

ತಂದೆ-ತಾಯಿಯ ಆಶೀರ್ವಾದ ಮತ್ತು ಬೆಂಬಲವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಪ್ರತಿಯೊಬ್ಬರೂ ಪಾಲಕರ ಆಶೀರ್ವಾದ ಪಡೆದು ಮುನ್ನಡೆಯಬೇಕು ಎಂದು ಉದ್ಯಮಿ ಎಚ್.ಆರ್.ನಾಗೇಂದ್ರ ರಾವ್ ಸಲಹೆ ನೀಡಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಸದ್ವಿದ್ಯಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ನಗರ ಮಟ್ಟದ ಅಂತರ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ತ್ಯಾಜ್ಯ ವಸ್ತುಗಳನ್ನೇ ಮರುಬಳಕೆ ಮಾಡಿ ಉಪಯುಕ್ತ ಉತ್ಪನ್ನಗಳನ್ನು ತಯಾರಿಸುವ ಮೂಲಕ ‘ಕಸದಿಂದ ರಸ’ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು. ಸಾಧನೆ ಮಾಡಲು ಇಂಜಿನಿಯರ್ ಅಥವಾ ವೈದ್ಯರಾಗಲೇಬೇಕೆಂದಿಲ್ಲ. ಆಸಕ್ತಿ, ಪರಿಶ್ರಮ ಮತ್ತು ಸೃಜನಶೀಲತೆ ಇದ್ದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ. ಯುವಜನರು ಇಂತಹ ಅವಕಾಶಗಳನ್ನು ಗುರುತಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಪಿಂಚಣಿ ಪಾವತಿ ಮತ್ತು ಬಡವಾಡೆ ಖಜಾನೆಯ ಸಹಾಯಕ ನಿರ್ದೇಶಕಿ ಜೆ.ಪಿ.ಸುಷ್ಮಾ ಮಾತನಾಡಿ, ಯುವಜನರು ಅದರಲ್ಲೂ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಸೇವೆ (ಸಿವಿಲ್ ಸರ್ವಿಸಸ್) ಸೇರಿದಂತೆ ಸರ್ಕಾರಿ ಸೇವೆಗಳಿಗೆ ಸೇರ್ಪಡೆಯಾಗಬೇಕು ಎಂದು ಕರೆ ನೀಡಿದರು.
ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಸಮಯವನ್ನು ಪುಸ್ತಕ ಓದು ಮತ್ತು ಜ್ಞಾನ ಸಂಪಾದನೆಗೆ ವಿನಿಯೋಗಿಸಬೇಕು. ಪುಸ್ತಕಗಳಿಂದ ಉತ್ತಮ ಮಾಹಿತಿ ದೊರೆಯುತ್ತದೆ. ಸರ್ಕಾರಿ ಸೇವೆಗಳಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳಿದ್ದು, ಹಿಂದಿನ ಕಾಲದಲ್ಲಿದ್ದ ಕಿರುಕುಳದ ವಾತಾವರಣ ಈಗ ಸಾಕಷ್ಟು ಬದಲಾಗಿದೆ. ಮಹಿಳೆಯರು ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಬಲ್ಲರಾದರೆ, ದೇಶದ ಆಡಳಿತವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲರು. ಹೀಗಾಗಿ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ನಾಗರಿಕ ಸೇವೆಗಳಿಗೆ ಬಂದು ದೇಶದ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರೇರೇಪಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್, ಉಪಾಧ್ಯಕ್ಷ ಎಸ್.ಬಾಲಾಜು, ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಇತರರಿದ್ದರು.