ಪ್ರೊ.ಶರಣಪ್ಪ ವಿ.ಹಲಸೆ ಅವರ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬಾಕಿ
ಮೇ 10ರೊಳಗೆ ಬೆಂಗಳೂರಿನಲ್ಲಿ ರಾಜ್ಯಪಾಲರ ಕಚೇರಿ ಲೋಕಭವನಕ್ಕೆ ಅರ್ಜಿ ಸಲ್ಲಿಸಲು ಕೋರಿಕೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಇರುವಾಗಲೇ ಹೊಸ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹಲಸೆ ಅವರ ಮೂರು ವರ್ಷದ ಅಧಿಕಾರಾವಧಿ ಮುಂದಿನ ನವೆಂಬರ್ 11ಕ್ಕೆ ಪೂರ್ಣಗೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಾವಧಿ ವಿಸ್ತರಣೆಗೆ ಕರಾಮುವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಪತ್ರ ಬರೆದು ಕೋರಿಕೊಂಡಿದ್ದರು.
ಇದಕ್ಕೆ ಸಮ್ಮತಿಸಿರುವ ಅವರು, ಪ್ರೊ.ಶರಣಪ್ಪ ಅವರ ಅಧಿಕಾರಾವಧಿಯನ್ನು 2026ರ ಜೂನ್ 30ರವರೆಗೆ ಅಥವಾ ಮುಂದಿನ ಆದೇಶದ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೀಗ ಏ.2ರಂದು ಕರಾಮುವಿ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನದ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪ್ರಕಟಣೆ ಹೊರಡಿಸಿದ್ದಾರೆ.
ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(ಯುಜಿಸಿ) ಮಾರ್ಗಸೂಚಿ, ಕರಾಮುವಿ ಅಧಿನಿಯಮ 1992ರ ಅನ್ವಯ ಕನಿಷ್ಠ 10 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಅನುಭವ ಹೊಂದಿರಬೇಕು. ತತ್ಸಮಾನ ಹುದ್ದೆಯ ಕಾರ್ಯಾನುಭವ ಪಡೆದುಕೊಂಡಿರಬೇಕು.
ಈ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವ ಇತ್ಯಾದಿ ವಿವರಗಳೊಂದಿಗೆ ಮೇ 10ರೊಳಗೆ ಬೆಂಗಳೂರಿನಲ್ಲಿರುವ ರಾಜ್ಯಪಾಲರ ಕಚೇರಿ ಲೋಕಭವನಕ್ಕೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.