ಎಸ್‌ಐಆರ್ ನೆಪದಲ್ಲಿ ಹೆಸರು ಡಿಲೀಟ್ ಮಾಡದಂತೆ ಚುನಾವಣಾ ಆಯೋಗಕ್ಕೆ ಮನವಿ
ಎಸ್‌ಐಆರ್ ಅಡಿ ಪರಿಷ್ಕರಣೆ ಮಾಡುವಾಗ ಅರ್ಹ ಮತದಾರರನ್ನು ಕೈ ಬಿಡಬಾರದು ಎಂದು ಒತ್ತಾಯಿಸಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ಕಡಕೋಳ ಜಗದೀಶ್, ವಿಕ್ರಂ ಅಯ್ಯಂಗಾರ್, ಜಗದೀಶ್, ಎಸ್.ಎನ್.ರಾಜೇಶ್, ರಾಕೇಶ್, ಹರೀಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮ ಸರಳಗೊಳಿಸಬೇಕು
ಎಸ್‌ಐಆರ್ ಮೂಲಕ ಪ್ರತಿಯೊಬ್ಬರನ್ನು ಕಟಕಟೆಗೆ ನಿಲ್ಲಿಸುವ ಪ್ರಕ್ರಿಯೆ ಸರಿಯಾದುದ್ದಲ್ಲ
ಮೈಸೂರು:ಪ್ರತಿಯೊಬ್ಬರ ಮತದಾನದ ಹಕ್ಕು ರಕ್ಷಿಸಬೇಕು. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದು ಹಾಕಬಾರದು ಎಂದು ಒತ್ತಾಯಿಸಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ನೂತನ ಕಚೇರಿಯಲ್ಲಿ ತಹಸೀಲ್ದಾರ್ ಎಸ್.ಶಿವಪ್ರಸಾದ್ ಮೂಲಕ ಮನವಿ ಸಲ್ಲಿಸಿ, ಅರ್ಹರು ಮತದಾನ ಹಕ್ಕಿನಿಂದ ವಂಚಿತರಾಗವಂತೆ ನೋಡಿಕೊಳ್ಳಬೇಕು ಎಂದು ಆಯೋಗವನ್ನು ಒತ್ತಾಯಿಸಿದರು.
ಯಾರಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನೂ ಒದಗಿಸಲು ಸಾಧ್ಯವಿಲ್ಲವೋ ಅಂತಹವರಿಗೆ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಕಾಯಂ ವಾಸ ದೃಢೀಕರಣ ಪತ್ರ, ಇತ್ಯಾದಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮ ಸರಳಗೊಳಿಸಬೇಕು ಎಂದು ಕೋರಿದರು.
ಇದಕ್ಕೆ ಪೂರಕವಾಗಿ ಸುಲಭವಾಗಿ ಮತ್ತು ಶೀಘ್ರವಾಗಿ ದಾಖಲೆಗಳನ್ನು ರಾಜ್ಯ ಸರ್ಕಾರವೇ ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ದಾಖಲೆಯಿಲ್ಲ ಎಂಬ ಕಾರಣದಿಂದ ಆತಂಕಕ್ಕೆ ಒಳಗಾಗುವ ಜನರಲ್ಲಿ ವಿಶ್ವಾಸ ತುಂಬುವದೃಷ್ಟಿಯಿಂದ, ಮತದಾರರಿಗೆ ಆಗುವ ಅನಗತ್ಯ ವೆಚ್ಚ, ಸಮಯ, ತಾಪತ್ರಯ ತಪ್ಪಿಸಬೇಕು ಎಂದು ಆಗ್ರಹಿಸಿದರು.
‘ತಾರ್ಕಿಕ ವ್ಯತ್ಯಾಸ’ (ಎಸ್‌ಐಆರ್) ಹೆಸರಿನಲ್ಲಿ ಪರಿಷ್ಕರಣೆಯನ್ನು ಕರ್ನಾಟಕದಲ್ಲಿ ಅಳವಡಿಸದಂತೆ ಚುನಾವಣಾ ಆಯುಕ್ತರಿಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕು. ಹೆಸರುಗಳ ಉಪನಾಮ, ಇನಿಷಿಯಲ್ ವ್ಯತ್ಯಾಸ, ವಯಸ್ಸಿನ ಅಂತರ ಕಡಿಮೆ ಅಥವಾ ಹೆಚ್ಚಿದೆ ಎಂದು, ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು, ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಚುನಾವಣಾ ಆಯೋಗವನ್ನು ಮನವಿ ಮಾಡಿದರು.
ಯಾವುದೇ ಒಬ್ಬ ಭಾರತೀಯರಲ್ಲದವರನ್ನು ಗುರುತು ಹಚ್ಚುವ ಕೆಲಸ ಸರ್ಕಾರದ ಗೃಹ ಇಲಾಖೆಗೆ ಸಂಬಂಧಿಸಿದ್ದೇ ಹೊರತು, ಅದು ಚುನಾವಣಾ ಆಯೋಗದ್ದಲ್ಲ. ಆದರೆ ಎಸ್‌ಐಆರ್ ಮೂಲಕ ಪ್ರತಿಯೊಬ್ಬರನ್ನು ಕಟಕಟೆಗೆ ನಿಲ್ಲಿಸುವ ಪ್ರಕ್ರಿಯೆ ಸರಿಯಾದುದ್ದಲ್ಲ ಎಂದು ಹೇಳಿದರು.
ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ನಗರಪಾಲಿಕೆ ನಾಮ ನಿರ್ದೇಶಿತ ಮಾಜಿ ಸದಸ್ಯ ಜಗದೀಶ್, ವೇದಿಕೆಯ ಎಸ್.ಎನ್.ರಾಜೇಶ್, ರಾಕೇಶ್, ಹರೀಶ್ ಇದ್ದರು.