11ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸದ ಪೋಸ್ಟರನ್ನು ಗಣ್ಯರು ಬಿಡುಗಡೆ ಮಾಡಿದರು. ಸತೀಶ್ ತಿಪಟೂರು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ.ಸುದರ್ಶನ, ಬಸವರಾಜು ದೇವನೂರು, ಪ್ರೊ.ಎಸ್.ನರೇಂದ್ರಕುಮಾರ್, ಡಾ.ಜೆ.ಸೋಮಶೇಖರ್, ಬಿ.ಎನ್.ಶಶಿಕಲಾ, ಕೆ.ಮನು, ಗೀತಾ ಮೋಂಟಡ್ಕ, ಸುರೇಶ್‌ಬಾಬು, ಕೆ.ಆರ್.ನಂದಿನಿ ಇದ್ದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸದ ಪೋಸ್ಟರನ್ನು ಗಣ್ಯರು ಬಿಡುಗಡೆ ಮಾಡಿದರು. ಸತೀಶ್ ತಿಪಟೂರು, ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಡಾ.ಎಂ.ಡಿ.ಸುದರ್ಶನ, ಬಸವರಾಜು ದೇವನೂರು, ಪ್ರೊ.ಎಸ್.ನರೇಂದ್ರಕುಮಾರ್, ಡಾ.ಜೆ.ಸೋಮಶೇಖರ್, ಬಿ.ಎನ್.ಶಶಿಕಲಾ, ಕೆ.ಮನು, ಗೀತಾ ಮೋಂಟಡ್ಕ, ಸುರೇಶ್‌ಬಾಬು, ಕೆ.ಆರ್.ನಂದಿನಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಿಹಬ್ಬದಲ್ಲಿ ಬಾಬಾ ಸಾಹೇಬ್ ಚಿಂತನೆ ಅನಾವರಣ
  • ಪೋಸ್ಟರ್ ಬಿಡುಗಡೆ ಮಾಡಿ ರಂಗಾಯಣ ನಿರ್ದೇಶಕ ಸತೀಶ್ ಮಾಹಿತಿ
ಮೈಸೂರು: ‘ಬಹುರೂಪಿ ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಎಂಬ ಆಶಯದಡಿ ಜ.11ರಿಂದ 18ರವರೆಗೆ ರಂಗಾಯಣದ ಆವರಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆಯೋಜಿಸಲಾಗಿದೆ.
ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಬುಧವಾರ ಬಹುರೂಪಿ ನಾಟಕೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಜ.11ರಿಂದ ಆರಂಭವಾಗುವ ಬಹುರೂಪಿ ನಾಟಕೋತ್ಸವ ಈ ಬಾರಿ 8 ದಿನಗಳ ಕಾಲ ರಂಗಾಸಕ್ತರನ್ನು ಮನರಂಜಿಸಲಿದೆ. ಬಹುಭಾಷಾ ನಾಟಕೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಚಲನಚಿತ್ರೋತ್ಸವ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಬೀದಿನಾಟಕ, ಚಿತ್ರಕಲಾ ಪ್ರದರ್ಶನ ಹಾಗೂ ಮಕ್ಕಳ ನಾಟಕೋತ್ಸವ ರಂಗೋತ್ಸವದಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು.
ಬಹುರೂಪಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ನಾಟಕೋತ್ಸವ ಆಯೋಜನೆ ಮಾಡಲಾಗಿದೆ. ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ ಈ ಬಾರಿಯ ಆಶಯವಾಗಿದ್ದು, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಬೇಡ್ಕರರ ಜೀವನ-ಯಶೋಗಾಥೆ ಕುರಿತು ಬೆಳಕು ಚೆಲ್ಲುವ ನಾಟಕಗಳ ಪ್ರದರ್ಶನ ಇರಲಿದೆ. ಈ ಬಾರಿಯೂ ಮಕ್ಕಳ ರಂಗಭೂಮಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಕ್ಕಳ ನಾಟಕೋತ್ಸವ ನಡೆಸಲಾಗುತ್ತಿದೆ. ನಾಟಕೋತ್ಸವಕ್ಕೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ಸಿಕ್ಕಿದೆ. ಕಳೆದ ಬಾರಿ 25 ಲಕ್ಷ ರೂ. ಅನುದಾನ ದೊರೆತಿತ್ತು ಎಂದು ಹೇಳಿದರು.

ಬಹುರೂಪಿ ಕಾರ್ಯಕ್ರಮಗಳು:

ಜ.11ರಂದು ಚಲನಚಿತ್ರೋತ್ಸವ ಉದ್ಘಾಟನೆಯೊಂದಿಗೆ ಬಹುರೂಪಿ ಚಾಲನೆ ಪಡೆದುಕೊಳ್ಳಲಿದೆ. ಅಂದು ಬೆಳಗ್ಗೆ 10.30ಕ್ಕೆ ಭೂಮಿಗೀತದಲ್ಲಿ ಬರಹಗಾರ ಬರಗೂರು ರಾಮಚಂದ್ರಪ್ಪ ಚಲನಚಿತ್ರೋತ್ಸವ ಉದ್ಘಾಟಿಸುವರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಕಿಂದರಿ ಜೋಗಿ ಆವರಣದಲ್ಲಿ ಜನಪದ ಸಂಭ್ರಮಕ್ಕೆ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಚಾಲನೆ ನೀಡುವರು. 12ರಂದು ಬೆಳಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿಯನ್ನು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹೀದಾ, ರಂಗ ಸಮಾಜದ ಸದಸ್ಯರಾದ ಡಾ.ಕೆ.ರಾಮಕೃಷ್ಣಯ್ಯ, ಮಹಾಂತೇಶ್ ಗಜೇಂದ್ರಗಢ ಭಾಗವಹಿಸುವರು ಎಂದರು.
ನಾಟಕೋತ್ಸವದ ಅಧಿಕೃತ ಉದ್ಘಾಟನೆಯನ್ನು 12ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಾರತೀಯ ರಂಗಭೂಮಿಯ ಹಿರಿಯ ಕಲಾವಿದೆ ಹೈಸ್ನಾಂ ಸಾವಿತ್ರಿದೇವಿ ರಂಗೋತ್ಸವಕ್ಕೆ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುರೂಪಿ ಉದ್ಘಾಟಿಸುವರು. ಪುಸ್ತಕ, ಕರಕುಶಲ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ರಂಗಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಿಡುಗಡೆ ಮಾಡುವರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಾಬಾ ಸಾಹೇಬ್ ಛಾಯಾಚಿತ್ರ ಪ್ರದರ್ಶನ, ಸಂಸದ ಸುನಿಲ್ ಬೋಸ್ ಚಿತ್ರಕಲಾ ಪ್ರದರ್ಶನ ಅನಾವರಣ ಮಾಡುವರು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಹೈಸ್ನಾಂ ಸಾವಿತ್ರಿ ದೇವಿ ಅವರಿಗೆ ಬೆಳ್ಳಿ ಬಹುರೂಪಿ ರಂಗಗೌರವ ನೀಡಲಾಗುವುದು ಎಂದು ಮಾಹಿತಿ ನೀಡಿದರು.

17, 18ರಂದು ವಿಚಾರಸಂಕಿರಣ:

ಜ.17, 18ರಂದು ರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿದೆ. 17ರಂದು ಬೆಳಗ್ಗೆ 10.30ಕ್ಕೆ ನವದೆಹಲಿಯ ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್‌ಸಿ ಯತೀಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್ ಭಾಗವಹಿಸುವರು.
ಮೊದಲ ದಿನ ಜಾಗತಿಕ ಪ್ರಜಾಪ್ರಭುತ್ವಕ್ಕೆ ಎದುರಾಗುವ ಧಕ್ಕೆಗಳು, ಅಂಬೇಡ್ಕರ್ ಪರಿಕಲ್ಪನೆಯ ಪ್ರಜಾಪ್ರಭುತ್ವ: ಒಂದು ಮುಖಾಮುಖಿ, ಸಮಕಾಲಿನ ಭಾರತ ಮತ್ತು ಒಳಗೊಳ್ಳುವ ರಾಜಕಾರಣ, ಜಾಗತಿಕ ಮತ್ತು ಸ್ಥಳೀಯ ಸಾಮಾಜಿಕ ಅಸಮಾನತೆಗಳ ನಿರ್ಮೂಲನೆ: ಸವಾಲುಗಳು ಮತ್ತು ವಿದ್ಯಮಾನಗಳು, ಪ್ಯಾಸಿಸಂ ವಿರುದ್ಧ ಪ್ರತಿರೋಧದ ಸಂಕೇತವಾದ ಸಂವಿಧಾನದ ವಿಚಾರದ ಕುರಿತು ಆಹ್ವಾನಿತರು ಮಾತನಾಡಲಿದ್ದಾರೆ. 18ರಂದು ಅಂಬೇಡ್ಕರ್ ಆರ್ಥಿಕ ಚಿಂತನೆಗಳು ಮತ್ತು ಅದರ ಅನುಷ್ಠಾನ, ತಳಸಮುದಾಯಗಳ ಸಾಂಸ್ಕೃತಿಕ ಪ್ರತಿರೋಧ, ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ, ಅಂಬೇಡ್ಕರ್ ಪರಿಕಲ್ಪನೆಯ ಕಾರ್ಮಿಕ ಸುಧಾರಣೆಗಳು ಮತ್ತು ಚಳವಳಿಗಳು, ಭಾರತದಲ್ಲಿ ಜನಪರ ಚಳವಳಿಗಳ ಪ್ರತಿರೋಧ ಮತ್ತು ಅಭಿವೃದ್ಧಿ, ಮಹಿಳಾ ಚಳವಳಿ ಸವಾಲುಗಳು ಮತ್ತು ವಿದ್ಯಮಾನಗಳು, ಭಾರತ ಸಂವಿಧಾನ: ಆಶಯ ಮತ್ತು ಬಿಕ್ಕಟ್ಟುಗಳು ವಿಷಯ ಕುರಿತು ಗಣ್ಯರು ವಿಚಾರ ಮಂಡಿಸಲಿದ್ದಾರೆ. ಬಣ್ಣಗಳಲ್ಲಿ ಭೀಮಯಾನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಾವಿದರಾದ ಸ್ಮದುಲ್, ಶ್ರೀದರ್ಶನ್, ಮಿನಲ್, ಪೃಥ್ವಿ, ರಂಗನಾಥ್ ಅವರು ಬಣ್ಣಗಳಲ್ಲಿ ಭೀಮಯಾನ ಚಿತ್ರಿಸಲಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ, ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಗೌರವ ಸಲಹೆಗಾರ ಬಸವರಾಜು ದೇವನೂರು, ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಹಿರಿಯ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್, ಚಲನಚಿತ್ರೋತ್ಸವ ಸಂಚಾಲಕರಾದ ಬಿ.ಎನ್.ಶಶಿಕಲಾ, ಕೆ.ಮನು, ಜನಪದ ಉತ್ಸವದ ಸಂಚಾಲಕಿ ಗೀತಾ ಮೋಂಟಡ್ಕ, ರಂಗ ಸಮಾಜದ ಸದಸ್ಯ ಸುರೇಶ್‌ಬಾಬು, ರಾಷ್ಟ್ರೀಯ ವಿಚಾರಸಂಕಿರಣದ ಸಂಚಾಲಕಿ ಕೆ.ಆರ್.ನಂದಿನಿ ಇದ್ದರು.

24 ನಾಟಕಗಳ ಪ್ರದರ್ಶನ

ಈ ಬಾರಿಯ ಬಹುರೂಪಿ ನಾಟಕೋತ್ಸವದಲ್ಲಿ ಮಹಾರಾಷ್ಟ್ರ, ಮಣಿಪುರ, ತಮಿಳುನಾಡು, ಅಸ್ಸಾಂ, ಕೇರಳ ರಾಜ್ಯಗಳ 5 ನಾಟಕಗಳು, ಕನ್ನಡ ಭಾಷೆಯ 12 ನಾಟಕಗಳು, ತುಳು ಭಾಷೆಯ 2, ಹಿಂದಿ-ಇಂಗ್ಲಿಷ್ ಭಾಷೆಯ 5 ನಾಟಕಗಳು ಸೇರಿದಂತೆ ಒಟ್ಟು 24 ನಾಟಕಗಳು ಭೂಮಿಗೀತ, ವನರಂಗ, ಕಲಾಮಂದಿರ ಮತ್ತು ಕಿರುರಂಗಮಂದಿರ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿವೆ. ಚಲನಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ 21 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜತೆಗೆ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ಕಿಂದರಜೋಗಿ ಆವರಣದ ವೇದಿಕೆಯಲ್ಲಿ ಪ್ರದರ್ಶನ ನೀಡಲಿವೆ. ನಾಟಕ ವೀಕ್ಷಣೆಗೆ 100 ರೂ. ಟಿಕೆಟ್ ದರವಿದ್ದು, ಗುರುವಾರದಿಂದಲೇ ಟಿಕೆಟ್ ಮಾರಾಟ ಆರಂಭವಾಗಲಿದೆ. 70 ಮಳಿಗೆಗಳಲ್ಲಿ ಪುಸ್ತಕ, ಕರಕುಶಲ ವಸ್ತುಗಳು, ಆಹಾರ ಮೇಳ ಆಯೋಜಿಸಲಾಗಿದೆ.

ಬಾಬಾ ಸಾಹೇಬ್ ಸಂಗೀತ ಸ್ಮತಿ

ಈ ಬಾರಿಯ ಅಂಬೇಡ್ಕರ್ ಆಶಯದಲ್ಲಿ ಬಹುರೂಪಿ ನಡೆಯುತ್ತಿರುವುದರಿಂದ ಅಂಬೇಡ್ಕರ್ ಕುರಿತ ಹಾಡುಗಳನ್ನು ಹಾಡಿರುವ ಗಾಯಕರು ಬಾಬಾ ಸಾಹೇಬ್ ಸಂಗೀತ ಸ್ಮತಿ ಪ್ರಸ್ತುತಪಡಿಸಲಿದ್ದಾರೆ. 12ರಂದು ಸಂಜೆ 6 ಗಂಟೆಗೆ ಎಚ್.ಜನಾರ್ದನ್ (ಜನ್ನಿ), ಗೊಲ್ಲಹಳ್ಳಿ ಶಿವಪ್ರಸಾದ್, ದೇವಾನಂದ ವರ ಪ್ರಸಾದ್ ಮತ್ತು ತಂಡ, 17ರಂದು ಮಹಾರಾಷ್ಟ್ರದ ಅನಿರುದ್ಧ ವಂಕರ್ ಮತ್ತು ತಂಡ, 18ರಂದು ಸಂಜೆ 6 ಗಂಟೆಗೆ ಪಿಚ್ಚಹಳ್ಳಿ ಶ್ರೀನಿವಾಸ್ ಮತ್ತು ಸಂಗಡಿಗರು, ಸಂಜೆ 7 ಗಂಟೆಗೆ ಪಂಜಾಬಿನ ಗಿನ್ನಿ ಮಾಹಿ ಮತ್ತು ತಂಡದವರು ಅಂಬೇಡ್ಕರ್ ಜೀವನಗಾಥೆಯನ್ನು ಹಾಡುಗಳ ಮೂಲಕ ಕಟ್ಟಿಕೊಡಲಿದ್ದಾರೆ.
"

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಂಗಾಯಣ ನವೀಕರಣಕ್ಕೆ 14.5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಹಣ ಬಿಡುಗಡೆಯಾಗಿದೆ. ಬಹುರೂಪಿ ಬಳಿಕ ನವೀಕರಣ ಕಾಮಗಾರಿ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net