ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ಮೂವರು ಅಧಿಕಾರಿಗಳು ಭೇಟಿ
ಇದು ಆಕಸ್ಮಿಕ ಘಟನೆ. ಮೃತ ಸಲೀಂ ಸೀಜನ್ ವ್ಯಾಪಾರಿ: ಸಚಿವ ಡಾ.ಮಹದೇವಪ್ಪ
ಮೈಸೂರು: ಮೈಸೂರು ಅರಮನೆ ಬಳಿ ಗುರುವಾರ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 3ಕ್ಕೆ ಏರಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆ ಶುಕ್ರವಾರ ಮೃತಪಟ್ಟಿದ್ದಾರೆ.
ನಂಜನಗೂಡಿನ ಚಾಮಲಾಪುರ ಬೀದಿ ನಿವಾಸಿ ಮಂಜುಳಾ(38) ಸಂಜೆ ಕೊನೆಯುಸಿರೆಳೆದವರು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಲಕ್ಷ್ಮೀ ಅವರ ರಾತ್ರಿ ಮೃತಪಟ್ಟಿದ್ದಾರೆ. ಇಬ್ಬರಿಗೂ ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಆರೋಗ್ಯದಲ್ಲಿ ಚೇತರಿಕೆಯಾಗಲಿಲ್ಲ.
ಊರಿನಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದ ಮಂಜುಳಾ, ಹೂ ಖರೀದಿಸಲು ನಗರಕ್ಕೆ ಬಂದಿದ್ದರು. ಲಕ್ಷ್ಮೀ ಅವರು ಕ್ರಿಸ್‌ಮಸ್ ರಜೆ ಇದ್ದ ಕಾರಣ ಮಗಳೊಂದಿಗೆ ಪತ್ನಿ ಮೈಸೂರಿಗೆ ಬಂದಿದ್ದರು.
ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ರಾತ್ರಿ 8.30ಕ್ಕೆ ಬಲೂನ್‌ಗೆ ಹೀಲಿಯಂ ಅನಿಲ ತುಂಬುವ ಸಿಲಿಂಡರ್ ಸ್ಫೋಟಗೊಂಡಿತ್ತು. ಬಲೂನ್ ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ(40) ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿದಂತೆ ಮೃತ ಸಲೀಂ ವಿರುದ್ಧ ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನರಸಿಂಹರಾಜ ಕ್ಷೇತ್ರದ ಲಷ್ಕರ್ ಮೊಹಲ್ಲಾದ ಶರೀಫ್ ಲಾಡ್ಜ್‌ನಲ್ಲಿ ಅವರೊಂದಿಗೆ ವಾಸ್ತವ್ಯವಿದ್ದ ಅರ್ಬಾಜ್, ರಿಜ್ವಾನ್, ರಾಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಎನ್‌ಐಎ ತಂಡ ಭೇಟಿ:
ಘಟನಾ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ಮೂವರು ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದು ವಾಪಸ್ ಆಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆರಳಚ್ಚು ತಜ್ಞರು, ಪೊಲೀಸ್ ಇಲಾಖೆಯ ವಿವಿಧ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿವೆ. ಸ್ಥಳದಲ್ಲಿ ಬಿಳಿ ಪೌಡರ್ ದೊರೆತಿದೆ. ಬಲೂನ್‌ಗೆ ತುಂಬಲು ಸೋಡಿಯಂ ಹೈಡ್ರಾಕ್ಸೈಡ್ ಹಾಗೂ ಕಾಸ್ಟಿಕ್ ಸೋಡ ಬಳಸಲಾಗಿದೆ ಎಂಬುದು ಗೊತ್ತಾಗಿದೆ.
ಇದು ಆಕಸ್ಮಿಕ ದುರಂತ
ಗಾಯಾಳುಗಳ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಇದು ಆಕಸ್ಮಿಕ ಘಟನೆ. ಮೃತ ಸಲೀಂ ಸೀಜನ್ ವ್ಯಾಪಾರಿ. ಆಯಾ ಸೀಜನ್‌ಗೆ ಅನುಗುಣವಾಗಿ ವ್ಯಾಪಾರ ಮಾಡುತ್ತಿದ್ದ. ಮೊದಲು ಐಸ್‌ಕ್ಯಾಂಡಿ ಮಾರಾಟ ಮಾಡುತ್ತಿದ್ದ. ಈಗ ಹೀಲಿಯಂ ಸಿಲಿಂಡರ್ ಬಳಸಿ ಬಲೂನ್ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದರು.
ಇಂತಹ ಘಟನೆಗಳು ನಡೆದಾಗ ಎನ್‌ಐಎ ಮಾಹಿತಿ ಪಡೆಯುವುದು ಸಹಜ ಪ್ರಕ್ರಿಯೆ. ಈಗಾಗಲೇ ಎನ್‌ಐಎ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.