ಮಾದರಿಯಾಗಲಿವೆ ಜಿಲ್ಲೆಯ ಅಂಗನವಾಡಿಗಳು

ಮಾದರಿ ಅಂಗನವಾಡಿ ಕೇಂದ್ರ
ಮಾದರಿ ಅಂಗನವಾಡಿ ಕೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • 108 ಕೇಂದ್ರಗಳನ್ನು ಮಾದರಿ ಕೇಂದ್ರಗಳು ಎಂದು ಘೋಷಣೆ
  • ವರ್ಷಾಂತ್ಯಕ್ಕೆ 2,935 ಅಂಗನವಾಡಿ ಕೇಂದ್ರ ಮಾದರಿ
ವಿಜಯವಾಣಿ ವಿಶೇಷ ಮೈಸೂರು
ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು ವರ್ಷಾಂತ್ಯದ ವೇಳೆಗೆ ಇಂಗ್ಲಿಷ್ ಕಾನ್ವೆಂಟ್‌ಗಳಂತೆ ‘ಮಾದರಿ ಕೇಂದ್ರ’ಗಳಾಗಿ ರೂಪುಗೊಳ್ಳಲಿವೆ.
ಈ ಮೂಲಕ ಶಾಲಾ ಪೂರ್ವದಲ್ಲಿಯೇ ಮಕ್ಕಳಿಗೆ ಶಿಕ್ಷಣದ ಕುರಿತು ಆಸಕ್ತಿ ಮೂಡಿಸುವುದ ಜತೆಗೆ ಪಾಲಕರಿಗೆ ಸರ್ಕಾರಿ ಶಾಲೆ, ಅಂಗನವಾಡಿಗಳ ಕುರಿತು ವಿಶ್ವಾಸ ಮೂಡಿಸುವ ಪ್ರಯತ್ನ ಇದಾಗಿದೆ.
ಪ್ರಥಮ ಹಂತದಲ್ಲಿ ಈಗಾಗಲೇ 108 ಕೇಂದ್ರಗಳನ್ನು ಮಾದರಿ ಕೇಂದ್ರಗಳು ಎಂದು ಘೋಷಣೆ ಮಾಡಲಾಗಿದ್ದು, ಉಳಿದ ಕೇಂದ್ರಗಳನ್ನು ಮಾದರಿಯನ್ನಾಗಿಸುವತ್ತ ಯೋಜನೆ ಹಮ್ಮಿಕೊಳ್ಳಲಾಗಿದೆ.
ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳ ಸಹಭಾಗಿತ್ವದ ಮೂಲಕ ಮೈಸೂರು ಜಿಲ್ಲೆಯಲ್ಲಿರುವ 2,935 ಅಂಗನವಾಡಿ ಕೇಂದ್ರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಭಿವೃದ್ಧಿಪಡಿಸಿ ಕಾನ್ವೆಂಟ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ.
ಮಾದರಿಯಾಗಿ 108 ಕೇಂದ್ರಗಳನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಅದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ವರ್ಷಾಂತ್ಯದೊಳಗೆ ಮಾದರಿ ಕೇಂದ್ರಗಳನ್ನಾಗಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಧಿಕಾರಿಗಳು ಕಾರ್ಯೋನ್ಮುಖವಾಗಿದ್ದಾರೆ.
ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿ ರೂಪಿಸುವ ಪ್ರಯತ್ನ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆ ಪ್ರಥಮವಾಗಿದ್ದು, ಇದು ಇತರ ಜಿಲ್ಲೆಗಳಿಗೆ ಮಾದರಿಯನ್ನಾಗಿ ಮಾಡುವ ಕಾರ್ಯ ನಡೆದಿದೆ. ಇದು ಇತರೇ ಜಿಲ್ಲೆ ಅಂಗನವಾಡಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲೆಯನ್ನು ಪ್ರೇರಣೆ ಮಾಡುವ ಉದ್ದೇಶ ಹೊಂದಲಾಗಿದೆ.
ಕಾನ್ವೆಂಟ್ ಮಾದರಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೈಟೆಕ್ ಸ್ಪರ್ಶ ನೀಡಲು ಸಮುದಾಯದೊಂದಿಗೆ ಖಾಸಗಿ ಸಂಘ-ಸಂಸ್ಥೆಗಳ ನೆರವು ಪಡೆಯುತ್ತಿರುವ ಇಲಾಖೆಯ ಅಧಿಕಾರಿಗಳು, ಸ್ಥಳೀಯವಾಗಿ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಲು ಕ್ರಮ ವಹಿಸಿದ್ದಾರೆ.
ಕುಡಿಯುವ ನೀರಿನ ಘಟಕ, ಕೇಂದ್ರಕ್ಕೆ ಸುಣ್ಣ-ಬಣ್ಣ, ಮಕ್ಕಳ ಆಟಿಕೆ, ಪಠ್ಯ ಪುಸ್ತಕಗಳು, ಕೇಂದ್ರದ ಆವರಣದಲ್ಲಿ ಕೈ ತೋಟ ಕೂಡ ನಿರ್ಮಿಸುವುದು ಸೇರಿದಂತೆ ವಿವಿಧ ಸೌಲಭ್ಯವನ್ನು ಪಡೆಯುವುದರೊಂದಿಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಖಾಸಗಿ ಶಿಕ್ಷಣ ಸಂಸ್ಥ್ಥೆಗಳ ಮಾದರಿಯಲ್ಲಿ ಕೆಲ ಕೇಂದ್ರಗಳಲ್ಲಿ ಡ್ರೆಸ್‌ಕೋಡ್ ಅನ್ನು ಸಹ ತರಲಾಗಿದೆ.
ಪಾಲಕರ ನೆರವಿನೊಂದಿಗೆ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಮವಸ್ತ್ರದೊಂದಿಗೆ ಕೇಂದ್ರದ ಶಿಕ್ಷಕಿಯರು ಮತ್ತು ಸಹಾಯಕಿಯರಿಗೂ ಡ್ರೆಸ್‌ಕೋಡ್ ಕೂಡ್ ಮಾಡಲಾಗಿದೆ.
ಮೂರು ತಿಂಗಳ ಪರಿಶ್ರಮದ ಯೋಜನೆಯ ಮೂಲಕ ಪ್ರತಿ ತಾಲೂಕಿನಲ್ಲಿಯೂ 10 ರಿಂದ 12 ಕೇಂದ್ರಗಳನ್ನು ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿ ರೂಪಿಸಿ ಕಳೆದ ಜನವರಿಯಲ್ಲಿ ಘೋಷಣೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗುರಿ ನೀಡಲಾಗಿದೆ. ಜತೆಗೆ ಆಯಾ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಮತ್ತು ಸಹಾಯಕರಿಗೆ ಜವಾಬ್ದಾರಿ ವಹಿಸಲಾಗಿದೆ.
ಮಾದರಿ ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ 10 ಮಕ್ಕಳಾದರೂ ಇರಬೇಕು. ಸ್ವಚ್ಛ, ಸುರಕ್ಷಿತ, ಸುಸಜ್ಜಿತ ಮತ್ತು ಮಕ್ಕಳಿಗೆ ಸ್ನೇಹಪೂರ್ವವಾಗಿರಬೇಕು. ಸರಿಯಾದ ಬೆಳಕು, ಗಾಳಿ, ಕುಡಿಯುವ ನೀರು ಇರಬೇಕು. ದೈನಂದಿನ ಶಾಲಾ ಪೂರ್ವ ಚಟುವಟಿಕೆ ವೇಳಾಪಟ್ಟಿ ಅನುಸರಣೆ, ಆಟ ಆಧರಿತ ಕಲಿಕೆ ವಿಧಾನ, ಸ್ವಚ್ಛತೆ ಅಭ್ಯಾಸಗಳು, ಕೈ ತೋಟ ಇರಬೇಕು. ಆಸಕ್ತಿಯುಳ್ಳ ಕ್ರಿಯಾಶೀಲ ಅಂಗನವಾಡಿ ಟೀಚರ್, ಸಹಾಯಕಿ, ಪಾಲಕರು ಮತ್ತು ಸಮುದಾಯದ ಭಾಗವಹಿಸುವಿಕೆ, ಮಕ್ಕಳ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು.
ಶಾಲಾ ಪೂರ್ವ ಶಿಕ್ಷಣಕ್ಕೆ ಆದ್ಯತೆ:
ಕಾನ್ವೆಂಟ್ ಮಾದರಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ‘ಮಕ್ಕಳ ಜಾಗೃತಿ ಸಂಸ್ಥೆ’ಯಿಂದ ನುರಿತ ಶಿಕ್ಷಣ ತಜ್ಞರ ಮೂಲಕ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಮತ್ತು ಸಹಾಯಕರಿಗೆ ತರಬೇತಿ ನೀಡಲಾಗುತ್ತಿದೆ.
ಗುಣಮಟ್ಟದ ಶಾಲಾ ಪೂರ್ವ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ. ಈ ಮೂಲಕ ಕಾನ್ವೆಂಟ್ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಅಂಗನವಾಡಿಗಳಲ್ಲಿ ಸಿಗುವಂತೆ ಮಾಡಲಾಗುತ್ತಿದೆ.
ಮಕ್ಕಳಿಗೆ ಓದುವುದು ಮತ್ತು ಬರೆಯುವುದನ್ನು ಕಲಿಸುವುದರೊಂದಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಮಟ್ಟಿಗೆ ಪ್ರೇರಣೆ ನೀಡಲಾಗುತ್ತಿದೆ. ಮಕ್ಕಳಿಗೆ ತರಬೇತಿ ನೀಡಲು ಶಿಕ್ಷಕರನ್ನು ಅಣಿಗೊಳಿಸಲಾಗುತ್ತದೆ.
ವೃತ್ತವಾರು ಮಾದರಿ ಕೇಂದ್ರ: ಬಿಳಿಗೆರೆ-11, ನಂಜನಗೂಡು-11, ಮೈಸೂರು ತಾಲೂಕು-13, ತಿ.ನರಸೀಪುರ-13
ಕೆ.ಆರ್.ನಗರ-11, ಮೈಸೂರು ನಗರ-10, ಹುಣಸೂರು-13, ಪಿರಿಯಾಪಟ್ಟಣ-13, ಎಚ್.ಡಿ.ಕೋಟೆ-13
ವರ್ಷಾಂತ್ಯದೊಳಗೆ ಮಾದರಿ ಕೇಂದ್ರ
ವರ್ಷಾಂತ್ಯದೊಳಗೆ ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿಸಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಪ್ರಥಮ ಹಂತದಲ್ಲಿ 108 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ಕೇಂದ್ರಗಳನ್ನಾಗಿ ಮಾಡಲಾಗಿದೆ.
ಸಿ.ಬಸವರಾಜು, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net