

2022ರಲ್ಲಿ ಭಾರತ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅನೀಶ್ವರ್, ಅದೇ ವರ್ಷ ಕರ್ನಾಟಕದ ರಣಜಿ ತಂಡಕ್ಕೂ ಆಯ್ಕೆಯಾಗಿದ್ದರು. ಕಿರಿಯರ ವಿಶ್ವಕಪ್ನ ಅನುಭವದೊಂದಿಗೆ ಹಿರಿಯರ ಕ್ರಿಕೆಟ್ಗೆ ಕಾಲಿಡುವ ನಿರೀಕ್ಷೆಯಲ್ಲಿದ್ದ ಅವರಿಗೆ, ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಮಾತ್ರ ಸುದೀರ್ಘ ಕಾಯುವಿಕೆ ಅನಿವಾರ್ಯವಾಯಿತು. ಈ ಅವಧಿಯಲ್ಲಿ ಅಂಡರ್-23 ಕ್ರಿಕೆಟ್ನಲ್ಲಿ ಆಟವನ್ನು ಪಕ್ವಗೊಳಿಸಿಕೊಂಡ ಅವರು, ಎರಡು ವರ್ಷ ತಂಡದ ನಾಯಕತ್ವವನ್ನೂ ವಹಿಸಿದ್ದರು. ಹಿರಿಯರ ತಂಡದಲ್ಲಿ ಆಡುವ ಕನಸನ್ನು ಜೀವಂತವಾಗಿಟ್ಟುಕೊಂಡು ಸತತ ಪರಿಶ್ರಮ ಮುಂದುವರಿಸಿದರು.
ಈ ಕ್ಷಣಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಈಗ ನನ್ನ ಪರಿಶ್ರಮಕ್ಕೆ ಅವಕಾಶದ ರೂಪದಲ್ಲಿ ಫಲ ಸಿಕ್ಕಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಅನೀಶ್ವರ್ ‘ವಿಜಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.
ರಣಜಿ ತಂಡಕ್ಕೆ ಮರಳುವುದೇ ನಾಲ್ಕು ವರ್ಷಗಳಿಂದ ನನ್ನ ಗುರಿಯಾಗಿತ್ತು ಎನ್ನುವ ಅನೀಶ್ವರ್, ಅಂಡರ್-23 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಪ್ರಯತ್ನಿಸಿದರು. ವೈಯಕ್ತಿಕವಾಗಿ ರನ್ ಗಳಿಸಿ ಆಯ್ಕೆದಾರರ ಗಮನ ಸೆಳೆಯಬೇಕು, ಹಿರಿಯರ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆಯಬೇಕು ಎಂಬ ಹಂಬಲದೊಂದಿಗೆ ಅಭ್ಯಾಸ ಮುಂದುವರಿಸಿದರು.
ಕೆಲವು ಋತುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ಸಾಧ್ಯವಾಗದಿದ್ದಾಗಲೂ ಅವರು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ರನ್ ಗಳಿಕೆಯಲ್ಲಿ ಹಿನ್ನಡೆಯಾದ ಮಾತ್ರಕ್ಕೆ ಆಯ್ಕೆಯ ಅವಕಾಶಗಳು ಮುಗಿದಿವೆ ಎಂದರ್ಥವಲ್ಲ. ಮತ್ತೆ ತಂಡಕ್ಕೆ ಮರಳಲು ಇನ್ನಷ್ಟು ಕಠಿಣ ಪರಿಶ್ರಮ ಹಾಕಬೇಕು ಎಂದುಕೊಂಡೆ. ಮತ್ತೆ ರನ್ ಗಳಿಸಲು ಆರಂಭಿಸಿದಾಗ ಆತ್ಮವಿಶ್ವಾಸವೂ ಹೆಚ್ಚಾಯಿತು ಎಂದು ಅನೀಶ್ವರ್ ಅನುಭವ ಹಂಚಿಕೊಂಡರು.
ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾಗ ಗಾಯಗೊಂಡಿದ್ದರಿಂದ ಅನೀಶ್ವರ್ ಸುಮಾರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು. ಚೇತರಿಸಿಕೊಂಡ ಬಳಿಕ ರಣಜಿ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲು ಒಂದು ಅಥವಾ ಎರಡು ವಾರಗಳಷ್ಟೇ ಕಾಲಾವಕಾಶ ಲಭಿಸಿತ್ತು. ಈ ಅಲ್ಪಾವಧಿಯಲ್ಲಿ ದೈಹಿಕವಾಗಿ ಚೇತರಿಸಿಕೊಳ್ಳುವ ಜತೆಗೆ ಕೆಂಪು ಚೆಂಡಿನ ಕ್ರಿಕೆಟ್ನ ಸವಾಲುಗಳಿಗೆ ಹೊಂದಿಕೊಳ್ಳುವುದು ಧ್ಯೇಯವಾಗಿತ್ತು. ಮಹಾರಾಜ ಟ್ರೋಫಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ, ಟೂರ್ನಿಯ ಕೊನೆಯ ಹಂತದಲ್ಲಿ ಗಳಿಸಿದ ಸುಮಾರು 80 ರನ್ಗಳು ಆತ್ಮವಿಶ್ವಾಸ ವೃದ್ಧಿಸಲು ನೆರವಾದವು. ಬಳಿಕ ರಣಜಿ ಕ್ರಿಕೆಟ್ಗೆ ಅಗತ್ಯವಾದ ಸಿದ್ಧತೆಯತ್ತ ಗಮನಹರಿಸಿದ್ದನ್ನು ಅವರು ನೆನಪು ಮಾಡಿಕೊಂಡರು.
ಮಹಾರಾಜ ಟ್ರೋಫಿಯಲ್ಲಿ ಪಂದ್ಯದ ಪರಿಸ್ಥಿತಿಯನ್ನು ಅರಿತು ಬ್ಯಾಟಿಂಗ್ ಮಾಡುವುದು ನನ್ನ ಆದ್ಯತೆಯಾಗಿತ್ತು ಎಂದು ಅನೀಶ್ವರ್ ಮೆಲುಕು ಹಾಕಿದರು. ಪಿಚ್ನಲ್ಲಿ ಚೆಂಡು ತಗ್ಗಿ ಬರುತ್ತಿದ್ದುದರಿಂದ ಬೌಂಡರಿ ಗಳಿಸುವ ಅವಕಾಶಗಳು ಕಡಿಮೆಯಾಗಿದ್ದವು. ಎದುರಾಳಿ ತಂಡವೂ ರಕ್ಷಣಾತ್ಮಕ ಫೀಲ್ಡಿಂಗ್ ವ್ಯವಸ್ಥೆ ಮಾಡಿಕೊಂಡಿತ್ತು. ಇಂಥ ಸಂದರ್ಭದಲ್ಲಿ ಅನಗತ್ಯ ಅಪಾಯಕ್ಕೆ ಒಡ್ಡಿಕೊಳ್ಳದೆ ಸಿಂಗಲ್ಸ್, ಡಬಲ್ಸ್ ಗಳಿಸುವುದು, ಅವಕಾಶ ಸಿಕ್ಕಾಗ ಹೆಚ್ಚುವರಿ ರನ್ಗಳನ್ನು ಬಾರಿಸಿ ಕ್ರೀಸ್ನಲ್ಲಿ ತಾಳ್ಮೆಯಿಂದ ನಿಲ್ಲುವುದು ನನಗೆ ಮುಖ್ಯವಾಗಿತ್ತು ಎಂದರು.
ಹಿಂದಿನ ದಿನದ ಅಂತ್ಯಕ್ಕೆ ನಾವು ಏಳು ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿದ್ದೆವು. ಬೋನಸ್ ಪಾಯಿಂಟ್ ಪಡೆಯಲು ದೊಡ್ಡ ಮೊತ್ತ ಗಳಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಅಗತ್ಯವಿತ್ತು. ಹೀಗಾಗಿ ಎಚ್ಚರಿಕೆಯಿಂದ ಆಡುವುದರ ಜತೆಗೆ ಸ್ಕೋರ್ ಹೆಚ್ಚಿಸುವತ್ತ ಗಮನಹರಿಸಿದೆವು ಎಂದು ಹೇಳಿದರು.
ಅಂಡರ್-23 ಕ್ರಿಕೆಟ್ನಲ್ಲೂ ಸಹ ಆಟಗಾರರೊಂದಿಗೆ ಹಲವು ವರ್ಷ ಆಡಿರುವುದು ಕೂಡ ಬ್ಯಾಟಿಂಗ್ ಸಾಮರ್ಥ್ಯ ವೃದ್ಧಿಗೆ ನೆರವಾಯಿತು. ಅವರ ಆಟದ ಶೈಲಿ, ಬೌಂಡರಿ ಗಳಿಸುವ ಸಾಮರ್ಥ್ಯ ಹಾಗೂ ಸ್ಟ್ರೈಕ್ ಬದಲಾಯಿಸುವ ವಿಧಾನಗಳ ಪರಿಚಯವಿದ್ದುದರಿಂದ ಕ್ರೀಸ್ನಲ್ಲಿ ಉತ್ತಮ ಸಂವಹನ ಸಾಧ್ಯವಾಯಿತು. ಈ ಹೊಂದಾಣಿಕೆ ಆತ್ಮವಿಶ್ವಾಸದಿಂದ ಆಡಲು ಸಹಕಾರಿಯಾಯಿತು ಎನ್ನುತ್ತಾರೆ ಅನೀಶ್ವರ್.
ನಾಲ್ಕು ವರ್ಷಗಳ ಬಳಿಕ ಹಿರಿಯರ ತಂಡದಲ್ಲಿ ಅವಕಾಶ ಸಿಕ್ಕಾಗ ಆರಂಭದಲ್ಲಿ ಸ್ವಲ್ಪ ಆತಂಕ ಸಹಜವಾಗಿಯೇ ಇತ್ತು ಎಂದು ಅನೀಶ್ವರ್ ಹೇಳಿದರು. ನಿರೀಕ್ಷಿತ ರೀತಿಯಲ್ಲಿ ರನ್ ಗಳಿಸಲು ಸಾಧ್ಯವಾಗದಿದ್ದಾಗ ಈ ಮಟ್ಟದ ಕ್ರಿಕೆಟ್ಗೆ ತಾನು ಸಿದ್ಧನಿದ್ದೇನೆಯೇ ಎಂಬ ಅನುಮಾನ ಮೂಡುತ್ತಿತ್ತು. ಆದರೆ ಮೊದಲ 15ರಿಂದ 20 ರನ್ ಗಳಿಸಿ ಕ್ರೀಸ್ನಲ್ಲಿ ನೆಲೆ ಕಂಡುಕೊಳ್ಳುವುದು ಮುಖ್ಯ ಎಂಬ ಅರಿವು ಮೂಡಿತು ಎನ್ನುತ್ತಾರೆ ಅವರು. ಒಮ್ಮೆ ಕ್ರೀಸ್ನಲ್ಲಿ ನೆಲೆ ಕಂಡುಕೊಂಡರೆ ದೊಡ್ಡ ಮೊತ್ತ ಗಳಿಸಬಲ್ಲೆ ಎಂಬ ವಿಶ್ವಾಸ ಮೂಡುತ್ತದೆ. ಕರ್ನಾಟಕ- ತ್ರಿಪುರಾ ನಡುವಿನ ಈ ಪಂದ್ಯದಲ್ಲಿ ಅದನ್ನು ಸಾಧಿಸಲು ಸಾಧ್ಯವಾಗಿರುವುದು ಸಂತೋಷ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದರು.