ಮೈಸೂರಿನ ವಿವೇಕಸ್ಮಾರಕ ಯುವ ಜನಾಂಗಕ್ಕೆ ಆದರ್ಶ ಕೇಂದ್ರ: ಸ್ವಾಮಿಮುಕ್ತಿದಾನಂದ ಮಹಾರಾಜ್

ಮೈಸೂರಿನ ವಿವೇಕಸ್ಮಾರಕ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭಿಕರು
ಮೈಸೂರಿನ ವಿವೇಕಸ್ಮಾರಕ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭಿಕರು
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮವನ್ನು ಪಾಲಿಸಬೇಕು ಎನ್ನುವ ದೇವರ ನಿಯಮದಲ್ಲಿ ಅಂತಿಮವಾಗಿ ಗೆಲುವು ಸಾಧಿಸುತ್ತದೆ
  • ಸ್ವಾಮಿ ವಿವೇಕಾನಂದರ ಶಿಕಾಗೋ ಪ್ರವಾಸಕ್ಕೆ ಮೈಸೂರು ಸಂಸ್ಥಾನದ ನೆರವಿತ್ತು

ಮೈಸೂರು:

ಹಲವು ಅಡೆತಡೆಗಳ ನಡುವೆ ಉದ್ಘಾಟನೆಗೊಂಡ ವಿವೇಕ ಸ್ಮಾರಕವನ್ನು ಯುವ ಜನಾಂಗಕ್ಕೆ ಆದರ್ಶ ಕೇಂದ್ರವನ್ನಾಗಿ ಮುನ್ನಡೆಸುವ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿಮುಕ್ತಿದಾನಂದ ಮಹಾರಾಜ್ ಹೇಳಿದರು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಿದ ವಿವೇಕ ಸ್ಮಾರಕಕ್ಕೆ ಸಹಕಾರ ನೀಡಿದವರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಒಳ್ಳೆಯ ಕೆಲಸಗಳು ಅಗಬೇಕಾದ ಅಡಚಣೆಗಳು ಅಗುವುದು ಸಹಜ. ಆದರೆ ಧರ್ಮವನ್ನು ಪಾಲಿಸಬೇಕು ಎನ್ನುವ ದೇವರ ನಿಯಮದಲ್ಲಿ ಅಂತಿಮವಾಗಿ ಗೆಲುವು ಸಾಧಿಸುತ್ತದೆ. ಹಾಗೆಯೇ ವಿವೇಕ ಸ್ಮಾರಕ ನಿರ್ಮಾಣದಲ್ಲಿಯೂ ಸಾಕಷ್ಟು ಅಡಚಣೆಗಳು ಎದುರಾಗಿದ್ದರೂ ಅಂತಿಮವಾಗಿ ಭವ್ಯವಾದ ಸ್ಮಾರಕ ತಲೆಎತ್ತಿ ನಿಂತಿದೆ ಎಂದರು.
ಸ್ವಾಮಿ ವಿವೇಕಾನಂದರು ಶಿಕಾಗೋ ಧರ್ಮ ಸಮ್ಮೇಳನಕ್ಕೆ ತೆರಳಲು ಮೈಸೂರು ಸಂಸ್ಥಾನ ನೆರವು ನೀಡಿತ್ತು. ಹೀಗಾಗಿಯೆ ವಿವೇಕಾನಂದರಿಗೆ ಮೈಸೂರು, ರಾಜರ ಕುರಿತು ವಿಶೇಷ ಗೌರವ ಇತ್ತು. ಶ್ರೀಜಯಚಾಮರಾಜ ಒಡೆಯರ್ ಅವರು ಕಾಲವಾದಾಗ ಅವರ ಕುರಿತು ವಿವೇಕಾನಂದರು, ಶೇಷಾದ್ರಿ ಅಯ್ಯರ್ ಅವರಿಗೆ ಬರೆದ ಪತ್ರದಲ್ಲಿ ಅದನ್ನು ಕಾಣಬಹುದು ಎಂದು ಹೇಳಿದರು.
ಮೈಸೂರಿನಲ್ಲಿ ಸುಮಾರು ವಾರಗಳ ಕಾಲ ಉಳಿದುಕೊಂಡಿದ್ದ ಸ್ಥಳ ನಿರ್ಲಕ್ಷೃಕ್ಕೆ ಒಳಗಾಗಿತ್ತಲ್ಲದೇ, ಕೆಲವರು ಜಾಗವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ ಐತಿಹಾಸಿ ಈ ಸ್ಥಳವನ್ನು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಉಳಿಯುವಂತೆ ಹಲವು ಮಾಡಿದ ಪ್ರಯತ್ನದಿಂದಾಗಿ ರಾಮಕೃಷ್ಣ ಆಶ್ರಮಕ್ಕೆ ಅದರ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ ಎಂದರು.
ಸರ್ಕಾರದ ನಂಬಿಕೆ, ಸ್ವಾಮಿ ವಿವೇಕಾನಂದರ ಆದರ್ಶವನ್ನು ಉಳಿಸಿಕೊಂಡು ಯುವ ಜನಾಂಗಕ್ಕೆ ಧರ್ಮದ ಮಹತ್ವ, ರಾಷ್ಟ್ರಪ್ರೇಮವನ್ನು ಬಿತ್ತುವ ಕೆಲಸವನ್ನು ಮಾಡಬೇಕಿದೆ. ಇಂತಹ ಜವಾಬ್ದಾರಿ, ಸವಾಲು ಈಗ ನಮ್ಮ ಮುಂದೆ ಇದ್ದು, ಮುಂದೆ ಕಾರ್ಯಕ್ರಮಗಳು ಸರಾಗವಾಗಿ ಮುನ್ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯವಿದೆ. ಸ್ಮಾರಕ ನಿರ್ಮಾಣಕ್ಕೆ ಕೈ ಜೋಡಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ವಿಧಾನಪರಿಷತ್ತಿನ ಮಾಜಿ ಸದಸ್ಯ ಗೋ. ಮಧುಸೂದನ್ ಮಾತನಾಡಿ, ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದಿದ್ದರು ಎನ್ನುವ ಕುರುಹುವಾಗಿ ಈಗ ಅವರು ಉಳಿದುಕೊಂಡಿದ್ದ ಜಾಗದಲ್ಲಿ ಯುವ ಕೇಂದ್ರ ಎದ್ದು ನಿಂತಿದೆ. ಇದರ ಮೂಲಕ ವಿವೇಕಾನಂದರ ತತ್ತ್ವಾದರ್ಶವನ್ನು ಯುವ ಜನಾಂಗಕ್ಕೆ ತಿಳಿಸುವ ಕೆಲಸ ಅಗಲಿದೆ ಎಂದರು.
ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನಕೈಗೊಂಡ ಬಳಿಕ ಕಟ್ಟಡ ನಿರ್ಮಿಸಲು ರಾಮಕೃಷ್ಣ ಆಶ್ರಮದ ಸಮ್ಮತಿಸಿದೆ ಎನ್ನುವ ಗುಲ್ಲು ಹರಡಿತ್ತು. ಆದರೆ ಸರ್ಕಾರ ಯಾವುದೇ ಷರತ್ತು ಇಲ್ಲದೇ ವಿವೇಕ ಸ್ಮಾರಕ ನಿರ್ಮಾಣಕ್ಕೆ ಜಾಗವನ್ನು ಹಸ್ತಾಂತರಿಸಿದೆ ಎಂದರು.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮಹಾರಾಣಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಎನ್‌ಟಿಎಂಎಸ್ ಶಾಲೆ, ಡಿ.ದೇವರಾಜ ಅರಸು ರಸ್ತೆಯ ಬಳಿ ಇರುವ ದೇವರಾಜ ಶಾಲೆಗೆ ಅಗತ್ಯ ಸೌಲಭ್ಯವನ್ನು ಆಶ್ರಮದಿಂದ ಒದಗಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ವಕೀಲ ಅರುಣ್‌ಕುಮಾರ್ ಮಾತನಾಡಿ, ಕನ್ನಡ ಶಾಲೆಯ ಹೆಸರಿನಲ್ಲಿ ಕೆಲವರು ಸ್ವಾರ್ಥ ಸಾಧನೆಗಾಗಿ ಹೋರಾಟ ಮಾಡಿದರು. ಅವರಿಗೆ ನಿಜವಾಗಿ ಕಾಳಜಿ ಇದ್ದಿದ್ದರೆ 2024ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮುಚ್ಚಿರುವ 3600 ಶಾಲೆಗಳ ಪರ ಯಾಕೆ ಧ್ವನಿ ಎತ್ತಲಿಲ್ಲ ಎಂದರು.
ಹೋರಾಟ ಮಾಡಿದ್ದರಿಗೆ ನಿಜವಾದ ಕಾಳಜಿಗಿಂತ ಸ್ವಾರ್ಥಸಾಧನೆಯೇ ಪ್ರಧಾನವಾಗಿತ್ತು. ಅದಕ್ಕೆಲ್ಲಾ ಈಗ ಸ್ವಾಮಿ ವಿವೇಕಾನಂದ ಸ್ಮಾರಕ ತಲೆ ಎತ್ತಿನಿಂತಿದ್ದು, ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಮೂಲಕ ಉತ್ತರ ನೀಡಬೇಕಿದೆ ಎಂದು ಹೇಳಿದರು.
ಉದ್ಯಮಿಗಳಾದ ರವಿಕಿರಣ್, ಡಾ.ಎನ್.ಎಸ್.ಶ್ರೀನಾಥ್, ಆಶ್ರಮದ ಸ್ವಾಮಿ ಯುಕ್ತೇಶಾನಂದ ಮಹಾರಾಜ್ ಇತರರು ಇದ್ದರು.
-----------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net