ನಂಜನಗೂಡು: ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಸುಮಾರು 500 ಬಾಳೆ ಗಿಡಗಳನ್ನು ತಿಂದು, ತುಳಿದು ನಾಶ ಮಾಡಿದೆ.
ಶುಕ್ರವಾರ ತಡರಾತ್ರಿ ರೈತರ ಜಮೀನುಗಳಿಗೆ ಲಗ್ಗೆ ಇಟ್ಟ ಐದಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗ್ರಾಮದ ವೆಂಕಟೇಶ್, ದೇವರಾಜಪ್ಪ, ಕೆಂಪಣ್ಣ, ಮಹಾದೇವಪ್ಪ ಎಂಬುವರು ಬೆಳೆದಿದ್ದ ಮುಸುಕಿನ ಜೋಳ ಹಾಗೂ ಬಾಳೆ ಗಿಡಗಳನ್ನು ತಿಂದು, ತುಳಿದು ನಾಶ ಮಾಡಿದೆ.
ಗ್ರಾಮದ ರೈತ ವೆಂಕಟೇಶ್ ಮಾತನಾಡಿ, ಮಡುವಿನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಐದು ತಿಂಗಳಿನಿಂದ ಆನೆಗಳ ಕಾಟ ಮಿತಿಮೀರಿದೆ. ರೈತರು ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ. ಆನೆಗಳ ಉಪಟಳ ಹೆಚ್ಚಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಶಾಸಕ ದರ್ಶನ್ ಅವರು ಅಧಿಕಾರಿಗಳು ಮತ್ತು ರೈತರ ಸಭೆ ನಡೆಸಿ, ಆನೆಗಳ ಉಪಟಳ ಹೆಚ್ಚಿರುವ ಪ್ರದೇಶಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.