ಮೈಸೂರು: ಅಂಬೇಡ್ಕರ್ ಅವರ ತತ್ವ-ಸಿದ್ಧಾಂತ ಇಂದಿಗೂ ಜೀವಂತವಾಗಿದ್ದು, ಅವರ ಪ್ರತಿಪಾದನೆಗಳು ಭಾರತ ಸಂವಿಧಾನದ ಮೂಲಕ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿವೆ ಎಂದು ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಹೇಳಿದರು.
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ತಮ್ಮ ಕಡುಕಷ್ಟಗಳು ಹಾಗೂ ತಾವು ಎದುರಿಸಿದ ಸವಾಲು ಮೆಟ್ಟಿನಿಂತು ಸಾಮಾಜಿಕ ನ್ಯಾಯದ ಹರಿಕಾರರಾದರು. ಅವರ ಬದುಕು ಒಂದು ತೆರೆದ ಪುಸ್ತಕ. ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
19ನೇ ಶತಮಾನದ ಪ್ರಸಿದ್ಧ ಸಮಾಜ ಸುಧಾರಕರಾದ ಜ್ಯೋತಿ ಬಾಫುಲೆ ಅವರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯ ಹಾದಿಯನ್ನು 20ನೇ ಶತಮಾನದಲ್ಲಿ ಮುಂದುವರಿಸಿದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸಿದರು. ನಮ್ಮ ಸಂವಿಧಾನವು ಇಡೀ ವಿಶ್ವದಲ್ಲೇ ಒಂದು ಬೃಹತ್ ನಮ್ಯ ಹಾಗೂ ಅನಮ್ಯ ಸಂವಿಧಾನವೆಂಬ ಹೆಗ್ಗಳಿಕೆ ಪಡೆಯುವಂತೆ ಮಾಡಿದರು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ಅಂಬೇಡ್ಕರ್ ಅವರು ಇಡೀ ವಿಶ್ವದಲ್ಲೇ ಅತಿ ಹೆಚ್ಚು ಪದವಿ ಪಡೆದ ಏಕೈಕ ಭಾರತೀಯರು. ಇದು ಅವರ ಜ್ಞಾನ ಶ್ರೀಮಂತಿಕೆಯ ಸಾಕ್ಷಿ. ತಮ್ಮ ಜೀವನದ ಅಂತಿಮ ಘಟ್ಟದ ಘಟನಾವಳಿಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ನಿಷ್ಪಕ್ಷಪಾತ ಹಾಗೂ ನ್ಯಾಯದ ಪರವಾಗಿದ್ದ ಅವರು ಎಂದಿಗೂ ಉನ್ನತ ಹುದ್ದೆ ಬಯಸಿದವರಲ್ಲ. ಭಾರತ ಸಂವಿಧಾನದ ರಚನೆಯ ಸಂದರ್ಭದಲ್ಲಿ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಅಂಬೇಡ್ಕರ್ ಹೆಸರೇ ಮುಂಚೂಣಿಯಲ್ಲಿತ್ತು. ಕರಡು ಸಮಿತಿಯ ಅಧ್ಯಕ್ಷತೆಯನ್ನು ವಹಿಸಲು ಅಂಬೇಡ್ಕರ್‌ಗಿಂತ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಡಾ.ರಾಜೇಂದ್ರ ಪ್ರಸಾದ್ ಹೇಳಿದ್ದರು. ಸರ್ವ ರೀತಿಯಲ್ಲೂ ಭಾರತದ ಸಂವಿಧಾನ ರಚನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿ ನ್ಯಾಯ ಒದಗಿಸಿದರು ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅವರು ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಭಾರತದ ಭೌಗೋಳಿಕ ಹಿನ್ನೆಲೆ, ಇತಿಹಾಸ ಹಾಗೂ ಸಂಸ್ಕೃತಿಗೆ ಸರಿ ಹೊಂದುವ ಲಿಖಿತ ಹಾಗೂ ಅಲಿಖಿತ ಸಂವಿಧಾನ ರಚಿಸಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದರು.
ನಾನು ನೀಡಿರುವ ಸಂವಿಧಾನವು ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ಸಾಗಬೇಕೆಂಬ ಆಶಯ ಹೊಂದಿದ್ದರು. ಯಾವ ಧರ್ಮವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುತ್ತದೆಯೋ ಅದೇ ನಿಜವಾದ ಧರ್ಮ ಎಂದರು.
ಶೈಕ್ಷಣಿಕ ಡೀನ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್.ಶ್ರೀಧರ, ಎನ್‌ಸಿಸಿ ಫ್ಲೈಯಿಂಗ್ ಆಫೀಸರ್ ಡಾ.ಪಿ.ಜಿ.ಪುಷ್ಪರಾಣಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಜಿ.ದೊಡ್ಡರಸಯ್ಯ ಇನ್ನಿತರರಿದ್ದರು.