ಆರೋಗ್ಯ ಜೀವನಕ್ಕೆ ಆಯುರ್ವೇದ ಅವಶ್ಯ

ನಗರದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ  ಆಯೋಜಿಸಿದ್ದ 10ನೇ ಪ್ರಚಾರೋಪನ್ಯಾಸಮಾಲೆ ಕಾರ್ಯಕ್ರಮವನ್ನು ಆಯುರ್ವೇದ ವೈದ್ಯ ಡಾ.ವೆಂಕಟೇಶ್ ಉದ್ಘಾಟಿಸಿದರು. ಪ್ರೊ.ಎಂ.ನಂಜಯ್ಯ ಹೊಂಗನೂರು, ಡಾ.ಶ್ರೀವತ್ಸ, ಎಂ.ಡಿ.ಚನ್ನಬಸಪ್ಪ ಇನ್ನಿತರರಿದ್ದರು.
ನಗರದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 10ನೇ ಪ್ರಚಾರೋಪನ್ಯಾಸಮಾಲೆ ಕಾರ್ಯಕ್ರಮವನ್ನು ಆಯುರ್ವೇದ ವೈದ್ಯ ಡಾ.ವೆಂಕಟೇಶ್ ಉದ್ಘಾಟಿಸಿದರು. ಪ್ರೊ.ಎಂ.ನಂಜಯ್ಯ ಹೊಂಗನೂರು, ಡಾ.ಶ್ರೀವತ್ಸ, ಎಂ.ಡಿ.ಚನ್ನಬಸಪ್ಪ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 10ನೇ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ
  • ರೋಗ ಬಂದ ಮೇಲೆ ಅದರ ಬಗ್ಗೆ ಕಾಳಜಿ ವಹಿಸುವುದರ ಬದಲಾಗಿ ರೋಗ ಬರದಂತೆ ಮುನ್ನೆಚ್ಚ್ಚರಿಕೆ ವಹಿಸುವುದು ಮುಖ್ಯ.
ಮೈಸೂರು: ಪ್ರಕೃತಿದತ್ತವಾದ ಜೀವನಕ್ಕೆ ನಿಸರ್ಗದಿಂದಲೇ ಸಿಗುವ ವೈದ್ಯ ಆಹಾರ, ಔಷಧಗಳನ್ನು ಬಳಸುವುದು ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎಂದು ಆಯುರ್ವೇದ ವೈದ್ಯ ಡಾ.ವೆಂಕಟೇಶ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ನಗರದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 10ನೇ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ‘ದೈನಂದಿನ ಆರೋಗ್ಯ: ಆಯುರ್ವೇದ’ ಕುರಿತು ಮಾತನಾಡಿದರು.
ಆಧುನಿಕ ಜೀವನಶೈಲಿ, ಅನಿಯಮಿತ- ದೋಷಪೂರಿತ ಆಹಾರ ಪದ್ಧತಿಯಿಂದಾಗಿ ಜನಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಇದರಿಂದ ಹೊರಬರಬೇಕೆಂದರೆ ದೈನಂದಿನ ಜೀವನದಲ್ಲಿ ನಮ್ಮ ಪರಂಪರೆಯಿಂದ ಬಂದ ಆಯುರ್ವೇದ ವೈದ್ಯ ಪದ್ಧತಿ ಅಳವಡಿಸಿಕೊಳ್ಳಬೇಕು. ರೋಗ ಬಂದ ಮೇಲೆ ಅದರ ಬಗ್ಗೆ ಕಾಳಜಿ ವಹಿಸುವುದರ ಬದಲಾಗಿ ರೋಗ ಬರದಂತೆ ಮುನ್ನೆಚ್ಚ್ಚರಿಕೆ ವಹಿಸುವುದು ಮುಖ್ಯ. ಆ ಕುರಿತು ನಮಗೆ ಮಾರ್ಗದರ್ಶನ ನೀಡುವುದೆ ಆಯುರ್ವೇದ ವೈದ್ಯ ವಿಜ್ಞಾನ ಎಂದರು.
ಇಂದಿನ ತಲೆಮಾರಿನ ಜನರಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ. ಅದಕ್ಕೆ ಕಾರಣ ಅವರು ಸೇವಿಸುವ ಆಹಾರ, ಒತ್ತಡದ ಜೀವನಶೈಲಿ, ಅನಗತ್ಯ ಹಪಹಪಿಯಿಂದಾಗಿ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದರಿಂದಾಗಿ ನಿತ್ಯವೂ ಸಣ್ಣ ಸಣ್ಣ ರೋಗಕ್ಕೂ ಪರಿತಪಿಸುವಂತಾಗುತ್ತಿದೆ ಎಂದು ಹೇಳಿದರು.
ಇವುಗಳ ಶೀಘ್ರ ನಿವಾರಣೆಗೆ ಆ್ಯಂಟಿಬಯೋಟಿಕ್ ಔಷಧ ಬಳಸುತ್ತಿದ್ದು, ಈ ಔಷಧಗಳು ರೋಗವನ್ನು ತಾತ್ಕಾಲಿಕವಾಗಿ ಉಪಶಮನಗೊಳಿಸುತ್ತವೆ. ಜತೆಗೆ ದೇಹದ ಮೇಲೆ ಕೆಟ್ಟ ಪರಿಣಾಮ ಸಹ ಬೀರುತ್ತವೆ. ಮತ್ತೆ ರೋಗ ಉಲ್ಬಣಗೊಂಡು ಇಡೀ ಜೀವನವೇ ರೋಗಗ್ರಸ್ತವಾಗುತ್ತಿದೆ.
ಈ ಪದ್ಧತಿ ಮನುಕುಲಕ್ಕೆ ಮಾರಕವಾಗುತ್ತಿದ್ದು, ಬಿಪಿ, ಶುಗರ್, ಕ್ಯಾನ್ಸರ್ ಮುಂತಾದ ರೋಗಗಳಿಗೆ ಕಾರಣವಾಗುತ್ತಿದೆ. ಈ ರೋಗಗಳಿಂದ ಹೊರಬರಬೇಕೆಂದರೆ ಆಯುರ್ವೇದ ವೈದ್ಯ ಪದ್ಧತಿಯ ಸರಳ ಸುಲಭ ಮಾರ್ಗ ಅನುಸರಿಸುವುದು ಮುಖ್ಯ ಎಂದು ಹೇಳಿದರು.
ಇತ್ತೀಚೆಗೆ ಇಡೀ ವಿಶ್ವವನ್ನೇ ಕಾಡಿದ ಕರೊನಾ ಲಕ್ಷಾಂತರ ಜನರನ್ನು ಬಲಿ ಪಡೆಯಿತು. ಈ ವೈರಾಣುವಿನ ವಿರುದ್ಧ ಹೋರಾಡಲು ಆಯುರ್ವೇದದಲ್ಲಿ ಹೇಳಿರುವ ಕಷಾಯಗಳು ಪ್ರಮುಖ ಪಾತ್ರ ವಹಿಸಿದವು. ಇಂತಹ ರೋಗಕ್ಕೂ ಔಷಧದ ಉಪಾಯವನ್ನು ಆಯುರ್ವೇದದಿಂದ ತಿಳಿಯಬಹುದು. ಇಲ್ಲಿ ಹೇಳಿರುವ ಜೀವನ ಪದ್ಧತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ದೈನಂದಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಇಂದಿನ ಜೀವನಶೈಲಿಗೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. 
ರೋಗ, ರೋಗದ ಲಕ್ಷಣ, ಅದಕ್ಕಿರುವ ಪರಿಹಾರಗಳನ್ನು ಕಳೆದ 5,000 ವರ್ಷಗಳಿಂದ ಪ್ರಯೋಗಿಸುತ್ತ, ಬಳಸುತ್ತಾ, ಅದರ ಉತ್ತಮ ಅಂಶ ಅಳವಡಿಸಿಕೊಳ್ಳುತ್ತಾ ಇಂದಿಗೂ ಅಗತ್ಯವೆನಿಸುವ ಆಯುರ್ವೇದ ವೈದ್ಯ ಪದ್ಧತಿ ಭಾರತದ ನವಯುಗದ ಅಗತ್ಯ ಎನಿಸಿದೆ ಎಂದರು.
ಮೈವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿ, ‘ದಿ ಮೈಸೂರು ಎಕ್‌ಪರಿಮೆಂಟ್ಸ್’ ಎಂದೇ ಖ್ಯಾತವಾದ ಈ ಪ್ರಚಾರೋಪನ್ಯಾಸಮಾಲೆಗೆ 85 ವರ್ಷ ಸಂದಿದೆ. ಈವರೆಗೂ 800 ಉಪನ್ಯಾಸ ನಡೆದಿದ್ದು, ಅದರಲ್ಲಿ 450 ಪುಸ್ತಕಗಳು ಪ್ರಕಟಗೊಂಡು ಓದುಗರ ಕೈ ಸೇರಿರುವುದು ಹೆಮ್ಮೆಯ ಸಂಗತಿ ಎಂದರು. 
ಪ್ರಾಂಶುಪಾಲ ಡಾ.ಶ್ರೀವತ್ಸ ಮಾತನಾಡಿದರು. ಪ್ರಸಾರಾಂಗದ ಅಧೀಕ್ಷಕ ಎಂ.ಡಿ.ಚನ್ನಬಸಪ್ಪ, ಸಹಾಯಕ ನಿರ್ದೇಶಕ ಡಾ. ಬಿ.ಎಸ್.ಅನಿಲಕುಮಾರ ಬೊಮ್ಮಘಟ್ಟ, ಡಾ.ಶ್ರವಣ್ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net