ತದೆ. ಇಂತಹ ಪರಿಸ್ಥಿತಿ ಎದುರಿಸಲು ಪ್ರಾಣಿಗಳ ಸಂಖ್ಯೆಗಳನ್ನು ತಗ್ಗಿಸುವ ತಂತ್ರಗಳು, ಆವಾಸಸ್ಥಾನಗಳ ಸಂಪರ್ಕ ಮತ್ತು ಮುನ್ಸೂಚನೆ ವ್ಯವಸ್ಥೆಗಳ ಅಗತ್ಯ ಎಂದು ಹೇಳಿದ್ದಾರೆ.
ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಅನೀಶ್ ಅಂಧೇರಿಯಾ ಮಾತನಾಡಿ, "ಭಾರತದ ಬಹುತೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೂರು ದಶಕಗಳಿಂದ ವಾಹನ ಸಫಾರಿಗಳು ನಡೆಯುತ್ತಿವೆ. ನಿಯಂತ್ರಿತ ಪ್ರವಾಸೋದ್ಯಮಕ್ಕೂ, ಮಾನವ-ಹುಲಿ ಸಂಘರ್ಷಕ್ಕೂ ಸಂಬಂಧವಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸರ್ಕಾರಿ ಅಂಕಿಅಂಶಗಳ ಪ್ರಕಾರವೇ ಕಳೆದ ಎರಡು ದಶಕಗಳಲ್ಲಿ ಹುಲಿಗಳ ಸಾಂದ್ರತೆ ಮೂರು ಪಟ್ಟು ಹೆಚ್ಚಾಗಿದೆ. ಹುಲಿಗಳು ಹೊಸ ಪ್ರದೇಶಗಳನ್ನು ಹುಡುಕುತ್ತಾ, ಕಿರಿದಾದ ಅರಣ್ಯದ ತುಣುಕುಗಳು ಮತ್ತು ಜನವಸತಿ ಪ್ರದೇಶಗಳ ಮೂಲಕ ಹಾದುಹೋಗುತ್ತವೆ. ತ್ವರಿತ ಅಭಿವೃದ್ಧಿ ಮತ್ತು ಅರಣ್ಯದ ಮೇಲಿನ ಅವಲಂಬನೆಯಿಂದಾಗಿ ಕಾರಿ ಡಾರ್‌ಗಳು ನಾಶವಾಗಿವೆ. ಆವಾಸಸ್ಥಾನಗಳ ನಾಶ ಸಂಘರ್ಷಕ್ಕೆ ಮುಖ್ಯ ಕಾರಣವೇ ಹೊರತು ಪ್ರವಾಸೋದ್ಯಮವಲ್ಲ. ಸಫಾರಿ ಪುನರಾರಂಭ ಸ್ವಾಗತಾರ್ಹ, ಆದರೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಆವಾಸಸ್ಥಾನಗಳ ರಕ್ಷಣೆಯಲ್ಲಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಸಫಾರಿ ಕಾರ್ಯಾಚರಣೆಯು ಕಟ್ಟುನಿಟ್ಟಾದ ನಿಯಂತ್ರಣದಲ್ಲಿದೆ ಮತ್ತು ಸುಸ್ಥಿರತೆಯ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆಯೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಲು ಬದ್ಧರಾಗಿರುವುದಾಗಿ ಕೆಇಟಿಆರ್ಎ ತಿಳಿಸಿದೆ. ಸಫಾರಿ ಪುನರಾರಂಭವು ಸಂರಕ್ಷಣಾ ಯಶಸ್ಸು, ಸಮುದಾಯದ ಸ್ಥಿರತೆ ಮತ್ತು ಪಾರದರ್ಶಕ ಆಡಳಿತವನ್ನು ಒಳಗೊಂಡ ದೀರ್ಘಕಾಲೀನ ಸಹಬಾಳ್ವೆಯ ಮಾದರಿಗಳತ್ತ ಚರ್ಚೆಯನ್ನು ಬದಲಾಯಿಸಲು ಅವಕಾಶ ಒದಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net