ಮೈಸೂರು ನಗರದಲ್ಲಿ ಮತ್ತೊಂದು ಡ್ರಗ್ಸ್ ಘಟಕ ಪತ್ತೆ!

ಕೆಮಿಕಲ್ ಘಟಕವನ್ನು ಪರಿಶೀಲನೆ ನಡೆಸಿದ ಅಬಕಾರಿ ಅಧಿಕಾರಿಗಳು.
ಕೆಮಿಕಲ್ ಘಟಕವನ್ನು ಪರಿಶೀಲನೆ ನಡೆಸಿದ ಅಬಕಾರಿ ಅಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಯಾಂದಳ್ಳಿ ಗ್ರಾಮದ ಸಪ್ತಮಾತೃಕೆ ಲೇಔಟ್‌ನಲ್ಲಿ ರಾಸಾಯನಿಕ ವಸ್ತು ಜಪ್ತಿ
  • ಅಂತಾರಾಜ್ಯಗಳ ನಡುವಿನ ಡ್ರಗ್ಸ್ ಪ್ರಕರಣ ನಗರದಲ್ಲಿ ಮತ್ತಷ್ಟು ವಿಸ್ತಾರ
  • ಮಾದಕವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ದಾಳಿ ನಡೆಸಿದಾಗ ಘಟಕ ಪತ್ತೆ
ಮೈಸೂರು: ಅಂತಾರಾಜ್ಯಗಳ ನಡುವಿನ ಡ್ರಗ್ಸ್ ಪ್ರಕರಣ ನಗರದಲ್ಲಿ ಮತ್ತಷ್ಟು ವಿಸ್ತಾರವಾಗಿದ್ದು, ಮೈಸೂರು ತಾಲೂಕಿನ ಯಾಂದಳ್ಳಿ ಗ್ರಾಮದ ಸಪ್ತಮಾತೃಕೆ ಲೇಔಟ್‌ನಲ್ಲಿ ಮಾದಕವಸ್ತುಗಳಿಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿವೆ. 
ಮಾದಕವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ದಾಳಿ ನಡೆಸಿದಾಗ ಘಟಕ ಕಂಡುಬಂದಿದೆ. 
ದೆಹಲಿಯ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಪೊಲೀಸರು, ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನುಫ್ಯಾಕ್ಚರಿಂಗ್ ಘಟಕದ ಮೇಲೆ ಇತ್ತೀಚೆಗೆ ದಾಳಿ ಮಾಡಿ ಮಾದಕವಸ್ತು ತಯಾರಿಕಾ ಘಟಕವನ್ನು ಪತ್ತೆ ಮಾಡಿದ್ದರು. ಈ ಘಟಕವನ್ನು ನಡೆಸುತ್ತಿದ್ದ ಆಲನಹಳ್ಳಿಯ ನಿವಾಸಿ ಗಣಪತ್ ಲಾಲ್‌ನನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ. ಇದೀಗ ಮತ್ತೊಂದು ಘಟಕ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಗಿರೀಶ್‌ಬಾಬು ಅವರ ಕಟ್ಟಡವನ್ನು ಗಣಪತ್ ಬಾಡಿಗೆಗೆ ಪಡೆದಿದ್ದರು. ಆ ಕಟ್ಟಡದಲ್ಲಿ ಮಾದಕ ವಸ್ತು ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಜಿಲ್ಲಾ ಪೊಲೀಸರ ತಂಡವು ದಾಳಿ ನಡೆಸಿದೆ. ಕಟ್ಟಡದ 1ನೇ ಅಂತಸ್ತಿನ ಕೊಠಡಿಯ ವಾಡ್ರೂಬ್‌ನ ಸೆಲ್ಫ್‌ಗಳಲ್ಲಿ ವಿವಿಧ ಕಂಪನಿಯ 11 ಸ್ಮಾರ್ಟ್‌ಫೋನ್‌ಗಳು ಸಿಕ್ಕಿವೆ.
ಕೆಳಭಾಗದಲ್ಲಿ ಕಪ್ಪು ಬಣ್ಣದ 360 ಗ್ರಾಂ ತೂಕದ ಪುಡಿ, 54 ಗ್ರಾಂ ತೂಕದ ಬಿಳಿ ಬಣ್ಣದ ಪುಡಿ, 957 ಗ್ರಾಂ ತೂಕದ ಬಿಳಿ ಬಣ್ಣದ ಪುಡಿ, 2933 ಗ್ರಾಂ ತೂಕದ ಗಸೆಗಸೆ ಮಾದರಿಯ ವಸ್ತು, ಕಪ್ಪು ಬಣ್ಣದ ಪೇಸ್ಟ್ ಮಾದರಿಯ ವಸ್ತು, ಬೋರಿಕ್ ಆ್ಯಸಿಡ್ ಪತ್ತೆಯಾಗಿದೆ. 
ಇದರೊಂದಿಗೆ 13 ನೀಲಿ ಬಣ್ಣದ ಕ್ಯಾನ್‌ಗಳಲ್ಲಿ ಬಿಳಿ ಬಣ್ಣದ ಪೌಡರ್ ದೊರೆತಿದೆ. ಅವುಗಳನ್ನು ಜಪ್ತಿ ಮಾಡಿ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. 
ಮನೆ ಬಾಡಿಗೆ ಪಡೆದಿದ್ದ ಗಣಪತ್ ಲಾಲ್, ಅಲ್ಲಿ ವಾಸವಿದ್ದ ಭಜನ್ ಲಾಲ್ ಮತ್ತು ಆತನ ಪತ್ನಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಬಕಾರಿ ಅಧಿಕಾರಿಗಳಿಂದಲೂ ಪರಿಶೀಲನೆ

ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದ ಮೇಲೆ ಎನ್‌ಸಿಬಿ ಪೊಲೀಸರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಶನಿವಾರ ನಗರದ ವಿವಿಧ ಕೆಮಿಕಲ್ಸ್ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಾದಕ ವಸ್ತು ಪತ್ತೆಯಾಗಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ತಯಾರಿಕಾ ಘಟಕದೊಂದಿಗೆ ಲಕ್ಷ್ಮೀ ಕೆಮಿಕಲ್ಸ್, ರಿಯಲನ್ಸ್ ಡೈ ಕೆಮ್ ಗೋದಾಮ್, ಮೇಟಗಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಸುಪ್ರೀಮ್ ಪ್ಲಾಸ್ಟಿಸೈಜರ್, ಇತರ ಕೆಮಿಕಲ್ ಘಟಕಗಳಿಗೆ ತೆರಳಿ ಪರಿಶೀಲನೆ ಮಾಡಲಾಯಿತು. ಈ ಘಟಕಗಳಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಿಲ್ಲ ಎಂದು ಅಬಕಾರಿ ಉಪ ಅಧೀಕ್ಷಕ ಎಚ್.ಕೆ.ರಮೇಶ್ ತಿಳಿಸಿದ್ದಾರೆ.
ಅಬಕಾರಿ ಉಪ ಆಯುಕ್ತ ನಾಗರಾಜಪ್ಪ, ಅಬಕಾರಿ ನಿರೀಕ್ಷಕರು, ಗೃಹರಕ್ಷಕ ಸಿಬ್ಬಂದಿಯೊಂದಿಗೆ ಪರಿಶೀಲನಾ ಕಾರ್ಯ ನಡೆಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net