ತಂಡೋಪತಂಡವಾಗಿ ಹೆಚ್ಚು ಜನರು ಭಾಗಿಯಾದ ಕಾರಣ ನಾಟಕ, ಜನಪದ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹುರೂಪಿ ನಾಟಕೋತ್ಸವಕ್ಕೆ ಬುಧವಾರ ಜನಪದ ಉತ್ಸವ ಹೊಸ ರಂಗು ತಂದಿತು. ಕಿಂದರಿಜೋಗಿ ಆವರಣದಲ್ಲಿ ಪ್ರದರ್ಶನಗೊಂಡ ‘ಕಳರಿಪಯಟ್ಟು’ ಮೋಡಿ ಮಾಡಿತು. ಕತ್ತಿ ಹಿಡಿದು ಎದುರಾಳಿಯನ್ನು ಮಣಿಸುವ, ಚೂಪಾದ ಭರ್ಜಿ ಹಾಗೂ ಕತ್ತಿ ಹಿಡಿದು ವಿವಿಧ ಭಂಗಿ ಪ್ರದರ್ಶಿಸುವ, ಬೆಂಕಿಯಲ್ಲಿ ಹಾರುವ ಹಾಗೂ ಬೆಂಕಿ ಹಿಡಿದು ಸಾಹಸ ಪ್ರದರ್ಶನ, ಏಳು ಜನರ ಮೇಲೆ ಒಮ್ಮೆಲೆ ನೆಗೆಯುವ ಮೂಲಕ ‘ಕಳರಿಪಯಟ್ಟು’ ಸಮರ ಕಲೆಯನ್ನು ಡಾ.ವೇಣುಗೋಪಾಲ್ ಮಾರ್ಗದರ್ಶನದಲ್ಲಿ ಅನಾವರಣಗೊಳಿಸಿದ ಕೇರಳದ ಕಲಾವಿದರು ನೋಡುಗರನ್ನು ಅರೆಕ್ಷಣ ದಂಗುಬಡಿಸಿದರು. ಇದಕ್ಕೂ ಮುನ್ನ ನಡೆದ ಚಾಮರಾಜನಗರದ ಬಸವರಾಜು ಮತ್ತು ತಂಡದ ‘ಗೋರುಕನ ನೃತ್ಯ’ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.