ಸ್ವಾವಲಂಬನೆಗೆ ಅಡಿಗಲಿಟ್ಟ ಬಾಬೂಜಿ: ಮಾಜಿ ಸಂಸದ ಪ್ರೊ.ಎಲ್.ಹನುಮಂತಯ್ಯ ಬಣ್ಣನೆ
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಪ್ರೊ.ಎಲ್.ಹನುಮಂತಯ್ಯ, ಡಾ.ಭೀಮಶಂಕರ್, ಡಾ.ಬಿ.ಜೆ.ವಿಜಯಕುಮಾರ್, ಆರ್.ಮೂರ್ತಿ, ಡಾ.ಡಿ.ತಿಮ್ಮಯ್ಯ, ಕೋಟೆ ಶಿವಣ್ಣ, ಚಂದ್ರಮೌಳಿ, ಎಡತಲೆ ಮಂಜುನಾಥ್, ತಲಕಾಡು ಮಂಜುನಾಥ್, ಲಕ್ಷ್ಮಣ್, ಸುಧಾ ಮಹದೇವಯ್ಯ, ಬೈರಾಪುರ ಮರಯ್ಯ ಇತರರಿದ್ದರು.
ಮೈಸೂರು: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರು ದೇಶವನ್ನು ಹಸಿವಿನಿಂದ ಮುಕ್ತಗೊಳಿಸಲು ಹಸಿರು ಕ್ರಾಂತಿಗೆ ಒತ್ತು ನೀಡಿದ್ದರು. ಸ್ವಾಭಿಮಾನದ ಸ್ವಾವಲಂಬನೆ ಅಡಿಗಲಿಟ್ಟ ಅವರ ಸೇವಾ ಗುಣ ಇಂದಿನ ಯುವಕರಿಗೆ ಮಾದರಿ ಎಂದು ಮಾಜಿ ಸಂಸದ ಪ್ರೊ.ಎಲ್.ಹನುಮಂತಯ್ಯ ಹೇಳಿದರು.
ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಹಾಗೂ ಸಾಮಾಜಿಕ ಸಂಘರ್ಷದ ನಡುವೆಯೂ ಬಾಬು ಜಗಜೀವನ ರಾಮ್ ಅವರು ಅಪ್ರತಿಮ ಆಡಳಿತಗಾರರಾಗಿ 30 ವರ್ಷಗಳ ಕಾಲ ಕೇಂದ್ರದಲ್ಲಿ ವಿವಿಧ ಇಲಾಖೆಗಳ ಮಂತ್ರಿಯಾಗಿ ಸ್ವಾಭಿಮಾನದ ಸ್ವಾವಲಂಬನೆಗೆ ಭಾರತಕ್ಕೆ ಅಡಿಗಲ್ಲಿಟ್ಟರು ಎಂದರು.
ಕಾರ್ಮಿಕ ಕಲ್ಯಾಣ ಮಂತ್ರಿಯಾಗಿ ಕಾರ್ಮಿಕ ಪರಿಹಾರ ಕಾಯ್ದೆ, ಭವಿಷ್ಯ ನಿಧಿ ಕಾಯ್ದೆ, ಸಮಾನ ಕೂಲಿಗೆ ಸಮಾನ ವೇತನ, ಮಹಿಳಾ ಕಾರ್ಮಿಕರಿಗೆ ವಿಶೇಷ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಹೀಗೆ ಹಲವಾರು ನೂತನ ಕಾಯ್ದೆಗಳ ಕಾಯಕಲ್ಪಕ್ಕೆ ಅವರು ಕಾರಣರಾಗಿದ್ದಾರೆ. ರೈಲ್ವೆ, ಕೃಷಿ, ದೇಶದ ರಕ್ಷಣೆ, ನೀರಾವರಿ ಇಲಾಖೆ, ಸಂಪರ್ಕ ಇಂತಹ ಮಹತ್ವದ ಇಲಾಖೆಗಳ ಮಂತ್ರಿಯಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದ ಇಲಾಖೆಗಳಿಗೆ ಹೊಸ ಚೇತನ ಮತ್ತು ವೈಜ್ಞಾನಿಕ ದಿಕ್ಸೂಚಿ ಬರೆದರು. ಅದರಲ್ಲಿ ವಿಶೇಷವಾಗಿ ಬಾಂಗ್ಲಾ ವಿಮೋಚನೆಗೆ ಒಬ್ಬ ಸಮರ್ಥ ರಕ್ಷಣಾ ಸಚಿವರಾಗಿ ಅವರು ತೆಗೆದುಕೊಂಡ ಅತ್ಯಂತ ಮಹತ್ವದ ನಿರ್ಧಾರವೂ ಸೇರಿದೆ. ಅದು ಏಷ್ಯಾ ಖಂಡಕ್ಕೆ ರಾಜಕೀಯವಾಗಿ ಹೊಸ ಸಂದೇಶವನ್ನು ರವಾನಿಸಿತ್ತು. ಬಾಬೂಜಿ ಅವರು ವ್ಯಕ್ತಿಗತವಾಗಿ ಸೌಮ್ಯ ಸ್ವಭಾವದವರಾಗಿದ್ದರೂ ಭಾರತದಲ್ಲಿ ಅವರು ಕೆಲವು ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ಕೆಲವು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ ಎಂದರು.
ನಿವೃತ್ತ ಐಆರ್‌ಎಸ್ ಅಧಿಕಾರಿ ಡಾ.ಭೀಮಶಂಕರ್ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ಅವರು 27ನೇ ವಯಸ್ಸಿಗೆ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದರು. ಅವರು ಸಮಾಜದಲ್ಲಿದ್ದ ಜಾತಿ ಮತ್ತು ಧರ್ಮಗಳ ಕಂದಕಗಳ ನಿರ್ಮೂಲನೆಗಾಗಿ ಕೆಲವು ಐತಿಹಾಸಿಕ ಕಾನೂನು ನಿರ್ಣಯಗಳನ್ನು ಜಾರಿಗೆ ತಂದರು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಚಿವ ಕೋಟೆ ಶಿವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಪದಾಧಿಕಾರಿಗಳಾದ ಎಡತಲೆ ಮಂಜುನಾಥ್, ತಲಕಾಡು ಮಂಜುನಾಥ್, ಲಕ್ಷ್ಮಣ್, ಸುಧಾ ಮಹದೇವಯ್ಯ, ಬೈರಾಪುರ ಮರಯ್ಯ ಇತರರಿದ್ದರು.